Alamgir Alam: ಅಕ್ರಮ ಹಣ ವರ್ಗಾವಣೆ ಪ್ರಕರಣ; ಇಡಿಯಿಂದ ಜಾರ್ಖಂಡ್ ಸಚಿವ ಆಲಂಗೀರ್ ಆಲಂ ಬಂಧನ

Money Laundering Case: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರನ್ನು ರಾಂಚಿಯಲ್ಲಿ ತನಿಖಾ ಸಂಸ್ಥೆ ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಸಚಿವರ ವೈಯಕ್ತಿಕ ಕಾರ್ಯದರ್ಶಿ (ಪಿಎಸ್) ಸಂಜೀವ್ ಲಾಲ್ ಅವರ ಮನೆಯ ಸಹಾಯದಿಂದ ಭಾರೀ ನಗದು ವಸೂಲಾತಿಗೆ ಸಂಬಂಧಿಸಿದಂತೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Alamgir Alam: ಅಕ್ರಮ ಹಣ ವರ್ಗಾವಣೆ ಪ್ರಕರಣ; ಇಡಿಯಿಂದ ಜಾರ್ಖಂಡ್ ಸಚಿವ ಆಲಂಗೀರ್ ಆಲಂ ಬಂಧನ
ಆಲಂಗೀರ್ ಆಲಂ
Follow us
ಸುಷ್ಮಾ ಚಕ್ರೆ
|

Updated on:May 15, 2024 | 7:53 PM

ನವದೆಹಲಿ: ಜಾರ್ಖಂಡ್‌ನ (Jharkhand)  ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್‌ ಆಲಂ ಅವರ ಆಪ್ತ ಕಾರ್ಯದರ್ಶಿಗೆ ಸಂಬಂಧಿಸಿದ ಫ್ಲ್ಯಾಟ್‌ನಿಂದ 34 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಂಡ ಬೆನ್ನಲ್ಲೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ED) ಸಚಿವ ಆಲಂಗೀರ್ ಆಲಂ (Alamgir Alam) ಅವರನ್ನು ಬಂಧಿಸಿದೆ. ಮಂಗಳವಾರ ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಆಲಂಗೀರ್ ಆಲಂ ಅವರನ್ನು 9 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಇಂದು ಅವರನ್ನು ಮತ್ತೆ ವಿಚಾರಣೆಗೆ ಕರೆಯಲಾಗಿತ್ತು. ಇಂದು ಮತ್ತೆ 6 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು, ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಕಳೆದ ವಾರ ರಾಂಚಿಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆ ಸಹಾಯಕ ಜಹಾಂಗೀರ್ ಆಲಂ ವಾಸವಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಲ್ಲಿಂದ 32 ಕೋಟಿ ರೂ. ಹಾಗೂ ಇತರ ನಿವೇಶನಗಳಿಂದ 3 ಕೋಟಿ ರೂ.ಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದರು. ಸಂಜೀವ್ ಲಾಲ್ ಮತ್ತು ಜಹಾಂಗೀರ್ ಆಲಂ ಅವರನ್ನು ಮರುದಿನ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಲಾಯಿತು. ಅವರು ಪ್ರಸ್ತುತ ಇಡಿ ವಶದಲ್ಲಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇಡಿ ಶಾಕ್

ಆಲಂಗೀರ್ ಆಲಂ ಮತ್ತು ಅವರ ಸಹಾಯಕರ ವಿರುದ್ಧದ ಪ್ರಕರಣವು ಜಾರ್ಖಂಡ್ ಟೆಂಡರ್ ಹಗರಣಕ್ಕೆ ಸಂಬಂಧಿಸಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಟೆಂಡರ್‌ಗೆ ಬದಲಾಗಿ ಕಮಿಷನ್‌ನಿಂದ ಬಂದ ಹಣ ಇದಾಗಿದೆ ಎಂದು ಆರೋಪಿಸಲಾಗಿದೆ. ಮೇ 6ರಂದು, ಇಡಿ ಅಲಂಗೀರ್ ಆಲಂ ಅವರ ಪಿಎಸ್ ಮತ್ತು ಇತರ ನಿಕಟ ಸಹಚರರ ನಿವಾಸಗಳ ಮೇಲೆ ದಾಳಿ ನಡೆಸಿತು. ವಶಪಡಿಸಿಕೊಂಡ ಕರೆನ್ಸಿ ನೋಟುಗಳ ಎಣಿಕೆ ತಡರಾತ್ರಿಯೂ ಮುಂದುವರಿದಿದ್ದು, ಒಟ್ಟು 35.23 ಕೋಟಿ ರೂ. ಪತ್ತೆಯಾಗಿತ್ತು.

ಅಧಿಕಾರಿಗಳ ಪ್ರಕಾರ, ಜಹಾಂಗೀರ್ ಆಲಂ ಅವರು ಪ್ರಾಥಮಿಕ ವಿಚಾರಣೆಯಲ್ಲಿ ಕಮಿಷನ್ ಮತ್ತು ಲಂಚದಿಂದ ಸಂಪಾದಿಸಿದ ಹಣ ಅದು ಎಂದು ಒಪ್ಪಿಕೊಂಡರು. ಸಚಿವ ಅಲಂಗೀರ್ ಅವರು ತಮ್ಮ ಪಿಎಸ್ ಸಂಜೀವ್ ಕುಮಾರ್ ಲಾಲ್ ಅವರ ನಿವಾಸದಲ್ಲಿ ಜಹಾಂಗೀರ್ ಅವರನ್ನು ಸೇವಕರಾಗಿ ನೇಮಿಸಿಕೊಂಡಿದ್ದರು, ಇದಕ್ಕೂ ಮೊದಲು ಅವರು ಕೆಲವು ದಿನಗಳ ಕಾಲ, ಸಚಿವರ ನಿವಾಸದಲ್ಲಿಯೂ ಕೆಲಸ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 30 ಕೋಟಿ ರೂ. ನಗದು ಪತ್ತೆ: ಜಾರ್ಖಂಡ್​ ಸಚಿವ ಆಲಂಗೀರ್​ ಆಲಂ ಆಪ್ತ ಸಂಜೀವ್​ ಲಾಲ್ ಬಂಧನ

ಸಂಜೀವ್ ಕುಮಾರ್ ಲಾಲ್ ಅವರಿಗೆ ರಾಂಚಿಯ ಸರ್ ಸೈಯದ್ ರೆಸಿಡೆನ್ಸ್ ಅಪಾರ್ಟ್ ಮೆಂಟ್ ನಲ್ಲಿ ಫ್ಲಾಟ್ ಬಾಡಿಗೆ ನೀಡಿದ್ದರು. ಸಂಜೀವ್ ಅವರಿಗೆ ಒಂದು ಅಥವಾ ಎರಡು ದಿನಗಳಿಗೊಮ್ಮೆ ಒಂದು ಬ್ಯಾಗ್ ಅಥವಾ ಹಣದ ಬಂಡಲ್ ನೀಡುತ್ತಿದ್ದರು. ಅದನ್ನು ಅವರು ಈ ಫ್ಲಾಟ್‌ನ ಕಪಾಟುಗಳಲ್ಲಿ ಇಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಸಂಜೀವ್ ಅವರ ನಿವಾಸದಿಂದ 10 ಲಕ್ಷ ರೂಪಾಯಿ ಮತ್ತು ಅವರ ಪತ್ನಿಯ ನಿರ್ಮಾಣ ಕಂಪನಿ ಪಾಲುದಾರ ಬಿಲ್ಡರ್ ಮುನ್ನಾ ಸಿಂಗ್ ಅವರ ನಿವಾಸದಿಂದ 2.93 ಕೋಟಿ ರೂಪಾಯಿಗಳನ್ನು ಇಡಿ ವಶಪಡಿಸಿಕೊಂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Wed, 15 May 24