ಕೇರಳ: 43 ಗಂಟೆಗಳಿಗಿಂತಲೂ ಹೆಚ್ಚು ಕಾಲ ಮಲಂಬುಳ ಬೆಟ್ಟದ ಸೀಳಿನಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ ಸೇನಾಪಡೆ
ಕೇರಳದ ಪಾಲಕ್ಕಾಡ್ನಲ್ಲಿ ಟ್ರೆಕ್ಕಿಂಗ್ ವೇಳೆ ಬೆಟ್ಟದ ತುದಿಯಿಂದ ಜಾರಿ ಬಿದ್ದು ಬೆಟ್ಟದ ಸೀಳಿನಲ್ಲಿ ಸಿಲುಕಿಕೊಂಡಿದ್ದ ಬಾಬು ಎಂಬ ಯುವಕನನ್ನು ಸೇನಾಪಡೆ ರಕ್ಷಿಸಿದೆ.
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ (Palakkad) ಜಿಲ್ಲೆಯ ಮಲಂಬುಳ ಗ್ರಾಮದ (Malampuzha village) ಬೆಟ್ಟವೊಂದರ ಸೀಳಿನಲ್ಲಿ 43 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ ಬಾಬು (23) ಅವರನ್ನು ಮರಳಿ ಕರೆತರುವ ಕಾರ್ಯಾಚರಣೆ (Rescue Operation) ಯಶಸ್ವಿಯಾಗಿದೆ. ಸೇನಾ ತಂಡ ಬಾಬುವಿನ ಕಡೆ ತಲುಪಿದ್ದುಅವರನ್ನು ನಿಧಾನವಾಗಿ ಮೇಲೆತ್ತಿದೆ. ರಾತ್ರಿಯೇ ಸ್ಥಳಕ್ಕಾಗಮಿಸಿದ ಸೇನಾ ತಂಡ ಬೆಟ್ಟದ ತುದಿ ತಲುಪಿ ಕೆಳಗೆ ಬಾಬು ಕುಳಿತಿದ್ದ ಜಾಗಕ್ಕೆ ಹಗ್ಗ ಬಿಗಿದಿತ್ತು. ಸೈನಿಕರು ಬಾಬು ಜೊತೆ ಮಾತನಾಡಿದ್ದಾರೆ. ಸುರಕ್ಷತಾ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸಿ ಬಾಬು ಅವರನ್ನು ಸೇನೆ ಮೇಲೆತ್ತಿದೆ. ಕರ್ನಲ್ ಶೇಖರ್ ಅತ್ರಿ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು ಕೇರಳ ಮೂಲದ ಲೆಫ್ಟಿನೆಂಟ್ ಕರ್ನಲ್ ಹೇಮಂತ್ ರಾಜ್ ಕೂಡ ತಂಡದಲ್ಲಿದ್ದಾರೆ. ಬಾಬು ಬೆಟ್ಟದ ತುದಿಯನ್ನು ತಲುಪಿದ ನಂತರ ಸೇನಾ ಅಧಿಕಾರಿಗಳು ಅವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಬಾಬು ಅವರನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಇದಕ್ಕಾಗಿ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ. ಸೇನಾ ತಂಡದ ಯೋಧ ಬಾಬುವಿನ ಪಕ್ಕಕ್ಕೆ ಬಂದು ಊಟ, ನೀರು ಕೊಟ್ಟ ನಂತರ ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸಿದ್ದ ಯೋಧ ಬಾಬು ಅವರನ್ನು ಮೇಲಕ್ಕೆ ಕರೆದುಕೊಂಡು ಬಂದರು. ಬೆಳಗ್ಗೆ 9.30ಕ್ಕೆ ಆರಂಭವಾದ 40 ನಿಮಿಷಗಳ ಕಾರ್ಯಾಚರಣೆಯಲ್ಲಿ ಸೇನೆಯು ಬಾಬುನನ್ನು ಬೆಟ್ಟದ ತುದಿಗೆ ಕರೆದೊಯ್ದಿತು. ಬೆಟ್ಟದ ತುದಿಯಲ್ಲಿ ಬಂದಿಳಿದ ಬಳಿಕ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ನಲ್ಲಿ ಕಂಚಿಕೋಡ್ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯುವ ಬಗ್ಗೆಯೂ ಚಿಂತನೆ ನಡೆದಿದೆ.
viral video : ಕೇರಳದ ಬೆಟ್ಟವೊಂದರಲ್ಲಿ ಚಾರಣಕ್ಕೆ ತೆರಳಿದ ವ್ಯಕ್ತಿ 40ಕ್ಕೂ ಅಧಿಕ ಗಂಟೆಗಳ ಕಾಲ ಬಂಡೆ ಮಧ್ಯೆ ಸಿಲುಕಿಕೊಂಡಿದ್ದ ಯುವಕನನ್ನು ರಕ್ಷಿಸಿದ ಭಾರತೀಯ ಸೇನಾ ಪಡೆಯ ಯೋಧರು..!ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಮಸ್ತ ಯೋಧ ತಂಡಕ್ಕೆ ಬಿಗ್ ಸೆಲ್ಯೂಟ್#indianarmy #rajanathsingh #pmoindia #narendramodi #TV9Kannada pic.twitter.com/6k1AmPcUkJ
— TV9 Kannada (@tv9kannada) February 10, 2022
ಯುವಕನ ಆರೋಗ್ಯದ ಬಗ್ಗೆ ಸೇನೆಯಿಂದ ಸಂದೇಶ ಬಂದ ನಂತರ ಆತನನ್ನು ಹೇಗೆ ತಲುಪಿಸಬೇಕು ಎಂಬುದರ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ಬೆಳಗ್ಗೆ 9.30ರ ಸುಮಾರಿಗೆ ತಮ್ಮ ಬಳಿಗೆ ಬಂದು ಧೈರ್ಯ ತುಂಬಿದ ಯೋಧನ ಸಹಾಯದಿಂದ ಬಾಬು ಬೆಟ್ಟ ಹತ್ತಲು ಆರಂಭಿಸಿದರು. ಹಗ್ಗ ಸೇರಿದಂತೆ ಸುರಕ್ಷತಾ ಕ್ರಮಗಳ ಮೂಲಕ ಬಾಬು ರಕ್ಷಣೆಗೆ ತುಕಡಿಗಳು ಯತ್ನಿಸುತ್ತಿವೆ. ಬೆಟ್ಟದ ತುದಿ ತಲುಪಿದ ಬಳಿಕ ಬಾಬು ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುವುದು. ಇದಾದ ನಂತರ, ಬಾಬು ಅವರನ್ನು ಪಡೆಗಳೊಂದಿಗೆ ಆಸ್ಪತ್ರೆಗೆ ವರ್ಗಾಯಿಸಬೇಕೆ ಅಥವಾ ಹೆಲಿಕಾಪ್ಟರ್ ಮೂಲಕ ವರ್ಗಾಯಿಸಬೇಕೆ ಎಂದು ನಿರ್ಧರಿಸಲಾಗುವುದು.
ಭೂಮಾಪನ ಇಲಾಖೆಯ ಡ್ರೋನ್ ತಂಡವೂ ಸ್ಥಳಕ್ಕಾಗಮಿಸಿ ದೃಶ್ಯಗಳನ್ನು ರಕ್ಷಣಾ ಕಾರ್ಯಕರ್ತರಿಗೆ ಕಳುಹಿಸಲಾಗಿತ್ತು . ಬೆಟ್ಟದ ಮೇಲೆ ಪರ್ವತಾರೋಹಣದಲ್ಲಿ 20 ತಜ್ಞರ ಎನ್‌ಡಿಆರ್‌ಎಫ್ ತಂಡವನ್ನು ಸಹ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಎನ್‌ಡಿಆರ್‌ಎಫ್ ತಂಡ ಕೂಡ ಬಾಬು ಅವರನ್ನು ತಲುಪಲು ಮುಂದಾಗಿತ್ತು.
ಕಾರ್ಯಾಚರಣೆ ನಡೆದದ್ದು ಹೀಗೆ
ಭಯಪಡಬೇಡಿ ಎಂದು ಸೇನಾ ತಂಡ ಹೇಳಿದಾಗ, ‘ಇಲ್ಲ’ ಎಂದು ಬಾಬು ಉತ್ತರಿಸಿದರು. ‘ನೀರು ಬರುತ್ತಿದೆ, ಬೊಬ್ಬೆ ಹಾಕಬೇಡಿ’ ಎಂದು ಸೇನಾ ತಂಡ ಬಾಬುಗೆ ಹೇಳಿತ್ತು. ರಕ್ಷಣಾ ತಂಡವು ಕಾರ್ಯವಿಧಾನಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿತ್ತು. ಬಾಬು ಅವರ ಆರೋಗ್ಯ ತೃಪ್ತಿಕರವಾಗಿದೆ ಎಂದು ಸೇನೆ ಹೇಳಿತ್ತು. ಬಾಬು ಸುಸ್ತಾಗುತ್ತಿರುವುದರಿಂದ ಹೆಚ್ಚು ಜೋರಾಗಿ ಮಾತನಾಡದಂತೆ ಕೇಳಿಕೊಂಡಿತ್ತು. ಸೇನಾ ಇಂಜಿನಿಯರಿಂಗ್ ವಿಭಾಗ ಮತ್ತು ಎನ್‌ಡಿಆರ್‌ಎಫ್ ತಂಡಗಳು ಪ್ರಸ್ತುತ ಬೆಟ್ಟದ ತುದಿಯಲ್ಲಿ ಬೀಡುಬಿಟ್ಟಿದ್ದವು. ಅವರೊಂದಿಗೆ ಕೆಲವು ಸ್ಥಳೀಯರು ಮತ್ತು ಪರ್ವತಾರೋಹಣ ತಜ್ಞರು ಇದ್ದಾರೆ. ಬಾಬುವಿಗೆ ಆಹಾರ, ನೀರು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಮೊದಲ ಪ್ರಯತ್ನವಾಗಿದೆ.
ಮಂಗಳವಾರ ರಾತ್ರಿ ಎರಡು ಸೇನಾ ತಂಡಗಳು ಅತ್ಯಾಧುನಿಕ ಉಪಕರಣಗಳೊಂದಿಗೆ ಘಟನಾ ಸ್ಥಳಕ್ಕೆ ಬಂದಿದ್ದವು. ಪರ್ವತಾರೋಹಣ ತಜ್ಞರು ಸೇರಿದಂತೆ ಸೇನಾ ತಂಡ ಬೆಂಗಳೂರಿನಿಂದ ಸೂಲೂರು ಮಾರ್ಗವಾಗಿ ಆಗಮಿಸಿದ್ದು, ಮತ್ತೊಂದು ತಂಡ ಊಟಿ ಮತ್ತು ವೆಲ್ಲಿಂಗ್ಟನ್‌ನಿಂದ ಬಂದಿತ್ತು. ಪೊಲೀಸ್ ಭಯೋತ್ಪಾದನಾ ನಿಗ್ರಹ ತಂಡದ ಸದಸ್ಯರು ಸಹ ಸಹಾಯ ಮಾಡಲು ರಾತ್ರಿ ಮಲಪ್ಪುರಂನಿಂದ ಆಗಮಿಸಿದ್ದರು.
ಸೋಮವಾರ ರಾತ್ರಿ ಅರಣ್ಯ, ಪೊಲೀಸ್ ಹಾಗೂ ಅಗ್ನಿಶಾಮಕ ಅಧಿಕಾರಿಗಳ ತಂಡ ಬೆಟ್ಟ ಹತ್ತಿದರೂ ಕತ್ತಲಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ನಡೆದಿಲ್ಲ. ಮಂಗಳವಾರ ಬೆಳಗ್ಗೆ ಮತ್ತೊಂದು ಗುಂಪು ಬೆಟ್ಟ ಹತ್ತಿದರೂ ಪ್ರಯೋಜನವಾಗಲಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಗ್ಗಗಳನ್ನು ಬಿಡಿಸಿ ಕಮರಿಗೆ ತಲುಪಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಆಗಮಿಸಿತು. ಆದರೆ ಭೂಪ್ರದೇಶ ಮತ್ತು ಬಲವಾದ ಗಾಳಿಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿತ್ತು. ಡ್ರೋನ್ ಮೂಲಕ ಆಹಾರ ತಲುಪಿಸುವ ಪ್ರಯತ್ನವೂ ವಿಫಲವಾಗಿದ್ದು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಆದಿವಾಸಿಗಳು ನೆರವಿಗೆ ಬಂದಿದ್ದರು.
ಬಾಬು ಮತ್ತು 3 ಸ್ನೇಹಿತರು ಸೋಮವಾರ ಬೆಳಿಗ್ಗೆ ಪರ್ವತ ಹತ್ತಿದ್ದರು. 1000 ಮೀಟರ್ ಎತ್ತರದ ಪರ್ವತವನ್ನು ಹತ್ತುವಾಗ, ಬಾಬು ಅವರ ಸ್ನೇಹಿತರು ವಿಶ್ರಾಂತಿ ಪಡೆದರು, ಆದರೆ ಬಾಬು ಸ್ವಲ್ಪ ಎತ್ತರಕ್ಕೆ ಏರಿದ್ದು ಅಲ್ಲಿಂದ ಜಾರಿ ಬಿದ್ದಿದ್ದರು. ಬಿದ್ದ ರಭಸಕ್ಕೆ ಅವರ ಕಾಲಿಗೆ ಗಾಯವಾಗಿದೆ.
ಬಾಬು ಅವರೇ ಮೊಬೈಲ್ ನಲ್ಲಿ ಸಿಕ್ಕಿಬಿದ್ದ ಸ್ಥಳದ ಫೋಟೋ ತೆಗೆದು ತನ್ನ ಸ್ನೇಹಿತರು ಹಾಗೂ ಪೊಲೀಸರಿಗೆ ಕಳುಹಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ರಕ್ಷಿಸುವಂತೆ ಮನವಿ ಮಾಡಿದರು. ರಾತ್ರಿ ಮೊಬೈಲ್ ಫ್ಲ್ಯಾಷ್ ಮಾಡಿ ಬೆಳಗ್ಗೆ ಶರ್ಟ್ ಬೀಸಿ ತೋರಿಸುವ ಮೂಲಕ ರಕ್ಷಣಾ ಕಾರ್ಯಕರ್ತರಿಗೆ ಕಾಣಿಸಲು ಯತ್ನಿಸಿದರು. ಡ್ರೋನ್ ಕಣ್ಗಾವಲಿನಿಂದ ಬಾಬು ಇರುವ ಜಾಗ ಪತ್ತೆಯಾಗಿತ್ತು.
ಇದನ್ನೂ ಓದಿ: ರಾಜ್ಕುಮಾರ್ ಗೌರವ ಡಾಕ್ಟರೇಟ್ ಪಡೆದು 46 ವರ್ಷ ಪೂರ್ಣ; ಕೋಟ್ಯಂತರ ಜನರಿಗೆ ವರನಟ ಸ್ಫೂರ್ತಿ
Published On - 10:09 am, Wed, 9 February 22