ದೆಹಲಿ: ಪ್ರಸ್ತುತ ಬಿಜೆಪಿ ಪಕ್ಷದಲ್ಲಿ ಇರುವ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತಿದ್ದರೆ ಅವರು ಮುಖ್ಯಮಂತ್ರಿ ಆಗುತ್ತಿದ್ದರು. ಆದರೆ, ಬಿಜೆಪಿ ಪಾಳಯ ಸೇರಿ ಹಿಂದಿನ ಸಾಲಿನಲ್ಲಿ ಕೂರುವಂತಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ (ಮಾರ್ಚ್ 8) ಹೇಳಿದ್ದಾರೆ. ಮೂಲಗಳ ಮಾಹಿತಿಯ ಪ್ರಕಾರ, ಕಾಂಗ್ರೆಸ್ನ ಯುವ ಮೋರ್ಚಾದೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಹೀಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಸಂಘಟನೆಯ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಸಿಂಧಿಯಾ ಕಾಂಗ್ರೆಸ್ನಲ್ಲೇ ಇದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು ಎಂದಿದ್ದಾರೆ. ಬಿಜೆಪಿ ಸೇರಿ ಹೀಗಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕೆಲಸ ಮಾಡಿ ಸಂಘಟನೆಯನ್ನು ಬಲಪಡಿಸುವ ಅವಕಾಶ ಸಿಂಧಿಯಾಗೆ ಇತ್ತು. ನೀವು ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತೀರಿ ಎಂದು ನಾನು ಹೇಳಿದ್ದೆ. ಆದರೆ, ಸಿಂಧಿಯಾ ಮತ್ತೊಂದು ಮಾರ್ಗವನ್ನು ಆಯ್ಕೆ ಮಾಡಿದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಷ್ಟಕ್ಕೇ ಮಾತು ನಿಲ್ಲಿಸದ ರಾಹುಲ್ ಗಾಂಧಿ, ‘ಬರೆದಿಟ್ಟುಕೊಳ್ಳಿ. ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಆ ಸ್ಥಾನ ಪಡೆಯಬೇಕಾದರೆ ಅವರು ಇಲ್ಲಿಗೆ ಬರಲೇ ಬೇಕು’ ಎಂದು ಹೇಳಿರುವ ಬಗ್ಗೆ ಮೂಲಗಳು ತಿಳಿಸಿವೆ. ಆರ್ಎಸ್ಎಸ್ ಸಿದ್ಧಾಂತದ ವಿರುದ್ಧ ಹೋರಾಡಬೇಕು. ಯಾರಿಗೂ ಹೆದರಬೇಕಾದ ಅವಶ್ಯಕತೆ ಇಲ್ಲ ಎಂದು ರಾಹುಲ್ ಗಾಂಧಿ ಪಕ್ಷದ ಯುವ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದೂ ತಿಳಿದುಬಂದಿದೆ.
ಜ್ಯೋತಿರಾಧಿತ್ಯ ಮಾಧವ್ರಾವ್ ಸಿಂಧಿಯಾ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿದ್ದರು. ತಮ್ಮ ತಂದೆ ಮಾಧವ್ರಾವ್ ಸಿಂಧಿಯಾ ಬಳಿಕ, 2002 ಫೆಬ್ರವರಿ 24ರಲ್ಲಿ ಅವರು ಕಾಂಗ್ರೆಸ್ ಲೋಕಸಭಾ ಸದಸ್ಯನಾಗಿ ಆಯ್ಕೆಯಾದರು. ಮಧ್ಯಪ್ರದೇಶದ ಗುಣ ಕ್ಷೇತ್ರದಲ್ಲಿ 2003ರಿಂದ 2019ರ ವರೆಗೂ ಸಿಂಧಿಯಾ ಕಾಂಗ್ರೆಸ್ ಲೋಕಸಭಾ ಸದಸ್ಯರಾಗಿದ್ದರು. 2019ರಲ್ಲಿ ಕೃಷ್ಣ ಪಾಲ್ ಸಿಂಗ್ ವಿರುದ್ಧ ಸೋಲು ಅನುಭವಿಸಿದರು. ಬಳಿಕ, ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಂಧಿಯಾ ಮಾರ್ಚ್ 10, 2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಇದನ್ನೂ ಓದಿ: ಬ್ರಿಟಿಷರನ್ನೇ ಓಡಿಸಿದ ನಮಗೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದು ಕಷ್ಟವೇ: ತಮಿಳುನಾಡಲ್ಲಿ ರಾಹುಲ್ ಗಾಂಧಿ ಪ್ರಶ್ನೆ
ಒಂದು ಸಿದ್ಧಾಂತ ಉಳಿದೆಲ್ಲಾ ಆಲೋಚನೆಗಳ ಮೇಲೆ ಸವಾರಿ ಮಾಡುತ್ತಿದೆ; BJP, RSS ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
Published On - 11:19 am, Tue, 9 March 21