Video: ಜರ್ಮನಿಯಲ್ಲಿ ಬಾಲಕನ ಹಾಡು ಕೇಳಿ ಫುಲ್​ ಖುಷಿಯಾದ ಪ್ರಧಾನಿ ಮೋದಿ

ಇಂದು ಸಂಜೆ ಏಳುಗಂಟೆ ಹೊತ್ತಿಗೆ ಬರ್ಲಿನ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್​ ಚಾನ್ಸಲರ್​ ಓಲಾಫ್​ ಸ್ಕೋಲ್ಜ್​ ಸೇರಿ, ಭಾರತ-ಜರ್ಮನಿ ಆಂತರಿಕ ಸಚಿವಾಲಯದ ಸಮಾಲೋಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Video: ಜರ್ಮನಿಯಲ್ಲಿ ಬಾಲಕನ ಹಾಡು ಕೇಳಿ ಫುಲ್​ ಖುಷಿಯಾದ ಪ್ರಧಾನಿ ಮೋದಿ
ಹಾಡು ಹೇಳಿದ ಬಾಲಕನನ್ನು ಮುದ್ದಿಸಿದ ಪ್ರಧಾನಿ ಮೋದಿ
Updated By: Digi Tech Desk

Updated on: May 02, 2022 | 1:38 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜರ್ಮನಿಗೆ ತೆರಳಿದ್ದಾರೆ. ಅವರು ಯುರೋಪ್​​ನ ಮೂರು ದೇಶಗಳ ಪ್ರವಾಸಕ್ಕೆ ತೆರಳಿದ್ದು, ಇಂದು ಬರ್ಲಿನ್​​ನಲ್ಲಿ ಲ್ಯಾಂಡ್ ಆಗಿದ್ದಾರೆ. ಅದಾದ ಮೇಲೆ ಡೆನ್ಮಾರ್ಕ್ ಮತ್ತು ಫ್ರಾನ್ಸ್​ಗೆ ಭೇಟಿ ನೀಡಿ, ಭಾರತಕ್ಕೆ ವಾಪಸ್ ಬರಲಿದ್ದಾರೆ.  ಈ ಮೂರು ದೇಶಗಳೊಂದಿಗೆ ವ್ಯಾಪಾರ, ಇಂಧನ ಮತ್ತು ಹಸಿರು ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತದ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಬರ್ಲಿನ್​ನ ಬ್ರ್ಯಾಂಡನ್​​ಬರ್ಗ್​ ಏರ್​ಪೋರ್ಟ್​​ನಲ್ಲಿ ಲ್ಯಾಂಡ್ ಆಗಿ ಅಲ್ಲಿಂದ ಹೊಟೆಲ್​ ಹೊಡ್ಲೆನ್​ ಕೆಂಪಿನ್ಸ್ಕಿಗೆ ತೆರಳಿದರು. ಈ ವೇಳೆ  ಅಲ್ಲಿ ಕೆಲವು ಭಾರತೀಯ ಮೂಲದವರು ಪ್ರಧಾನಿ ಮೋದಿಗಾಗಿ ಕಾಯುತ್ತಿದ್ದರು. ನರೇಂದ್ರ ಮೋದಿ ಹೋಟೆಲ್ ತಲುಪುತ್ತಿದ್ದಂತೆ  ಭಾರತೀಯ ಮೂಲದವರು ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ವಂದೇ ಮಾತರಂ, ಭಾರತ್​ ಮಾತಾ ಕಿ ಜೈ ಘೋಷಣೆಯನ್ನು ಕೂಗಿದ್ದಾರೆ. ಕೆಲವರು  ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗೆ ನಮಸ್ಕಾರ ಮಾಡಿದ್ದಾರೆ.

ಅಲ್ಲಿದ್ದ ಮಕ್ಕಳೊಂದಿಗೆ ಕೂಡ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಪುಟ್ಟ ಹುಡುಗಿಯ ತಲೆ ಮುಟ್ಟಿ ಮಾತನಾಡಿಸಿದ್ದಾರೆ.  ಹಾಗೇ ಇನ್ನೊಬ್ಬ ಬಾಲಕಿ ಪ್ರಧಾನಿಗೆ ಏನನ್ನೋ ತೋರಿಸಿದ್ದನ್ನೂ ವಿಡಿಯೋದಲ್ಲಿ ನೋಡಬಹುದು. ಬಾಲಕನೊಬ್ಬ ಪ್ರಧಾನಿಯವರ ಎದುರು ನಿಂತು ದೇಶ ಭಕ್ತಿಯ ಹಾಡನ್ನು ಹಾಡಿ ಶಹಭಾಷ್​ ಎನ್ನಿಸಿಕೊಂಡಿದ್ದಾನೆ. ಪುಟ್ಟ ಹುಡುಗ ಹಾಡು ಹಾಡುವುದನ್ನು ಚಿಟಿಕೆ ಹೊಡೆಯುತ್ತ ಕೇಳಿದ ಪ್ರಧಾನಿ, ಹಾಡು ಮುಗಿಯುತ್ತಿದ್ದಂತೆ ತುಂಬ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಬಾಲಕನ ಕೆನ್ನೆ ಹಿಡಿದು ಮುದ್ದು ಮಾಡಿದ್ದಾರೆ. ಈ ವಿಡಿಯೋವನ್ನು ನರೇಂದ್ರ ಮೋದಿಯವರು ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ.

ಇಂದು ಸಂಜೆ ಏಳುಗಂಟೆ ಹೊತ್ತಿಗೆ ಬರ್ಲಿನ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್​ ಚಾನ್ಸಲರ್​ ಓಲಾಫ್​ ಸ್ಕೋಲ್ಜ್​ ಸೇರಿ, ಭಾರತ-ಜರ್ಮನಿ ಆಂತರಿಕ ಸಚಿವಾಲಯದ ಸಮಾಲೋಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಅದಾದ ಬಳಿಕ ರಾತ್ರಿ 8ಗಂಟೆ ನಂತರ ಪ್ರಧಾನಿ ನರೇಂದ್ರ ಮೋದಿ ಬರ್ಲಿನ್​​ನಲ್ಲಿರುವ ಭಾರತೀಯರೊಂದಿಗೆ ಸಂವಾದ ನಡೆಸುವರು. ಅಂದಹಾಗೇ, ಇದು ಪ್ರಧಾನಿ ನರೇಂದ್ರ ಮೋದಿಯವರ 2022ನೇ ವರ್ಷದ ಮೊದಲ ವಿದೇಶ ಪ್ರವಾಸವಾಗಿದೆ. ಜರ್ಮನಿಯಿಂದ ನಾಳೆ (ಮೇ 3) ಡೆನ್ಮಾರ್ಕ್​ಗೆ ತೆರಳಲಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ಲೀಕ್​ ಆಯ್ತು ಮಹೇಶ್​ ಬಾಬು ಹೊಸ ಸಿನಿಮಾದ ದೃಶ್ಯಗಳು; ಫ್ಯಾನ್ಸ್​ ಗರಂ

Published On - 1:28 pm, Mon, 2 May 22