ದಕ್ಷಿಣ ವಲಯ ಮಂಡಳಿ ಸಭೆ: ತಮಿಳುನಾಡು ಸಿಎಂ ವಿಜಯ್​​ ಮುಂದೆಯೇ ಕಾವೇರಿ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ದಕ್ಷಿಣ ರಾಜ್ಯಗಳಿಗೆ ಅನುದಾನ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ನ್ಯಾಯಯುತ ಪಾಲು ಕೋರಿದರು. ದೇಶದ ಆರ್ಥಿಕತೆಗೆ ದಕ್ಷಿಣದ ಕೊಡುಗೆಗೆ ಅನುಗುಣವಾಗಿ ಪ್ರಾತಿನಿಧ್ಯ, ಜಲ ವಿವಾದಗಳ 'ಕರ್ನಾಟಕ ಮಾದರಿ' ಹಾಗೂ ಹಣಕಾಸು ಆಯೋಗದ ಪಾಲು ಇಳಿಕೆಯಿಂದಾದ ನಷ್ಟ ಕುರಿತು ಪ್ರಸ್ತಾಪಿಸಿದರು. ಮಹಿಳಾ ಮೀಸಲಾತಿ ಜಾರಿಗೆ ಒತ್ತು ನೀಡಿದರು.

ದಕ್ಷಿಣ ವಲಯ ಮಂಡಳಿ ಸಭೆ: ತಮಿಳುನಾಡು ಸಿಎಂ ವಿಜಯ್​​ ಮುಂದೆಯೇ ಕಾವೇರಿ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಡಿಕೆ ಶಿವಕುಮಾರ್

Updated on: Aug 20, 2026 | 12:53 PM

ಮುಖ್ಯಾಂಶಗಳು

  • ದಕ್ಷಿಣ ಭಾರತಕ್ಕೆ ಅನುದಾನದಲ್ಲಿ ನ್ಯಾಯ ಸಿಗಲಿ
  • ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ
  • ಚೆನ್ನೈನಲ್ಲಿ ಕಾವೇರಿ ಧ್ವನಿ ಎತ್ತಿದ ಡಿ.ಕೆ. ಶಿವಕುಮಾರ್

ಮಹಾಬಲಿಪುರಂ, ಆ.20: “ಕರ್ನಾಟಕ ಬಲಿಷ್ಠವಾದಾಗ ದಕ್ಷಿಣ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದರೆ ಭಾರತವೂ ಬಲಿಷ್ಠವಾಗುತ್ತದೆ. ದೇಶದ ಅಭಿವೃದ್ಧಿಗೆ ಶೇ.33ರಷ್ಟು ಜಿಡಿಪಿ ಕೊಡುಗೆ ನೀಡುವ ದಕ್ಷಿಣ ಭಾರತಕ್ಕೆ ಅನುದಾನ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ಸೂಕ್ತ ನ್ಯಾಯ ಸಿಗಬೇಕು” ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಗುರುವಾರ ನಡೆದ 31ನೇ ದಕ್ಷಿಣ ವಲಯ ಮಂಡಳಿ (Southern Zonal Council) ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇನ್ನು ಈ ಸಭೆಯಲ್ಲಿ ತಮಿಳುನಾಡು ಸಿಎಂ ವಿಜಯ್​​​ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಿದರು. ಅವರ ಮುಂದೆಯೇ ನೀರಿನ ಬಗ್ಗೆ  ಹಾಗೂ ಕರ್ನಾಟಕದ ಪರವಾಗಿ ಮಾತನಾಡಿದ್ದಾರೆ.

ಈ ಸಭೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಲವು ಪ್ರಮುಖ ಅಂಶಗನ್ನು ಎತ್ತಿದ್ದಾರೆ. ದಕ್ಷಿಣದ 5 ರಾಜ್ಯಗಳು ದೇಶದ ಒಟ್ಟು ಜಿಡಿಪಿಗೆ ಶೇ.33ರಷ್ಟು ಕೊಡುಗೆ ನೀಡುತ್ತಿದ್ದು, ದೇಶದ ಆರ್ಥಿಕತೆಯ ಎಂಜಿನ್‌ನಂತೆ ಕೆಲಸ ಮಾಡುತ್ತಿವೆ. ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ ಕರ್ನಾಟಕದ್ದು ಶೇ. 42 ರಷ್ಟು ಪಾಲು. ದೇಶದ ಜಿಡಿಪಿಗೆ ಕರ್ನಾಟಕ ಶೇ. 9 ರಷ್ಟು ಕೊಡುಗೆ ನೀಡುತ್ತದೆ. ಆದರೆ, 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕದ ಪಾಲು ಶೇ. 4.7 ರಿಂದ ಶೇ. 3.6 ಕ್ಕೆ ಇಳಿಕೆಯಾಗಿದ್ದು, 6 ವರ್ಷಗಳಲ್ಲಿ 65,000 ಕೋಟಿ ರೂ. ನಷ್ಟವಾಗಿದೆ. ಶಿಫಾರಸು ಮಾಡಿದ್ದ 11,495 ಕೋಟಿ ರೂ. ವಿಶೇಷ ಅನುದಾನವೂ ಬಂದಿಲ್ಲ ಎಂದು ಹೇಳಿದ್ದಾರೆ.

 Karnataka Cm D.k. Shivakumar (1)

ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಸಮಯದಲ್ಲಿ ದಕ್ಷಿಣ ಭಾರತದ ರಾಜಕೀಯ ಪ್ರಾತಿನಿಧ್ಯ ಮತ್ತು ಧ್ವನಿ ಕಡಿಮೆಯಾಗಬಾರದು. ದೇಶದ ಕರೆಯನ್ನು ಸ್ವೀಕರಿಸಿ ಜನಸಂಖ್ಯೆಯನ್ನು ಶಿಸ್ತುಬದ್ಧವಾಗಿ ನಿಯಂತ್ರಿಸಿದ್ದೇ ದಕ್ಷಿಣ ಭಾರತದ ಧ್ವನಿ ದುರ್ಬಲಗೊಳ್ಳಲು ಕಾರಣವಾಗಬಾರದು. 1971ರ ಜನಸಂಖ್ಯಾ ಆಧಾರವನ್ನೇ ಗೌರವಿಸಬೇಕು. ಮುಂದಿನ ಜನಗಣತಿವರೆಗೆ ಕಾಯದೆ, ಹಾಲಿ ಇರುವ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲೇ ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು.

ಇಲ್ಲಿದೆ ನೋಡಿ ವಿಡಿಯೋ:

DK And Vijay Meeting: ಕೇಂದ್ರ ಸಚಿವ ಅಮಿತ್ ಶಾ ಸಭೆಯಲ್ಲಿ ಕರ್ನಾಟಕ ಸಿಎಂ ತಮಿಳುನಾಡು ಸಿಎಂ ಭೇಟಿ | #TV9D

“ನೀರು ನಮ್ಮನ್ನು ಒಗ್ಗೂಡಿಸಬೇಕು, ವಿಭಜಿಸಬಾರದು” ಎಂದ ಸಿಎಂ, ಕರ್ನಾಟಕವು ಅಂತಾರಾಜ್ಯ ಜಲ ವಿವಾದಗಳನ್ನು ಸಹಕಾರ ಮತ್ತು ಸಮಾನತೆಯ ಆಧಾರದ ಮೇಲೆ ಬಗೆಹರಿಸಿಕೊಳ್ಳುವ ‘ಕರ್ನಾಟಕ ಮಾದರಿ’ಯನ್ನು ಅನುಸರಿಸುತ್ತಿದೆ ಎಂದರು. ರಾಜ್ಯಗಳ ಖನಿಜ ತೆರಿಗೆ ಹಕ್ಕನ್ನು ಕಸಿಯುವ Mines & Minerals (MMDR) Act, 2026 ಕಾಯ್ದೆಯನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು. ಮಾದಕ ವಸ್ತುಗಳ (Drugs) ಕಳ್ಳಸಾಗಣೆ ತಡೆಯಲು ಕಠಿಣ ಕಾನೂನು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ: ಚಾಮರಾಜನಗರ ಎನ್‌ಕೌಂಟರ್​​​​ಗೆ ತಿರುವು, ನಕಲಿ ಔಷಧಿ ಜಾಲ: ವಿಧಾನಸಭೆಯಲ್ಲಿ ಆಡಳಿತ-ವಿಪಕ್ಷಗಳ ನಡುವೆ ಗದ್ದಲ

ವಿಜಯ್​​- ಅಮಿತ್​ ಶಾ ಮುಂದೆ ನೀರಿನ ಬಗ್ಗೆ ಪ್ರಸ್ತಾಪಿಸಿದ ಸಿಎಂ ಡಿಕೆಶಿ:

ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ದಕ್ಷಿಣ ಪರ್ಯಾಯ ದ್ವೀಪದ ಜೀವನಾಡಿಗಳಾಗಿವೆ. ನದಿಗಳು ಯಾವುದೇ ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ. ನೀರು ರಾಜ್ಯಗಳನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ಜೂನ್ 25 ರಂದು ಕೇಂದ್ರ ಜಲಶಕ್ತಿ ಸಚಿವರ ಉಪಸ್ಥಿತಿಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳ ಜೊತೆ ನಡೆಸಿದ ಜಂಟಿ ಸಭೆಯನ್ನು ಉದಾಹರಿಸಿದ ಕರ್ನಾಟಕ, “ನಾವು ಸ್ಪರ್ಧಿಗಳಾಗಿ ಅಲ್ಲ, ಪಾಲುದಾರರಾಗಿ ಕುಳಿತು ಚರ್ಚಿಸಿದ್ದೇವೆ” ಎಂದು ಪ್ರತಿಪಾದಿಸಿತು. ಜಲ ಹಂಚಿಕೆ ವಿಷಯದಲ್ಲಿ ಸಮಾನತೆ, ಪಾರದರ್ಶಕತೆ ಮತ್ತು ಸಹಕಾರ ಎಂಬ 3 ಸೂತ್ರಗಳನ್ನು ಕರ್ನಾಟಕ ಅನುಸರಿಸುತ್ತದೆ.

 Karnataka Cm D.k. Shivakumar (2)

ನೆರೆ ರಾಜ್ಯಗಳ ಹಕ್ಕುಗಳನ್ನು ಗೌರವಿಸುವಂತೆಯೇ, ನ್ಯಾಯಮಂಡಳಿಗಳ ತೀರ್ಪಿನಂತೆ ಕರ್ನಾಟಕಕ್ಕೆ ದೊರೆಯಬೇಕಾದ ಕಾನೂನುಬದ್ಧ ನೀರಿನ ಪಾಲು ಹಾಗೂ ನೀರಾವರಿ ಯೋಜನೆಗಳ ಸಮಯೋಚಿತ ಅನುಷ್ಠಾನಕ್ಕೆ ಸಹಕಾರ ಕೋರಲಾಯಿತು. ಕೃಷ್ಣಾ ನದಿ ವಿವಾದ, ಮೇಲ್ದಂಡೆ ಭದ್ರಾ ಯೋಜನೆ ಹಾಗೂ ನದಿಗಳ ಜೋಡಣೆ ವಿಷಯದಲ್ಲಿ ಕರ್ನಾಟಕದ ನಿಲುವನ್ನು ಸ್ಪಷ್ಟಪಡಿಸಲಾಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 12:43 pm, Thu, 20 August 26

Loading...
Unable to load recommendations.
Follow Us