ಅಮರನಾಥ ಯಾತ್ರಿಕರ ರಕ್ಷಣೆಗಾಗಿ ಆಪರೇಷನ್ ಶಿವ ಆರಂಭಿಸಿದ ಭಾರತೀಯ ಸೇನೆ
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ದೇಶದಲ್ಲಿ ಹೆಚ್ಚು ಜನ ಸೇರುವ ಕಡೆ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಜಮ್ಮು ಕಾಶ್ಮೀರದಲ್ಲೇ ಇರುವ ಅಮರನಾಥ ಯಾತ್ರೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಿಂದೂಗಳ ಪವಿತ್ರ ಸ್ಥಳವಾದ ಅಮರನಾಥನ ದರ್ಶನದ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸಬಾರದು ಎಂಬ ಕಾರಣಕ್ಕೆ ಭಾರತೀಯ ಸೇನೆ ಆಪರೇಷನ್ ಶಿವ ಆರಂಭಿಸಿದೆ. ಈ ಮೂಲಕ ಭಕ್ತಾದಿಗಳ ರಕ್ಷಣೆಗೆ ಹೆಚ್ಚಿನ ಎಚ್ಚರ ವಹಿಸಲಾಗುವುದು.

ನವದೆಹಲಿ, ಜೂನ್ 7: 2025ರ ಅಮರನಾಥ ಯಾತ್ರೆಗೆ ಸಂಪೂರ್ಣ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸೇನೆಯು ‘ಆಪರೇಷನ್ ಶಿವ’ವನ್ನು ಪ್ರಾರಂಭಿಸಿದೆ. ಜುಲೈ 3ರಂದು ಪ್ರಾರಂಭವಾಗಲಿರುವ 38 ದಿನಗಳ ಕಾಲ ನಡೆಯುವ ಅಮರನಾಥ ಯಾತ್ರೆಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಭಾರತೀಯ ಸೇನೆಯು ಸಮಗ್ರ ಭದ್ರತಾ ದೃಷ್ಟಿಯಿಂದ ಆಪರೇಷನ್ ಶಿವವನ್ನು ಪ್ರಾರಂಭಿಸಿದೆ. ಪಹಲ್ಗಾಮ್ ದಾಳಿ ಬೆನ್ನಲ್ಲೇ ಅಮರನಾಥ ಯಾತ್ರೆಯ ಯಾತ್ರಿಕರಿಗೆ ಹೆಚ್ಚು ಭದ್ರತೆ ಕಲ್ಪಿಸುವ ಉದ್ದೇಶದಿಂದ ಭಾರತೀಯ ಸೇನೆ, ಸಿಆರ್‌ಪಿಎಫ್ ಹಾಗೂ ಕಾಶ್ಮೀರ ಪೊಲೀಸ್ ಇಲಾಖೆ ಜಂಟಿಯಾಗಿ `ಆಪರೇಷನ್ ಶಿವ’ (Operation Shiva) ಯೋಜನೆಯನ್ನು ಜಾರಿಗೆ ತಂದಿದೆ.
ಈ ವಾರ್ಷಿಕ ತೀರ್ಥಯಾತ್ರೆಯು 3,888 ಮೀಟರ್ ಎತ್ತರದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಪವಿತ್ರ ಅಮರನಾಥ ಗುಹಾ ದೇವಾಲಯಕ್ಕೆ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಆಪರೇಷನ್ ಶಿವ’ ಅಮರನಾಥ ಯಾತ್ರಿಕರಿಗೆ ಹೆಜ್ಜೆ ಹೆಜ್ಜೆಗೂ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಮಾಡಲು ಅನುಕೂಲ ಮಾಡಿಕೊಡಲಿದೆ. ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭಗೊಳ್ಳಲಿದ್ದು ಆಗಸ್ಟ್ 9ಕ್ಕೆ ಮುಗಿಯಲಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 14 ದಿನಗಳು ಯಾತ್ರೆಯ ಅವಧಿ ಕಡಿಮೆಯಾಗಲಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಸಿಂಧೂ ನದಿ ನೀರನ್ನು ತಿರುಗಿಸಲು ಪೂರ್ವ ಸಿದ್ಧತೆ ಚುರುಕುಗೊಳಿಸಿದ ಭಾರತ
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಸೇರಿದಂತೆ ಇತ್ತೀಚಿನ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ, ಸೇನೆಯು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF ಗಳು), ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಶ್ರೀ ಅಮರನಾಥಜಿ ದೇವಾಲಯ ಮಂಡಳಿ (SASB) ಯೊಂದಿಗೆ ಸಮನ್ವಯದೊಂದಿಗೆ ಯಾತ್ರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಲವಾದ ಕ್ರಮಗಳನ್ನು ನಿಯೋಜಿಸಿದೆ. “ಆಪರೇಷನ್ ಶಿವ” ತಂಡ CRPF, BSF, SSB, ITBP ಮತ್ತು CISF ನ ಘಟಕಗಳನ್ನು ಒಳಗೊಂಡಂತೆ 42 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಒಳಗೊಂಡಿದೆ. ಇವು ಪಹಲ್ಗಾಮ್ ಮತ್ತು ಬಾಲ್ಟಾಲ್ ಎಂಬ ಎರಡು ಪ್ರಮುಖ ಯಾತ್ರಾ ಮಾರ್ಗಗಳಲ್ಲಿ ಕಾರ್ಯತಂತ್ರದ ಸ್ಥಳಗಳಲ್ಲಿ ನೆಲೆಗೊಂಡಿವೆ. ಈ ಕಾರ್ಯಾಚರಣೆಯು ಅಮರನಾಥ ದೇವಾಲಯದ ಮಾರ್ಗಗಳ ತೆರವು, ಡ್ರೋನ್ ಕಣ್ಗಾವಲು, ಸಿಸಿಟಿವಿ ಮೇಲ್ವಿಚಾರಣೆ ಮತ್ತು ಮೂರು ಹಂತದ ಭದ್ರತಾ ವ್ಯವಸ್ಥೆಯ ಭಾಗವಾಗಿ ಗುಂಡು ನಿರೋಧಕ ವಾಹನಗಳ ನಿಯೋಜನೆ ಸೇರಿದಂತೆ ಸುಧಾರಿತ ಭದ್ರತಾ ಪ್ರೋಟೋಕಾಲ್‌ಗಳನ್ನು ಒಳಗೊಂಡಿದೆ.
ಇದನ್ನೂ ಓದಿ: Amarnath Yatra 2025: ಜುಲೈ 3 ರಿಂದ ಅಮರನಾಥ ಯಾತ್ರೆ ಆರಂಭ; ನೋಂದಣಿ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ
ಸುಧಾರಿತ ಭದ್ರತಾ ತಂತ್ರಜ್ಞಾನ, ಸಿಸಿಟಿವಿ, ಜಾಮರ್‌ಗಳ ಅಳವಡಿಕೆ, ಡ್ರೋನ್ ಕ್ಯಾಮೆರಾ, ಸಶಸ್ತ್ರ ಪಡೆ ಕಣ್ಗಾವಲು ಸೇರಿದಂತೆ ಗರಿಷ್ಠ ಮಟ್ಟದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸುಮಾರು 50,000 ಅರೆಸೇನಾಪಡೆ ಸಿಬ್ಬಂದಿ ಮತ್ತು ಕಾಶ್ಮೀರದ ಪೊಲೀಸರು ದಿನವೂ ಸ್ಫೋಟಕಗಳ ಪತ್ತೆ ಕಾರ್ಯಾಚರಣೆ ನಡೆಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ