
ನವದೆಹಲಿ, ನವೆಂಬರ್ 01: ಭಾರತದಲ್ಲಿ ಬಡತನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿರುವ ಅವರು, 2011ರಿಂದ 2023ರ ನಡುವಿನ ಅವಧಿಯಲ್ಲಿ ಸುಮಾರು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದ್ದಾರೆ. ಬಡತನದಲ್ಲಿನ ಈ ಇಳಿಕೆಯನ್ನು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿರುವ ಮೋದಿ, ತಮ್ಮ ಸರ್ಕಾರಕ್ಕೆ ಬಡತನ ನಿರ್ಮೂಲನೆ ಕೇವಲ ರಾಜಕೀಯ ಘೋಷಣೆಯಲ್ಲ, ಅದೊಂದು ಬದ್ಧತೆ ಎಂದು ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಿವುಡ್‌ನ ಹಾಡನ್ನು ಹಿನ್ನೆಲೆ ಸಂಗೀತವಾಗಿ ಬಳಸಿಕೊಂಡು ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ, ಬಡತನ ಇಳಿಕೆಯು ದೇಶದ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗ ಸೃಷ್ಟಿ, ಆಹಾರ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳು ಈ ಬದಲಾವಣೆಗೆ ನೆರವಾಗಿವೆ ಎಂದು ಅವರು ಹೇಳಿದ್ದಾರೆ.
ವಿಶ್ವಬ್ಯಾಂಕ್ ವರದಿಯ ಪ್ರಮುಖ ಅಂಕಿ-ಅಂಶಗಳು
ವಿಶ್ವಬ್ಯಾಂಕ್‌ನ ಇಂಡಿಯಾ ಪಾವರ್ಟಿ ಆ್ಯಂಡ್ ಈಕ್ವಿಟಿ ಬ್ರೀಫ್ 2026ರ ವರದಿ ಪ್ರಕಾರ, ಭಾರತದಲ್ಲಿ ಬಡತನವು ಹಣಕಾಸಿನ ಸ್ಥಿತಿಯ ಆಧಾರದಲ್ಲಷ್ಟೇ ಅಲ್ಲದೆ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳ ಲಭ್ಯತೆಯಂತಹ ಅಂಶಗಳಲ್ಲಿಯೂ ಸುಧಾರಣೆ ಕಂಡಿದೆ.
ತೀವ್ರ ಬಡತನ ಎಂದರೇನು?
ಒಬ್ಬ ವ್ಯಕ್ತಿಯ ದಿನನಿತ್ಯದ ಜೀವನಕ್ಕೆ ಅಗತ್ಯವಿರುವ ಆಹಾರ, ಬಟ್ಟೆ, ವಸತಿ ಮತ್ತು ಇತರ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಆದಾಯ ಅಥವಾ ಬಳಕೆ ಸಾಮರ್ಥ್ಯ ಇಲ್ಲದ ಸ್ಥಿತಿಯನ್ನು ಬಡತನ ಎಂದು ಪರಿಗಣಿಸಲಾಗುತ್ತದೆ. ವಿಶ್ವಬ್ಯಾಂಕ್‌ನ ಹೊಸ ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ, ದಿನಕ್ಕೆ 3 ಡಾಲರ್‌ಗಿಂತ ಕಡಿಮೆ ಬಳಕೆ ಸಾಮರ್ಥ್ಯ ಹೊಂದಿರುವವರನ್ನು ತೀವ್ರ ಬಡತನದಲ್ಲಿರುವವರು ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡದ ಆಧಾರದಲ್ಲಿ ಭಾರತದ ತೀವ್ರ ಬಡತನದ ಪ್ರಮಾಣ 2011ರಲ್ಲಿ ಶೇ.27.1ರಷ್ಟಿದ್ದರೆ, 2023ರಲ್ಲಿ ಶೇ.2.6ಕ್ಕೆ ಇಳಿದಿದೆ. ಅಂದರೆ ಸುಮಾರು 90 ಪ್ರತಿಶತದಷ್ಟು ಇಳಿಕೆ ಕಂಡಿದೆ.
ಇನ್ನು ದಿನಕ್ಕೆ 4.20 ಡಾಲರ್‌ಗಿಂತ ಕಡಿಮೆ ಬಳಕೆ ಸಾಮರ್ಥ್ಯ ಹೊಂದಿರುವವರನ್ನು ಕೆಳ ಮಧ್ಯಮ ಆದಾಯದ ದೇಶಗಳ ಬಡತನ ರೇಖೆಯಡಿ ಪರಿಗಣಿಸಲಾಗುತ್ತದೆ. ಈ ಲೆಕ್ಕಾಚಾರದಲ್ಲಿ 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.
ಇದನ್ನೂ ಓದಿ: ವಿದೇಶಿ ನೆಲದಲ್ಲಿ ರಹಸ್ಯ ಸಭೆ, ವಿರೋಧ ಪಕ್ಷಗಳು ದೇಶ ಒಡೆಯಲು ಸಂಚು ರೂಪಿಸುತ್ತಿವೆ ಎಂದ ಪ್ರಧಾನಿ ಮೋದಿ
ಬಡತನ ಇಳಿಕೆಗೆ ಕಾರಣಗಳೇನು?
ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತದಲ್ಲಿ ಬಡತನ ಕಡಿಮೆಯಾಗಲು ಹಲವು ಅಂಶಗಳು ಕಾರಣವಾಗಿವೆ.
– ಉಚಿತ ಆಹಾರ ಯೋಜನೆ: ಬಡ ಕುಟುಂಬಗಳಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ವಿತರಿಸುವ ಯೋಜನೆಗಳು ಕುಟುಂಬಗಳ ಖರ್ಚಿನ ಹೊರೆಯನ್ನು ಕಡಿಮೆ ಮಾಡಿವೆ.
– ಉದ್ಯೋಗಾವಕಾಶಗಳ ಹೆಚ್ಚಳ: 2017ರಿಂದ 2023ರ ಅವಧಿಯಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಸುಮಾರು 13.4 ಕೋಟಿ ಹೆಚ್ಚಳವಾಗಿದೆ.
– ಮಹಿಳೆಯರ ಉದ್ಯೋಗ: ವಿಶೇಷವಾಗಿ ಮಹಿಳೆಯರಲ್ಲಿ ಸ್ವಯಂ ಉದ್ಯೋಗ ಮತ್ತು ಆದಾಯ ಗಳಿಸುವ ಚಟುವಟಿಕೆಗಳು ಹೆಚ್ಚಾಗಿವೆ.
– ಸಾಮಾಜಿಕ ಕಲ್ಯಾಣ ಯೋಜನೆಗಳು: ಸರ್ಕಾರದ ವಿವಿಧ ನೆರವು ಯೋಜನೆಗಳು ಬಡ ಕುಟುಂಬಗಳಿಗೆ ಆರ್ಥಿಕ ಬೆಂಬಲ ಒದಗಿಸಿವೆ.
– ಬಳಕೆಯ ಹೆಚ್ಚಳ: ಜನರ ಖರೀದಿ ಸಾಮರ್ಥ್ಯ ಮತ್ತು ಬಳಕೆ ವೆಚ್ಚದಲ್ಲಿ ಕಂಡುಬಂದ ಸುಧಾರಣೆಯೂ ಬಡತನ ಇಳಿಕೆಗೆ ನೆರವಾಗಿದೆ.
ಬಡತನವನ್ನು ಕೇವಲ ಆದಾಯದ ಆಧಾರದಲ್ಲಿ ಅಳೆಯುವುದಿಲ್ಲ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಮತ್ತು ವಸತಿ ಸೌಲಭ್ಯಗಳ ಕೊರತೆಯನ್ನೂ ಪರಿಗಣಿಸಲಾಗುತ್ತದೆ. ಇದನ್ನೇ ಬಹುಆಯಾಮದ ಬಡತನ ಎಂದು ಕರೆಯಲಾಗುತ್ತದೆ. ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮದ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಬಹುಆಯಾಮದ ಬಡತನದ ಪ್ರಮಾಣ 2005-06ರಲ್ಲಿ ಶೇ.53.8ರಷ್ಟಿತ್ತು. 2019-21ರ ವೇಳೆಗೆ ಅದು ಶೇ.16.4ಕ್ಕೆ ಇಳಿದಿದೆ.
ಅಸಮಾನತೆ ಕಡಿಮೆಯಾದರೂ ಮುಂದುವರೆದ ಸವಾಲುಗಳು
ಆರ್ಥಿಕ ಅಸಮಾನತೆಯನ್ನು ಅಳೆಯಲು ಬಳಸುವ ಗಿನಿ ಸೂಚ್ಯಂಕವೂ ಇಳಿಕೆಯಾಗಿದೆ. 2011-12ರಲ್ಲಿ 28.8ರಷ್ಟಿದ್ದ ಸೂಚ್ಯಂಕ 2023ರಲ್ಲಿ 23ಕ್ಕೆ ತಲುಪಿದೆ. ಸಾಮಾನ್ಯವಾಗಿ ಈ ಸೂಚ್ಯಂಕದ ಮೌಲ್ಯ ಕಡಿಮೆಯಾದಂತೆ ಬಳಕೆ ಆಧಾರಿತ ಆರ್ಥಿಕ ಅಸಮಾನತೆ ಕಡಿಮೆಯಾಗಿದೆ ಎಂದು ಅರ್ಥೈಸಲಾಗುತ್ತದೆ. ಆದರೆ ದೇಶದಲ್ಲಿ ಎಲ್ಲರಿಗೂ ಸಮಾನ ಪ್ರಮಾಣದಲ್ಲಿ ಆರ್ಥಿಕ ಪ್ರಗತಿ ತಲುಪಿಲ್ಲ. ಬಡತನದ ಪ್ರಮಾಣ ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಗಿಂತ ಹೆಚ್ಚಿದೆ. ಉತ್ತರ ಪ್ರದೇಶದಿಂದ ಪಶ್ಚಿಮ ಬಂಗಾಳದವರೆಗೆ ಇರುವ ರಾಜ್ಯಗಳ ವಲಯದಲ್ಲಿ ದೇಶದ ಬಡ ಜನಸಂಖ್ಯೆಯ ಸುಮಾರು ಶೇ.57ರಷ್ಟು ಜನರಿದ್ದಾರೆ ಎಂದು ವರದಿ ತಿಳಿಸಿದೆ.
ಇದಲ್ಲದೆ, ವಿದ್ಯಾವಂತ ಯುವಕರಿಗೆ ಸೂಕ್ತ ಉದ್ಯೋಗ ಸಿಗದಿರುವುದು, ಉದ್ಯೋಗಗಳ ಗುಣಮಟ್ಟ ಮತ್ತು ಆದಾಯದ ಅಂತರ ಇನ್ನೂ ಸವಾಲಾಗಿವೆ. ನಿರುದ್ಯೋಗದ ಸಮಸ್ಯೆ ಮತ್ತು ಗ್ರಾಮೀಣ ಯುವತಿಯರ ಉದ್ಯೋಗಾವಕಾಶಗಳ ಕೊರತೆಯ ಬಗ್ಗೆಯೂ ವರದಿ ಗಮನ ಸೆಳೆದಿದೆ.
ಬಡತನ ಇಳಿಕೆ ಸಾಧನೆಯೇ, ಸವಾಲುಗಳು ಇನ್ನೂ ಇವೆಯೇ?
ಭಾರತದಲ್ಲಿ ಬಡತನದ ಪ್ರಮಾಣ ಗಣನೀಯವಾಗಿ ಇಳಿದಿರುವುದು ವಿಶ್ವಬ್ಯಾಂಕ್ ವರದಿಯ ಪ್ರಮುಖ ಅಂಶವಾಗಿದೆ. ಇದನ್ನು ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆಯಾಗಿ ಬಿಂಬಿಸಿದ್ದಾರೆ. ಆದರೆ ಬಡತನದ ಲೆಕ್ಕಾಚಾರಕ್ಕೆ ಬಳಸುವ ಮಾನದಂಡ, ಸಮೀಕ್ಷಾ ವಿಧಾನ ಮತ್ತು ಆದಾಯದ ಅಸಮಾನತೆಯಂತಹ ವಿಚಾರಗಳನ್ನೂ ಗಮನಿಸಬೇಕಿದೆ. ಒಟ್ಟಿನಲ್ಲಿ, ಬಡತನ ಇಳಿಕೆಯ ಅಂಕಿ-ಅಂಶಗಳು ಭಾರತದ ಆರ್ಥಿಕ ಪ್ರಗತಿಯ ಸಕಾರಾತ್ಮಕ ಚಿತ್ರಣ ನೀಡುತ್ತವೆ. ಆದರೆ ಉದ್ಯೋಗದ ಗುಣಮಟ್ಟ, ಗ್ರಾಮೀಣ-ನಗರ ಅಂತರ ಮತ್ತು ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಕಲ್ಪಿಸುವುದು ಮುಂದಿನ ಪ್ರಮುಖ ಸವಾಲುಗಳಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ