ಆಪರೇಷನ್ ಸಿಂಧೂರ್ ವೇಳೆ ಭಾರತದ ವಾಯುಪಡೆಗೆ ಸೋತು ಪಾಕಿಸ್ತಾನ ಮಂಡಿಯೂರಿತ್ತು; ಯುರೋಪಿಯನ್ ಮಿಲಿಟರಿ ವಿಶ್ಲೇಷಣೆ
ಪಹಲ್ಗಾಮ್ ದಾಳಿಯ ನಂತರ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ, ಉಗ್ರರ ಸೇನಾ ನೆಲೆಗಳನ್ನು ಧ್ವಂಸಗೊಳಿಸಿತ್ತು. ಆದರೆ, ಈ ದಾಳಿಯಿಂದ ಪಾಕಿಸ್ತಾನಕ್ಕೆ ಆದ ನಷ್ಟವನ್ನು ಪಾಕಿಸ್ತಾನ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಈ ದಾಳಿ ನಡೆದು 8-10 ತಿಂಗಳುಗಳೇ ಕಳೆದಿವೆ. ಇದೀಗ ಪಾಕಿಸ್ತಾನದ ಒಂದೊಂದೇ ನಿಜರೂಪ ಜಗತ್ತಿನೆದುರು ಹೊರಬೀಳತೊಡಗಿದೆ.

ನವದೆಹಲಿ, ಜನವರಿ 26: ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರವಾಸಿ ಸ್ಥಳವಾದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರ ಆಪರೇಷನ್ ಸಿಂಧೂರ್ (Operation Sindoor) ಪ್ರಾರಂಭಿಸಿತು. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಿಗೂ ಈ ದಾಳಿಗೂ ಸಂಬಂಧವಿದೆ ಎಂದು ಭಾರತದ ವಾಯುಪಡೆ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ದಕ್ಷಿಣ ಏಷ್ಯಾದಲ್ಲಿ ವಾಯು ಶಕ್ತಿಯಲ್ಲಿ ನಿರ್ಣಾಯಕ ಬದಲಾವಣೆಯನ್ನು ಗುರುತಿಸಿತು. ಈ ಕಾರ್ಯಾಚರಣೆಯ ಯಶಸ್ಸನ್ನು ಭಾರತ ಸಾರಿಸಾರಿ ಹೇಳಿದರೂ ಪಾಕಿಸ್ತಾನ ಮಾತ್ರ ತಮಗೆ ಯಾವುದೇ ಹಾನಿಯಾಗಿಲ್ಲ ಎಂದು ನಾಟಕವಾಡಿತ್ತು. ಆದರೆ, ಈ ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆ ಎಂದು ಭಾರತಕ್ಕೆ ಇದೀಗ ಮತ್ತೊಂದು ಸರ್ಟಿಫಿಕೆಟ್ ಸಿಕ್ಕಿದೆ!
ಆಪರೇಷನ್ ಸಿಂಧೂರ್ ಮೂಲಕ ಭಾರತ ವಾಯು ಪಡೆಯ ಸಾಮರ್ಥ್ಯವನ್ನು ಪ್ರದರ್ಶಿಸಿತು ಮತ್ತು 4 ದಿನಗಳ ತೀವ್ರ ಹೋರಾಟದ ನಂತರ ಪಾಕಿಸ್ತಾನವನ್ನು ಕದನ ವಿರಾಮಕ್ಕೆ ಮಂಡಿಯೂರುವಂತೆ ಮಾಡಿತು ಎಂದು ಯುರೋಪಿಯನ್ ಮಿಲಿಟರಿ ವಿಶ್ಲೇಷಣೆ ತಿಳಿಸಿದೆ. ಆಪರೇಷನ್ ಸಿಂಧೂರ್: ದಿ ಇಂಡಿಯಾ-ಪಾಕಿಸ್ತಾನ್ ಏರ್ ವಾರ್ ಎಂಬ ಶೀರ್ಷಿಕೆಯಡಿ ಖ್ಯಾತ ಇತಿಹಾಸಕಾರ ಆಡ್ರಿಯನ್ ಫಾಂಟನೆಲ್ಲಾಜ್ ಈ ವರದಿಯನ್ನು ಬರೆದಿದ್ದಾರೆ. ಸ್ವಿಟ್ಜರ್‌ಲ್ಯಾಂಡ್‌ನ ಮಿಲಿಟರಿ ಇತಿಹಾಸ ಮತ್ತು ದೃಷ್ಟಿಕೋನ ಅಧ್ಯಯನ ಕೇಂದ್ರ (CHPM) ಈ ವರದಿಯನ್ನು ಪ್ರಕಟಿಸಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ದೊಡ್ಡ ದಾಳಿಯಾಗಿತ್ತು, ಪಾಕಿಸ್ತಾನವನ್ನೇ ದಿಗ್ಭ್ರಮೆಗೊಳಿಸಿತು; ಒಪ್ಪಿಕೊಂಡ ಲಷ್ಕರ್ ಕಮಾಂಡರ್
2025ರ ಮೇ 7ರಿಂದ 10ರವರೆಗೆ ನಡೆದ 88 ಗಂಟೆಗಳ ಭಾರತ-ಪಾಕಿಸ್ತಾನ ವೈಮಾನಿಕ ಯುದ್ಧದ ಬಗ್ಗೆ ಅವರು ಸವಿವರವಾದ ವರದಿಯನ್ನು ಬರೆದಿದ್ದಾರೆ. ಭಾರತದ ಪಾಲಿಗೆ ಇದು ಬಹಳ ಮಹತ್ವದ ಸಂಗತಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಸುಂದರವಾದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು. ಮೇ 7ರ ಮುಂಜಾನೆ ಭಾರತೀಯ ವಾಯುಪಡೆ (IAF) ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಪ್ರಧಾನ ಕಚೇರಿಗಳು ಮತ್ತು ಪ್ರಮುಖ ಶಿಬಿರಗಳು ಸೇರಿದಂತೆ ಹೆಚ್ಚಿನ ಮೌಲ್ಯದ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿತು.
ಪಾಕಿಸ್ತಾನದ ಬಹವಾಲ್ಪುರ್ ಮತ್ತು ಮುರಿಡ್ಕೆ ಎಂಬ ಎರಡು ಪ್ರಮುಖ ತಾಣಗಳನ್ನು ದೀರ್ಘ-ಶ್ರೇಣಿಯ ನಿಖರ ಶಸ್ತ್ರಾಸ್ತ್ರಗಳಿಂದ ಹೊಡೆದುರುಳಿಸಲಾಯಿತು. ಈ ದಾಳಿಯ ನಂತರದ ಮೌಲ್ಯಮಾಪನಗಳು ಬಹು ಕಟ್ಟಡಗಳು ನಾಶವಾಗಿವೆ ಎಂದು ದೃಢಪಡಿಸಿದವು. ಆದರೆ, ಪಾಕಿಸ್ತಾನ ಇದನ್ನು ಒಪ್ಪಿಕೊಂಡಿರಲಿಲ್ಲ. ದಶಕದ ಅತಿ ದೊಡ್ಡ ವೈಮಾನಿಕ ಕಾರ್ಯಾಚರಣೆಯಾಗಿದ್ದ ಈ ಆಪರೇಷನ್ ಸಿಂಧೂರ್ನಲ್ಲಿ ಅತ್ಯಂತ ಪ್ರಭಾವಶಾಲಿ ಯುದ್ಧವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು. ಭಾರತದ ದಾಳಿಯ ಹೊಡೆತಕ್ಕೆ ನಲುಗಿದ ಪಾಕಿಸ್ತಾನ ಕದನವಿರಾಮಕ್ಕೆ ಬೇಡಿಕೊಂಡಿತು.
ಇದನ್ನೂ ಓದಿ: ಪಾಕಿಸ್ತಾನದ ಭಯೋತ್ಪಾದನೆಗೆ ಬೆಂಬಲಿಸಬೇಡಿ; ಪೋಲೆಂಡ್ ಉಪ ಪ್ರಧಾನಿ ಜೊತೆ ಎಸ್. ಜೈಶಂಕರ್ ಚರ್ಚೆ
ತನ್ನ ವಾಯು ನೆಲೆಗಳು ನಿರಂತರ ಒತ್ತಡದಲ್ಲಿ ಮತ್ತು ಅದರ ವಾಯು ರಕ್ಷಣಾ ಜಾಲವು ಅವನತಿ ಹೊಂದಿದ ಕಾರಣದಿಂದ ಪಾಕಿಸ್ತಾನವು ಇನ್ನು ಮುಂದೆ ವಾಯುಪ್ರದೇಶವನ್ನು ಪರಿಣಾಮಕಾರಿಯಾಗಿ ಎದುರಿಸುವ ಸ್ಥಿತಿಯಲ್ಲಿರಲಿಲ್ಲ. ಈ ಹಂತದಲ್ಲಿಯೇ ಪಾಕಿಸ್ತಾನ ಕದನ ವಿರಾಮವನ್ನು ಬಯಸಿತು ಎಂದು ಸ್ವಿಸ್ ವಿಶ್ಲೇಷಕರು ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಭಾರತದ ಕಾರ್ಯತಂತ್ರದ ಸಿದ್ಧಾಂತದಲ್ಲಿ ಒಂದು ಮಹತ್ವದ ತಿರುವು ಎಂದು ವರದಿ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
