ಗಡಿಯಲ್ಲಿ ಭಾರತೀಯ ವಾಯುಪಡೆಯಿಂದ 17 ದಿನಗಳ ಬೃಹತ್ ಸಮರಾಭ್ಯಾಸ: ಪಾಕಿಸ್ತಾನದಲ್ಲಿ ಆತಂಕ, ಸೇನಾ ತುರ್ತು ಸಭೆ

ಭಾರತೀಯ ವಾಯುಪಡೆ ರಾಜಸ್ಥಾನದ ಗಡಿಯಲ್ಲಿ 17 ದಿನಗಳ ಬೃಹತ್ ಸಮರಾಭ್ಯಾಸ ನಡೆಸುತ್ತಿದೆ. ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 7 ರವರೆಗೆ ನಡೆಯುವ ಈ ಯುದ್ಧ ತಾಲೀಮು ಪಾಕಿಸ್ತಾನಕ್ಕೆ ಆತಂಕ ತಂದಿದೆ. ಪಾಕ್ ರಕ್ಷಣಾ ಸಚಿವಾಲಯ ತುರ್ತು ಸಭೆ ಕರೆದು, ತನ್ನ ಪಡೆಗಳಿಗೆ ಕಟ್ಟೆಚ್ಚರ ವಹಿಸಲು ಆದೇಶಿಸಿದೆ. ಈ ಸಮರಾಭ್ಯಾಸವು 'ತರಂಗ್ ಶಕ್ತಿ 2026' ಕವಾಯತಿನೊಂದಿಗೆ ಹೊಂದಿಕೆಯಾಗಿ, ಭಾರತದ ವಾಯು ಸನ್ನದ್ಧತೆ ಪ್ರದರ್ಶಿಸಲಿದೆ.

ಗಡಿಯಲ್ಲಿ ಭಾರತೀಯ ವಾಯುಪಡೆಯಿಂದ 17 ದಿನಗಳ ಬೃಹತ್ ಸಮರಾಭ್ಯಾಸ: ಪಾಕಿಸ್ತಾನದಲ್ಲಿ ಆತಂಕ, ಸೇನಾ ತುರ್ತು ಸಭೆ
ಐಎಎಫ್​
Image Credit source: Defence News India

Updated on: Sep 04, 2026 | 12:56 PM

ನವದೆಹಲಿ, ಸೆಪ್ಟೆಂಬರ್ 04: ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ವಾಯುಪ್ರದೇಶದಲ್ಲಿ ಭಾರತೀಯ ವಾಯುಪಡೆ 17 ದಿನಗಳ ಬೃಹತ್ ಯುದ್ಧ ತಾಲೀಮು ನಡೆಸಲು ಸಜ್ಜಾಗಿದ್ದು, ಈ ಸಂಬಂಧ ಅಧಿಕೃತ ನೋಟಮ್ ಜಾರಿಗೊಳಿಸಿದೆ. ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಈ ಭಾರಿ ಮಿಲಿಟರಿ ಕವಾಯತಿನಿಂದ ಗಡಿಯಲ್ಲಿ ಆತಂಕಗೊಂಡಿರುವ ಪಾಕಿಸ್ತಾನದ ರಕ್ಷಣಾ ಸಚಿವಾಲಯ ತುರ್ತು ಸಭೆ ಕರೆದಿದ್ದು, ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ತನ್ನ ಪಡೆಗಳಿಗೆ ಕಟ್ಟೆಚ್ಚರ ವಹಿಸಲು ಆದೇಶಿಸಿದೆ.

ಕಾಯ್ದಿರಿಸಿದ ವಲಯಗಳು: ಜೈಸಲ್ಮೇರ್, ಬಾರ್ಮರ್, ಫಲೋಡಿ, ಜೋಧ್‌ಪುರ ಮತ್ತು ನಾಲಾ-ಬಿಕಾನೇರ್ ವಾಯುನೆಲೆಗಳ ವ್ಯಾಪ್ತಿಯಲ್ಲಿ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಸಂಪೂರ್ಣ ಮೀಸಲಿಡಲಾಗಿದೆ.

40 ಸಾವಿರ ಅಡಿ ಎತ್ತರದಲ್ಲಿ ಹಾರಾಟ: ಸುಮಾರು 40 ಸಾವಿರ ಅಡಿ ಎತ್ತರದವರೆಗೆ ಈ ವಲಯದಲ್ಲಿ ಯುದ್ಧ ವಿಮಾನಗಳ ಚಲನವಲನಗಳಿಗೆ ಮಾತ್ರ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಮತ್ತಷ್ಟು ಓದಿ: ಎಸ್​ಸಿಒ ಶೃಂಗಸಭೆಯ ಗ್ರೂಪ್ ಫೋಟೋದಿಂದ ಪ್ರಧಾನಿ ಮೋದಿಯ ಫೋಟೋ ಕಟ್ ಮಾಡಿದ ಪಾಕಿಸ್ತಾನ!

ಗಡಿಯ ಸನಿಹ ಸಮರಾಭ್ಯಾಸ: ಗುರುತಿಸಲಾದ ವಲಯಗಳಲ್ಲಿ ಒಂದು ಭಾಗವು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯಿಂದ ಕೇವಲ 20 ಕಿಲೋಮೀಟರ್ ಅಂತರದಲ್ಲಿದೆ. ಇದು ಪಾಕ್ ಸೇನೆಯನ್ನು ತೀವ್ರ ಚಿಂತೆಗೀಡುಮಾಡಿದೆ.

ಪಾಕಿಸ್ತಾನದಲ್ಲಿ ತಲ್ಲಣ ಮತ್ತು ತುರ್ತು ಸಭೆ

ಸೇನಾ ಮುಖ್ಯಸ್ಥರ ಗಮನಕ್ಕೆ: ಭಾರತದ ನೋಟಾಮ್ ಬಿಡುಗಡೆಯಾಗುತ್ತಿದ್ದಂತೆ ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥರ ಕಚೇರಿ ಹಾಗೂ ರಕ್ಷಣಾ ಸಚಿವಾಲಯ ತುರ್ತು ಸಮಾಲೋಚನೆ ನಡೆಸಿವೆ.

ಕಣ್ಗಾವಲು ತೀವ್ರ: ಭಾರತದ ಯುದ್ಧ ವಿಮಾನಗಳ ಯಾವುದೇ ಚಲನವಲನಗಳನ್ನು ಪತ್ತೆಹಚ್ಚಲು ಪಾಕಿಸ್ತಾನವು ತನ್ನ ರೇಡಾರ್ ಕೇಂದ್ರಗಳನ್ನು ಸಕ್ರಿಯಗೊಳಿಸಿದ್ದು, ಗಡಿಯಲ್ಲಿ ಹೆಚ್ಚಿನ ವಾಯು ರಕ್ಷಣಾ ಪಡೆಗಳನ್ನು ನಿಯೋಜಿಸಿದೆ.

ಬಹುರಾಷ್ಟ್ರೀಯ ಸಮರಾಭ್ಯಾಸ: ಈ 17 ದಿನಗಳ ಯುದ್ಧ ತಾಲೀಮು, ಜೋಧ್‌ಪುರದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 12 ರವರೆಗೆ ನಿಗದಿಯಾಗಿರುವ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸ ‘ತರಂಗ್ ಶಕ್ತಿ 2026’ ಜತೆಗೆ ಹೊಂದಿಕೆಯಾಗಲಿದೆ.

ಜಾಗತಿಕ ವಾಯುಪಡೆಗಳ ಪಾಲ್ಗೊಳ್ಳುವಿಕೆ: ಅಮೆರಿಕ, ಬ್ರಿಟನ್, ಫ್ರಾನ್ಸ್ ಸೇರಿದಂತೆ ಹಲವು ಮಿತ್ರರಾಷ್ಟ್ರಗಳ ಅತ್ಯಾಧುನಿಕ ಫೈಟರ್ ಜೆಟ್‌ಗಳು ಈ ಜಂಟಿ ಕವಾಯತಿನಲ್ಲಿ ಭಾಗವಹಿಸುವ ಸಾಧ್ಯತೆಯಿದ್ದು, ತೀವ್ರ ಸ್ವರೂಪದ ಡಾಗ್‌ಫೈಟ್ ಮತ್ತು ವಾಯು ಯುದ್ಧ ತಂತ್ರಗಳನ್ನು ಪ್ರದರ್ಶಿಸಲಿವೆ.

ನೋಟಮ್ ಎಂದರೇನು?: ಇದು ವಿಮಾನ ಪೈಲಟ್‌ಗಳು ಮತ್ತು ನಾಗರಿಕ ವಿಮಾನಯಾನ ಸಂಸ್ಥೆಗಳಿಗೆ ಅಪಾಯಕಾರಿ ವಲಯಗಳು, ಕ್ಷಿಪಣಿ ಪರೀಕ್ಷೆಗಳು ಅಥವಾ ಮಿಲಿಟರಿ ತಾಲೀಮುಗಳ ಕುರಿತು ಮುನ್ಸೂಚನೆ ನೀಡುವ ಸುರಕ್ಷತಾ ಎಚ್ಚರಿಕೆ ನೋಟಿಸ್ ಆಗಿದೆ.

ಭಾರತದ ವಾಯು ಸನ್ನದ್ಧತೆ ಪರೀಕ್ಷೆ: ರಫೇಲ್, ಸುಖೋಯ್-30 ಎಂಕ್ಯೂಐ, ಮಿರಾಜ್-2000 ಮತ್ತು ತೇಜಸ್ ಲಘು ಯುದ್ಧ ವಿಮಾನಗಳು ಈ ಸಮರಾಭ್ಯಾಸದಲ್ಲಿ ನಿರಂತರ ಹಾರಾಟ ನಡೆಸಲಿದ್ದು, ವಾಸ್ತವಿಕ ಯುದ್ಧ ಸನ್ನಿವೇಶದಲ್ಲಿ ಸಂವಹನ, ಇಂಧನ ಮರುಪೂರಣ ಹಾಗೂ ರಾತ್ರಿ ಕಾರ್ಯಾಚರಣೆಯ ಸಾಮರ್ಥ್ಯವನ್ನು ಸಾಬೀತುಪಡಿಸಲಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us