
ನವದೆಹಲಿ, ಜುಲೈ 15: ಇತ್ತೀಚೆಗೆ ನಡೆದ ಪ್ರತಿಷ್ಠಿತ ಐಐಟಿ ಮದ್ರಾಸ್ (IIT Madras) ಘಟಿಕೋತ್ಸವದಲ್ಲಿ ಅತ್ಯಂತ ಅಪರೂಪದ ಘಟನೆಯೊಂದು ನಡೆದಿದೆ. 45 ವರ್ಷದ ತಾಯಿ ಜಿಗೀಷಾ ಟೇಲರ್ (Jigisha Tailor) ಮತ್ತು ಅವರ 21 ವರ್ಷದ ಮಗ ಆದಿತ್ಯ ಕಪಾಡಿಯಾ (Aditya Kapadia) ಇಬ್ಬರೂ ಒಟ್ಟಿಗೆ ಒಂದೇ ವೇದಿಕೆಯ ಮೇಲೆ ಐಐಟಿ ಪದವಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಇಬ್ಬರೂ ಒಟ್ಟಿಗೇ ಐಐಟಿ ಪದವಿ ಪಡೆಯುತ್ತಿರುವ ಫೋಟೋಗಳನ್ನು ಐಐಟಿ ಮದ್ರಾಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಈ ಘಟನೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದೆ. ಅಮ್ಮ-ಮಗನ ಈ ಸಾಧನೆ ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಗುಜರಾತ್‌ನ ಭರೂಚ್ ಮೂಲದವರಾದ ಜಿಗೀಷಾ ಟೇಲರ್ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಸುಮಾರು 16 ವರ್ಷಗಳ ಕಾಲ ಎಲೆಕ್ಟ್ರಾನಿಕ್ಸ್ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದರು. ಆದರೆ, ಕುಟುಂಬದ ಜವಾಬ್ದಾರಿಗಳ ಕಾರಣದಿಂದಾಗಿ ಅವರು 2019ರಲ್ಲಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಬೇಕಾಯಿತು. 3 ವರ್ಷಗಳ ಕಾಲ ಮನೆಯಲ್ಲೇ ಇದ್ದ ಜಿಗೀಷಾ ಅವರಿಗೆ ಅವರ ಮಗ ಆದಿತ್ಯನೇ ಮತ್ತೆ ಓದಲು ದೊಡ್ಡ ಪ್ರೇರಣೆಯಾದನು ಎಂಬುದು ಮತ್ತೊಂದು ವಿಶೇಷ.
At 45 and 21, this mother – son duo graduated together from IIT Madras.
One returned to studies after years away. The other became her biggest supporter.
Their story is one you won’t forget. 🧵👇 pic.twitter.com/yTSfZIq0zn
— IIT Madras BS Programs (@iitm_bs) July 15, 2026
ಮಗನೇ ತಾಯಿಗೆ ಪ್ರೇರಣೆ:
ಜಿಗೀಷಾ ಅವರ ಮಗ ಆದಿತ್ಯ ಕಪಾಡಿಯಾ 2021ರ ಕೊವಿಡ್ ಸಾಂಕ್ರಾಮಿಕದ ಸಮಯದಲ್ಲಿ ಐಐಟಿ ಮದ್ರಾಸ್‌ನ ‘ಆನ್‌ಲೈನ್ ಬಿಎಸ್ ಇನ್ ಡೇಟಾ ಸೈನ್ಸ್ ಆ್ಯಂಡ್ ಅಪ್ಲಿಕೇಷನ್ಸ್’ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. ಮಗ ಮನೆಯಲ್ಲೇ ಕುಳಿತು ಸಂಖ್ಯಾಶಾಸ್ತ್ರ ಹಾಗೂ ಕಂಪ್ಯೂಟರ್ ಸಿಸ್ಟಮ್ಸ್ ಓದುವುದನ್ನು ನೋಡಿದ ಜಿಗೀಷಾ ಅವರಿಗೂ ಆ ವಿಷಯದ ಮೇಲೆ ಆಸಕ್ತಿ ಮೂಡಿತು. ಅಮ್ಮನೂ ಆ ವಿಷಯ ಕಲಿಯಲಿ ಎಂದು ಮಗ ಆದಿತ್ಯ ಕೂಡ ಅವರಿಗೆ ಬೆಂಬಲ ನೀಡಿದ್ದರು. ಮಗನ ನಿರಂತರ ಪ್ರೋತ್ಸಾಹದಿಂದಾಗಿ ಜಿಗೀಷಾ ಕೂಡ 2022ರ ಕೊನೆಯಲ್ಲಿ ಅದೇ ಕೋರ್ಸ್‌ಗೆ ಸೇರಿದರು.
ಇದನ್ನೂ ಓದಿ: ಕನಸ್ಸಲ್ಲಿ ಕಂಡಿದ್ದು ನಿಜವಾಯ್ತು, ಬರೋಬ್ಬರಿ 27 ಕೆಜಿ ಚಿನ್ನ ಸಿಕ್ತು, ಏನಿದು ಘಟನೆ?
ಬಹಳ ವರ್ಷಗಳ ನಂತರ ಮತ್ತೆ ವಿದ್ಯಾರ್ಥಿಯಾಗಿ ಓದುವುದು ಜಿಗೀಷಾ ಅವರಿಗೆ ಸುಲಭವಾಗಿರಲಿಲ್ಲ. ಮನೆಯ ಜವಾಬ್ದಾರಿಗಳ ನಡುವೆಯೇ ಅವರು ಕಠಿಣ ದಿನಚರಿ ರೂಢಿಸಿಕೊಂಡರು. ಪ್ರತಿದಿನ ಮುಂಜಾನೆ 4.30ಕ್ಕೆ ಎದ್ದು 7 ಗಂಟೆಯವರೆಗೆ ಓದುತ್ತಿದ್ದರು. ನಂತರ ಮನೆಗೆಲಸ ಮುಗಿಸಿ ಮಧ್ಯಾಹ್ನ ಮತ್ತೆ ಕಂಪ್ಯೂಟರ್ ಮುಂದೆ ಕುಳಿತು ಅಸೈನ್‌ಮೆಂಟ್‌ಗಳನ್ನು ಮಾಡುತ್ತಿದ್ದರು. ಕಾಲೇಜು ಪ್ರೊಫೆಸರ್ ಆಗಿರುವ ಅವರ ಪತಿ ಮತ್ತು ಮನೆಯವರು ಜಿಗೀಷಾ ಅವರ ಈ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ನೀಡಿದರು.
ಇದನ್ನೂ ಓದಿ: ಗರ್ಭದಲ್ಲಿರುವಾಗಲೇ ಅಮ್ಮನ ಆಕಳಿಕೆಯನ್ನು ಕಾಪಿ ಮಾಡುತ್ತಂತೆ ಮಗು!
ತಾಯಿ-ಮಗ ಇಬ್ಬರೂ ಕ್ಲಾಸ್‌ಮೇಟ್ಸ್:
ಆದಿತ್ಯ 2024ರಲ್ಲಿ ತನ್ನ ಬಿಎಸ್ (BS) ಪದವಿ ಪೂರ್ಣಗೊಳಿಸಿದರೆ, ಜಿಗೀಷಾ ಅವರು ಡಿಪ್ಲೊಮಾ ಪೂರ್ಣಗೊಳಿಸಿದರು. ಐಐಟಿ ಮದ್ರಾಸ್ ಘಟಿಕೋತ್ಸವ ಸಮಾರಂಭದಲ್ಲಿ ಇಬ್ಬರಿಗೂ ಬೇರೆ ಬೇರೆ ಸಾಲುಗಳಲ್ಲಿ ಆಸನ ನಿಗದಿಪಡಿಸಲಾಗಿತ್ತು. ಆದರೆ, ಘಟಿಕೋತ್ಸವದ ಹಿಂದಿನ ದಿನ ನಡೆದ ರಾತ್ರಿ ಔತಣಕೂಟದಲ್ಲಿ ಇವರ ಅಪರೂಪದ ಕಥೆಯನ್ನು ತಿಳಿದ ಸಹಪಾಠಿಯೊಬ್ಬರು ಐಐಟಿ ಮಂಡಳಿಗೆ ವಿಶೇಷ ಮನವಿ ಸಲ್ಲಿಸಿದ್ದರು. ಇದರ ಫಲವಾಗಿ, ಘಟಿಕೋತ್ಸವದ ವೇದಿಕೆಯ ಮೇಲೆ ತಾಯಿ ಮತ್ತು ಮಗನನ್ನು ಒಟ್ಟಿಗೆ ಕರೆದು ಪದವಿ ಪ್ರದಾನ ಮಾಡಲಾಯಿತು.
ಪ್ರಸ್ತುತ ಆದಿತ್ಯ ಅವರು ಡೇಟಾ ಸೈನ್ಸ್ ಇಂಟರ್ನ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದು, ಜಿಗೀಷಾ ಅವರು ತಮ್ಮ ಕಿರಿಯ ಮಗನ ದ್ವಿತೀಯ ಪಿಯುಸಿ ಓದಿಗೆ ಬೆಂಬಲ ನೀಡಲು ಸದ್ಯ ಉದ್ಯೋಗದ ಹುಡುಕಾಟವನ್ನು ನಿಲ್ಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ