ಉಕ್ರೇನ್ ರಾಜಧಾನಿ ಕೀವ್ನಲ್ಲಿ ರಷ್ಯಾ ಸೇನೆಯ ಗುಂಡಿನ ದಾಳಿಯಿಂದ ಗಾಯಗೊಂಡಿರುವ ಬಾರತದ ವಿದ್ಯಾರ್ಥಿ ಹರ್ಜೋತ್ ಸಿಂಗ್ರನ್ನು ಈಗಾಗಲೇ ಪೋಲ್ಯಾಂಡ್ ಗಡಿಯವರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಭಾರತದ ವಿಮಾನ ಹತ್ತಿಸಲಾಗಿದೆ. ಸ್ಟ್ರೆಚರ್ ಮೇಲೆ ಮಲಗಿದ್ದ ಅವರನ್ನು ಆಂಬುಲೆನ್ಸ್ ಮೂಲಕ ಪೋಲ್ಯಾಂಡ್ ಗಡಿಗೆ ಕರೆದುಕೊಂಡು ಬರಲಾಗಿದೆ. ಕೀವ್ನಿಂದ ಪೋಲ್ಯಾಂಡ್ ಬರೋಬ್ಬರಿ 700 ಕಿಮೀಗಳಷ್ಟು ದೂರ ಇದ್ದು, ಆಂಬುಲೆನ್ಸ್ನಲ್ಲಿ ಕರೆದುಕೊಂಡು ಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಹೀಗಿದ್ದಾಗ್ಯೂ ಚಾಲಕ ತುಂಬ ಜಾಗರೂಕತೆಯಿಂದ ವಾಹನ ಚಾಲನೆ ಮಾಡಿ, ಹರ್ಜೋತ್ ಸಿಂಗ್ರಿಗೆ ಯಾವುದೇ ತೊಂದರೆಯಾಗದಂತೆ ನೆರೆರಾಷ್ಟ್ರದ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದಾನೆ. ಆ ಚಾಲಕನನ್ನು ಉಕ್ರೇನ್ನಲ್ಲಿರುವ ಭಾರತೀಯರ ರಾಯಭಾರಿ ಕಚೇರಿ ಪ್ರಶಂಸಿಸಿದೆ.
ಹೀಗೆ 700 ಕಿಮೀ ಕ್ರಮಿಸುವಾಗ ಎದುರಾದ ಕಷ್ಟಗಳ ಬಗ್ಗೆಯೂ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ. ಯುದ್ಧ ವಲಯದಲ್ಲೆಲ್ಲ ಬಾಂಬ್ ದಾಳಿ, ಶೆಲ್ಲಿಂಗ್ ದಾಳಿ ಆಗುತ್ತಿದೆ. ಇಂಧನ ಕೊರತೆಯ ಅಪಾಯ ಇತ್ತು. ರಸ್ತೆಗಳು ಬ್ಲಾಕ್ ಆಗಿದ್ದವು. ಅಷ್ಟೇ ಅಲ್ಲ, ಟ್ರಾಫಿಕ್ ಜಾಮ್ ಸಮಸ್ಯೆಯೂ ಇತ್ತು. ಇನ್ನೂ ಹಲವು ರೀತಿಯ ನಿರ್ಬಂಧಗಳನ್ನು ಹೇರಲಾಗಿದೆ. ಅದೆಲ್ಲದರ ಮಧ್ಯೆ ಹರ್ಜೋತ್ ಸಿಂಗ್ರನ್ನು 700 ಕಿಮೀ ದೂರದ ಪೋಲ್ಯಾಂಡ್ ಗಡಿಯಾದ ಬೊಡೊಮಿಯರ್ಜ್ಗೆ ಸ್ಥಳಾಂತರ ಮಾಡಲಾಯಿತು. ಎಲ್ಲ ಅಡೆತಡೆಗಳನ್ನೂ ಮೀರಿ ಹರ್ಜೋತ್ರನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋದ ಭಾರತೀಯ ರಾಯಭಾರಿ ಕಚೇರಿಯ ಉಕ್ರೇನ್ ಚಾಲಕನಿಗೆ ಧನ್ಯವಾದಗಳು ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.
ಸದ್ಯ ಹರ್ಜೋತ್ ಸಿಂಗ್(31) ಅವರು ಸಿ-17 ವಾಯು ಪಡೆ ವಿಮಾನದ ಮೂಲಕ ದೆಹಲಿ ಬಳಿಯ ಹಿಂಡನ್ ಏರ್ಫೋರ್ಸ್ ಸ್ಟೇಶನ್ಗೆ ತಲುಪಿದ್ದಾರೆ. ನಿನ್ನೆ ಪೋಲ್ಯಾಂಡ್ ಏರ್ಪೋರ್ಟ್ ತಲುಪಿದ್ದ ಅವರನ್ನು ಕೇಂದ್ರ ಸಚಿವ ವಿ.ಕೆ.ಸಿಂಗ್ ಭೇಟಿಯಾಗಿದ್ದರು. ಯುದ್ಧ ಪೀಡಿತ ಉಕ್ರೇನ್ನಿಂದ ಆಪರೇಷನ್ ಗಂಗಾ ಮೂಲಕ ಈಗಾಗಲೇ 83 ವಿಮಾನಗಳಿಂದ 17,100 ಭಾರತೀಯರನ್ನು ಕರೆ ತಂದಿದೆ. ಉಕ್ರೇನ್ ವಾಯು ಮಾರ್ಗ ಬಂದ್ ಆಗಿರುವ ಕಾರಣ, ಅಲ್ಲಿರುವ ಭಾರತೀಯರನ್ನು ನೆರೆ ರಾಷ್ಟ್ರಗಳಾದ ರೊಮೇನಿಯಾ, ಪೋಲ್ಯಾಂಡ್, ಹಂಗೇರಿ, ಸ್ಲೊವಾಕಿಯಾ, ಮೊಲ್ಡೊವಾಗಳಿಗೆ ತಲುಪುವಂತೆ ಮಾಡಿ, ಅಲ್ಲಿಂದ ವಿಮಾನ ವ್ಯವಸ್ಥೆ ಮಾಡಿದೆ. ಭಾರತೀಯ ವಾಯುಪಡೆಯ ವಿಮಾನಗಳೂ ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ.
ಇದನ್ನೂ ಓದಿ: ಗೋವಾದಲ್ಲಿ ಪಕ್ಷಾಂತರ ಭೀತಿ: ತಮ್ಮ ಅಭ್ಯರ್ಥಿಗಳನ್ನು ರೆಸಾರ್ಟ್ಗೆ ಕರೆದೊಯ್ದ ಕಾಂಗ್ರೆಸ್
Published On - 5:07 pm, Tue, 8 March 22