ಎಥೆನಾಲ್ ಮಿಶ್ರಣವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದೆ, ವಾಹನಗಳಿಗೆ ಸುರಕ್ಷಿತವಾಗಿದೆ; ಕೈಗಾರಿಕಾ ತಜ್ಞರ ಸಮರ್ಥನೆ

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಕಾರ್ಯಕ್ರಮವನ್ನು ರಾತ್ರೋರಾತ್ರಿ ಜಾರಿಗೆ ತಂದಿಲ್ಲ. ಅತ್ಯಂತ ವ್ಯವಸ್ಥಿತ, ಹಂತ-ಹಂತದ ಮತ್ತು ವೈಜ್ಞಾನಿಕ ಪ್ರಕ್ರಿಯೆಯ ಮೂಲಕ ಅನುಷ್ಠಾನಗೊಳಿಸಲಾಗಿದೆ ಎಂದು ಉದ್ಯಮ ತಜ್ಞರು ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ 'ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್' ಸಂಸ್ಥೆಯ ಮಾಜಿ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ವರ್ತಿಕಾ ಶುಕ್ಲಾ, ಎಥನಾಲ್ ಮಿಶ್ರಣ ಕಾರ್ಯಕ್ರಮವನ್ನು 2018ರಲ್ಲೇ ವ್ಯವಸ್ಥಿತ ಚರ್ಚೆಗಾಗಿ ಸಾರ್ವಜನಿಕ ವಲಯದಲ್ಲಿ ಮುಕ್ತವಾಗಿಡಲಾಗಿತ್ತು ಎಂದು ಹೇಳಿದರು.

ಎಥೆನಾಲ್ ಮಿಶ್ರಣವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದೆ, ವಾಹನಗಳಿಗೆ ಸುರಕ್ಷಿತವಾಗಿದೆ; ಕೈಗಾರಿಕಾ ತಜ್ಞರ ಸಮರ್ಥನೆ
Ethanol Press Conference

Updated on: Jul 04, 2026 | 6:16 PM

ನವದೆಹಲಿ, ಜುಲೈ 4: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವ ಇ20 (E20) ಇಂಧನದ ಬಳಕೆಯ ಬಗ್ಗೆ ಎದ್ದಿರುವ ಆತಂಕಗಳನ್ನು ಕೈಗಾರಿಕೆ ಮತ್ತು ಉದ್ಯಮಗಳ ತಜ್ಞರು ಇಂದು ದೂರ ಮಾಡಿದ್ದಾರೆ. ಈ ಇಂಧನವು ವ್ಯಾಪಕ ವೈಜ್ಞಾನಿಕ ಪರೀಕ್ಷೆಗಳಿಗೆ ಒಳಗಾಗಿದ್ದು, ಕಠಿಣ ಗುಣಮಟ್ಟದ ಮಾನದಂಡಗಳನ್ನು ಹೊಂದಿದೆ. ಇದು 2023ಕ್ಕಿಂತ ಮುಂಚೆ ತಯಾರಾದ ವಾಹನಗಳಿಗೂ ಸುರಕ್ಷಿತವಾಗಿದ್ದು, ಕಚ್ಚಾ ತೈಲ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಹೊಸ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಜ್ಞರು, ವಾಹನ ತಯಾರಕರು, ಪರೀಕ್ಷಾ ಸಂಸ್ಥೆಗಳು ಮತ್ತು ಇತರ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರವೇ ದೇಶಾದ್ಯಂತ ಈ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.


ವೈಜ್ಞಾನಿಕ ಮತ್ತು ವ್ಯವಸ್ಥಿತ ಅನುಷ್ಠಾನ:

ಇ20 ಪೆಟ್ರೋಲ್ ಯೋಜನೆಯು ರಾತ್ರೋರಾತ್ರಿ ತೆಗೆದುಕೊಂಡ ನಿರ್ಧಾರವಲ್ಲ. ಇದು 2018ರಿಂದಲೇ ಚರ್ಚೆ ಹಾಗೂ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಮತ್ತು ‘ಸಿಯಾಮ್’ (SIAM) ಸಂಸ್ಥೆಗಳ ವ್ಯಾಪಕ ಪರೀಕ್ಷೆಗಳಿಗೆ ಒಳಪಟ್ಟು ಜಾರಿಯಾಗಿದೆ. 2013-14ರಲ್ಲಿ ಕೇವಲ ಶೇ. 1.5ರಷ್ಟಿದ್ದ ಎಥನಾಲ್ ಮಿಶ್ರಣವನ್ನು ಡಿಸೆಂಬರ್ 2025ರ ವೇಳೆಗೆ ಶೇ. 20ಕ್ಕೆ (E20) ಹೆಚ್ಚಿಸುವ ಮೂಲಕ ನಿಗದಿತ ಅವಧಿಗಿಂತ 5 ವರ್ಷ ಮುಂಚಿತವಾಗಿಯೇ ಗುರಿ ತಲುಪಲಾಗಿದೆ.

ಇದನ್ನೂ ಓದಿ: E20 ಎಥೆನಾಲ್ ಮಿಶ್ರಣದ ಕುರಿತ ಸತ್ಯ ಸಂಗತಿ ಮತ್ತು ತಪ್ಪು ಕಲ್ಪನೆಗಳು

ಹಳೆಯ ವಾಹನಗಳಿಗೂ ಸುರಕ್ಷಿತ:

ಮಾರುತಿ ಸುಜುಕಿ ಮತ್ತು ಹೀರೋ ಮೋಟೋಕಾರ್ಪ್ ಸಂಸ್ಥೆಗಳ ತಜ್ಞರು ಸ್ಪಷ್ಟಪಡಿಸಿರುವಂತೆ, 2023ಕ್ಕಿಂತ ಹಳೆಯದಾದ (E10 ಇಂಧನಕ್ಕೆ ವಿನ್ಯಾಸಗೊಳಿಸಲಾದ) ವಾಹನಗಳಿಗೂ ಇ20 ಇಂಧನದಿಂದ ಯಾವುದೇ ಹಾನಿ, ಸವೆತ ಅಥವಾ ತುಕ್ಕು ಹಿಡಿಯುವ ಸಮಸ್ಯೆ ಕಂಡುಬಂದಿಲ್ಲ.


ಪರಿಸರಸ್ನೇಹಿ ಮತ್ತು ಆರ್ಥಿಕ ಭದ್ರತೆ:

ಸಸ್ಯಗಳಿಂದ ತಯಾರಾಗುವ ಎಥನಾಲ್ ಶೂನ್ಯ-ಇಂಗಾಲದ ಇಂಧನವಾಗಿದ್ದು, ಹವಾಮಾನ ವೈಪರೀತ್ಯ ತಡೆಯಲು ನೆರವಾಗುತ್ತದೆ. ಫಾರ್ಮುಲಾ 1 ರೇಸಿಂಗ್ ಕಾರುಗಳಲ್ಲೂ ಎಥನಾಲ್ ಇಂಧನ ಬಳಸಲಾಗುತ್ತದೆ. ಇದು ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಕಚ್ಚಾ ತೈಲ ಆಮದು ವೆಚ್ಚವನ್ನು ತಗ್ಗಿಸಿದೆ.

ವಿಮಾ ಕಂಪನಿಗಳ ಸ್ಪಷ್ಟನೆ:

ಇ20 ಇಂಧನ ಬಳಸುವ ವಾಹನಗಳಿಗೆ ವಿಮೆ ನಿರಾಕರಿಸಲಾಗುವುದು ಎಂಬ ವದಂತಿಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿರಸ್ಕರಿಸಿದ್ದು, ವಿಮಾ ಕಂಪನಿಗಳು ಈಗಾಗಲೇ ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿವೆ ಎಂದು ಹೇಳಿದ್ದಾರೆ.

ಹಂತಹಂತವಾಗಿ ಜಾರಿಯಾದ ವೈಜ್ಞಾನಿಕ ಪ್ರಕ್ರಿಯೆ:

‘ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್’ (EIL) ಮಾಜಿ ಸಿಎಂಡಿ ವರ್ತಿಕಾ ಶುಕ್ಲಾ ಮಾತನಾಡಿ, “ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವ ಪ್ರಕ್ರಿಯೆಯು ರಾತ್ರೋರಾತ್ರಿ ನಡೆದಿರುವುದಲ್ಲ. ಇದು ಅತ್ಯಂತ ವ್ಯವಸ್ಥಿತ, ವೈಜ್ಞಾನಿಕ ಮತ್ತು ಹಂತ-ಹಂತವಾಗಿ ಜಾರಿಗೆ ತಂದ ಪ್ರಕ್ರಿಯೆಯಾಗಿದೆ,” ಎಂದರು. ಅಮೆರಿಕ, ಬ್ರೆಜಿಲ್, ಕೆನಡಾ ಮತ್ತು ಜರ್ಮನಿ ಸೇರಿದಂತೆ ಜಾಗತಿಕವಾಗಿ ಅನುಸರಿಸಲಾಗುತ್ತಿರುವ ಅತ್ಯುತ್ತಮ ಪದ್ಧತಿಗಳಿಗೆ ಅನುಗುಣವಾಗಿಯೇ ಭಾರತವೂ ಈ ಇಂಧನವನ್ನು ಅಳವಡಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

ಹವಾಮಾನ ಬದಲಾವಣೆಗೆ ಶೂನ್ಯ ಇಂಗಾಲದ ಇಂಧನ ಪರಿಹಾರ:

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್‌ನ ಕಾರ್ಪೊರೇಟ್ ಅಫೇರ್ಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಮಾತನಾಡಿ, ಭಾರತದಲ್ಲಿ ಗ್ರಾಹಕರ ಕೈ ಸೇರುವ ಮುನ್ನ ವಾಹನಗಳು ಮತ್ತು ಇಂಧನಗಳು ಕಠಿಣ ಪರೀಕ್ಷೆಗಳಿಗೆ ಒಳಗಾಗುತ್ತವೆ ಎಂದರು. ಎಥನಾಲ್ ಅತ್ಯುತ್ತಮ ಇಂಧನವಾಗಿದ್ದು, ಉತ್ತಮ ಡ್ರೈವಿಂಗ್ ಅನುಭವ ನೀಡುತ್ತದೆ. ಇದು ಸಸ್ಯಗಳಿಂದ ಉತ್ಪತ್ತಿಯಾಗುವುದರಿಂದ ‘ಶೂನ್ಯ-ಇಂಗಾಲ’ದ ಇಂಧನವಾಗಿದೆ ಮತ್ತು ಇತ್ತೀಚಿನ ಪಶ್ಚಿಮ ಏಷ್ಯಾ ಬಿಕ್ಕಟ್ಟಿನಂತಹ ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತಗಳಿಂದ ಭಾರತದ ಆರ್ಥಿಕತೆಯನ್ನು ರಕ್ಷಿಸಲು ಇದು ಸಹಕಾರಿಯಾಗಿದೆ ಎಂದು ವಿವರಿಸಿದರು.


ಹಳೆಯ ವಾಹನಗಳ ಗ್ರಾಹಕರಿಗೆ ಆತಂಕ ಬೇಡ:

ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಭಾರ್ತಿ ಮಾತನಾಡಿ, 2023ಕ್ಕಿಂತ ಮೊದಲು ತಯಾರಾದ ವಾಹನಗಳ ಬಗ್ಗೆ ಗ್ರಾಹಕರಲ್ಲಿ ಕಾಳಜಿ ಇರುವುದು ಸಹಜ. ಆದರೆ ಕಂಪನಿಯು ಇ10 ಕಾರುಗಳನ್ನು ಇ20 ಇಂಧನದೊಂದಿಗೆ ಎಲ್ಲಾ ಮಾನದಂಡಗಳ ಅಡಿಯಲ್ಲಿ ಪರೀಕ್ಷಿಸಿದ್ದು, ಯಾವುದೇ ತೊಂದರೆ ಕಂಡುಬಂದಿಲ್ಲ. ವಾಹನ ವಿನ್ಯಾಸದಲ್ಲಿ ಸಾಕಷ್ಟು ಸುರಕ್ಷತಾ ಮಾರ್ಜಿನ್‌ಗಳನ್ನು ಅಳವಡಿಸಲಾಗಿರುವುದರಿಂದ ಭಾಗಗಳ ಜೀವಿತಾವಧಿಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಭರವಸೆ ನೀಡಿದರು.

ಹೀರೋ ಮೋಟೋಕಾರ್ಪ್‌ನ ಮುಖ್ಯ ವ್ಯಾಪಾರ ಅಧಿಕಾರಿ ಅಶುತೋಷ್ ವರ್ಮಾ ಮಾತನಾಡಿ, ಕೋಟ್ಯಂತರ ದ್ವಿಚಕ್ರ ವಾಹನಗಳ ಸೇವಾ ಡೇಟಾಗಳನ್ನು ನಾವು ವಿಶ್ಲೇಷಿಸಿದ್ದೇವೆ. ಇ20 ಇಂಧನ ಬಳಸುತ್ತಿರುವ ವಾಹನಗಳಲ್ಲಿ ಯಾವುದೇ ರೀತಿಯ ಹೆಚ್ಚಿನ ಹಾನಿ ಅಥವಾ ತಾಂತ್ರಿಕ ದೋಷಗಳು ವರದಿಯಾಗಿಲ್ಲ ಎಂದು ಸಾಕ್ಷ್ಯಗಳ ಸಮೇತ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us