ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೆಗಾ ಆಪರೇಷನ್: 5 ಹೈಬ್ರಿಡ್ ಉಗ್ರರು ಸೇರಿ 13 ದೇಶವಿರೋಧಿಗಳ ಬಂಧನ, ಭಾರೀ ಶಸ್ತ್ರಾಸ್ತ್ರ ಜಪ್ತಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 90 ಗಂಟೆಗಳ ಜಂಟಿ ಕಾರ್ಯಾಚರಣೆ ನಡೆಸಿ, ದೊಡ್ಡ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿವೆ. TRF ಬೆಂಬಲಿತ ಹೈಬ್ರಿಡ್ ಉಗ್ರರು ನಡೆಸಲು ಹೊರಟಿದ್ದ ಟಾರ್ಗೆಟೆಡ್ ಕಿಲ್ಲಿಂಗ್ ಕಾರ್ಯಾಚರಣೆಯನ್ನು ತಡೆಯಲಾಗಿದೆ. 13 ದೇಶವಿರೋಧಿಗಳನ್ನು ಬಂಧಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಡಿಯಾಚೆಗಿನ ನೆಟ್‌ವರ್ಕ್ ಭೇದಿಸಲು ತನಿಖೆ ತೀವ್ರಗೊಳಿಸಲಾಗಿದೆ.

ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೆಗಾ ಆಪರೇಷನ್: 5 ಹೈಬ್ರಿಡ್ ಉಗ್ರರು ಸೇರಿ 13 ದೇಶವಿರೋಧಿಗಳ ಬಂಧನ, ಭಾರೀ ಶಸ್ತ್ರಾಸ್ತ್ರ ಜಪ್ತಿ
ಜಮ್ಮು ಮತ್ತು ಕಾಶ್ಮೀರ ಭದ್ರತೆ

Updated on: Aug 28, 2026 | 8:26 AM

ಶ್ರೀನಗರ, ಆಗಸ್ಟ್ 28: ಜಮ್ಮು ಮತ್ತು ಕಾಶ್ಮೀರ(Jammu and Kashmir)ದಲ್ಲಿ ಶಾಂತಿ ಕದಡಲು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ‘ಟಾರ್ಗೆಟೆಡ್ ಕಿಲ್ಲಿಂಗ್’ ನಡೆಸಲು ರೂಪಿಸಲಾಗಿದ್ದ ಬೃಹತ್ ಭಯೋತ್ಪಾದಕ ಸಂಚನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿವೆ.

ಜಮ್ಮು-ಕಾಶ್ಮೀರ ಪೊಲೀಸ್, ಭಾರತೀಯ ಸೇನೆ (ರಾಷ್ಟ್ರೀಯ ರೈಫಲ್ಸ್) ಮತ್ತು ಸಿಆರ್‌ಪಿಎಫ್ (CRPF) ನಡೆಸಿದ 90 ಗಂಟೆಗಳ ನಿರಂತರ ಜಂಟಿ ಕಾರ್ಯಾಚರಣೆಯಲ್ಲಿ 5 ಹೈಬ್ರಿಡ್ ಭಯೋತ್ಪಾದಕರು ಹಾಗೂ 8 ಓವರ್‌ಗ್ರೌಂಡ್ ವರ್ಕರ್‌ಗಳು ಸೇರಿದಂತೆ ಒಟ್ಟು 13 ದೇಶವಿರೋಧಿಗಳನ್ನು ಬಂಧಿಸಲಾಗಿದೆ.

ಯಾವುದೇ ಹಿಂದಿನ ಅಪರಾಧ ದಾಖಲೆಯಿಲ್ಲದ ಫರ್ಹಾನ್ ಅಹ್ಮದ್ ವಾನಿ, ಸೊಹೈಬ್ ಅಹ್ಮದ್ ಪಾಲಾ, ಸಲ್ಮಾನ್ ಅಬ್ಬಾಸ್ ಲೋನ್, ನಿದಾಶ್ ಅಹ್ಮದ್ ರೇಶಿ ಮತ್ತು ಫೈಜಲ್ ಅಕ್ಬರ್ ಎಂಬ 5 ಜನರನ್ನು 4 ಪಿಸ್ತೂಲ್‌ಗಳು ಹಾಗೂ 2 ಗ್ರೆನೇಡ್‌ಗಳೊಂದಿಗೆ ಬಂಧಿಸಲಾಗಿದೆ.

ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಇತರ ಸಂಘಟನೆಗಳ ಪೋಸ್ಟರ್‌ಗಳು, ಗ್ರೆನೇಡ್‌ಗಳು ಹಾಗೂ ಎಕೆ-47 ಮ್ಯಾಗಜೀನ್‌ಗಳ ಸಮೇತ ಸಂಚರಿಸುತ್ತಿದ್ದ ಆರು ಉಗ್ರ ಸಹಚರರನ್ನು ಎರಡು ಪ್ರತ್ಯೇಕ ಚೆಕ್‌ಪೋಸ್ಟ್‌ಗಳಲ್ಲಿ ಸೆರೆಹಿಡಿಯಲಾಯಿತು. ಪುಲ್ವಾಮಾ ಕಾಡಿನಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲಿ ಅಡಗಿಸಿಟ್ಟಿದ್ದ ಎಕೆ-ರೈಫಲ್, ಐಇಡಿ , 10 ಹ್ಯಾಂಡ್ ಗ್ರೆನೇಡ್‌ಗಳು ಮತ್ತು 100 ಕ್ಕೂ ಹೆಚ್ಚು ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತಷ್ಟು ಓದಿ: ‘ಜಮ್ಮು ಕಾಶ್ಮೀರ ಭಾರತದ ಪ್ರಮುಖ ಭಾಗ’ ಎಂದ ಅಮೆರಿಕಕ್ಕೆ ಪಾಕಿಸ್ತಾನದಿಂದ ಸಮನ್ಸ್!

ದಾಖಲೆಯಿಲ್ಲದ ಮುಖಗಳು: ಇವರು ಭದ್ರತಾ ಸಂಸ್ಥೆಗಳ ವಾಂಟೆಡ್ ಪಟ್ಟಿಯಲ್ಲಿ ಇರುವುದಿಲ್ಲ. ಸಮಾಜದಲ್ಲಿ ವಿದ್ಯಾರ್ಥಿಗಳು, ದಿನಗೂಲಿ ನೌಕರರು ಅಥವಾ ಅಂಗಡಿಕಾರರಂತೆ ಸಾಮಾನ್ಯ ಜೀವನ ನಡೆಸುತ್ತಿರುತ್ತಾರೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಬೆಂಬಲಿತ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಅಥವಾ ಯುಎಲ್‌ಸಿ (ULC) ಗುಂಪುಗಳು ಸೋಷಿಯಲ್ ಮೀಡಿಯಾ ಮೂಲಕ ಇವರನ್ನು ಸಂಪರ್ಕಿಸಿ ಮೂಲಭೂತವಾದಿಗಳನ್ನಾಗಿ ಮಾಡುತ್ತವೆ.

ಇವರಿಗೆ ಪಿಸ್ತೂಲ್ ಅಥವಾ ಗ್ರೆನೇಡ್ ನೀಡಿ ನಿರ್ದಿಷ್ಟ ಹತ್ಯೆ ಅಥವಾ ದಾಳಿ ನಡೆಸಲು ಆದೇಶಿಸಲಾಗುತ್ತದೆ. ದಾಳಿ ಮುಗಿದ ತಕ್ಷಣ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ಮರಳಿ ಸಾಮಾನ್ಯ ಜೀವನಕ್ಕೆ ಮರಳುವುದರಿಂದ ಇವರನ್ನು ಪತ್ತೆಹಚ್ಚುವುದು ಸವಾಲಾಗಿರುತ್ತದೆ.

ಮುಂಬರುವ ದಿನಗಳಲ್ಲಿ ಸಂಭವನೀಯ ಒಳನುಸುಳುವಿಕೆ ಮತ್ತು ದಾಳಿಗಳನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿಗಳು, ಪ್ರಮುಖ ನಗರ ಚೌಕಗಳು ಮತ್ತು ಗಡಿ ಗ್ರಾಮಗಳಲ್ಲಿ ಹೆಚ್ಚುವರಿ ಪಡೆಗಳು, ಡ್ರೋನ್ ಕಣ್ಗಾವಲು ಹಾಗೂ ಮೊಬೈಲ್ ವೆಹಿಕಲ್ ಚೆಕ್‌ಪೋಸ್ಟ್‌ಗಳನ್ನು ನಿಯೋಜಿಸಲಾಗಿದೆ.

ಬಂಧಿತರಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಗಡಿಯಾಚೆಗಿನ ಹ್ಯಾಂಡ್ಲರ್‌ಗಳ ಜಾಲವನ್ನು ಭೇದಿಸಲು ತನಿಖೆ ತೀವ್ರಗೊಳಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us