ಬ್ರಾಹ್ಮಣರಿಗೆ ಪಾದಪೂಜೆ ಮಾಡುವುದನ್ನ ಕೈಬಿಡಿ: ಪುರಾತನ ಆಚರಣೆಗಳು ಕೇರಳಕ್ಕೆ ಅವಮಾನಕರ -ದೇವಸ್ವಂ ಸಚಿವ ಆದೇಶ
ದೇವಸ್ವಂ ಸಚಿವ ಆರ್ ರಾಧಾಕೃಷ್ಣನ್ ಸಹ ಕೊಚ್ಚಿನ್ ದೇವಸ್ವಂ ಮಂಡಳಿಯಿಂದ (CDB) ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. CDB ಅಧ್ಯಕ್ಷ ವಿ ನಂದಕುಮಾರ್ ಅವರನ್ನು ಸಂಪರ್ಕಿಸಿದ ಸಚಿವ ರಾಧಾಕೃಷ್ಣನ್, ಪುರಾತನ ಸಂಪ್ರದಾಯಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ತಿರುವನಂತಪುರ: ದೇಗುಲದಲ್ಲಿ ಬ್ರಾಹ್ಮಣರಿಗೆ ಪಾದಪೂಜೆ ಮಾಡಿದ ಕುರಿತಾದ ಪತ್ರಿಕಾ ವರದಿಯನ್ನು ಆಧರಿಸಿ ಕೇರಳ ಹೈಕೋರ್ಟ್ (Kerala High Court) ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ. ತ್ರಿಪುನಿತುರಾದಲ್ಲಿ (Tripunithura) ಶ್ರೀ ಪೂರ್ಣತ್ರಯೀಸಾ ದೇವಸ್ಥಾನದಲ್ಲಿ (Sree Poornathrayeesa Temple) 12 ಮಂದಿ ಬ್ರಾಹ್ಮಣರಿಗೆ ಭಕ್ತರು ತಮ್ಮ ಪಾಪಗಳನ್ನು ಕಳೆಯಲು ಕಾಲುತೊಳೆದು ಪಾದಪೂಜೆ ಮಾಡಿದ್ದರು. ಈ ಸಂಬಂಧ ಸ್ಥಳೀಯ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಆದರೆ ಶ್ರೀ ಪೂರ್ಣತ್ರಯೀಸಾ ದೇವಸ್ಥಾನದ ಅಡಳಿತ ಮಂಡಳಿ ಪರ ವಕೀಲರು ಈ ವರದಿಯನ್ನು ಅಲ್ಲಗಳೆದಿದ್ದು, ಹೀಗೆ ಬ್ರಾಹ್ಮಣರ ಪಾದಪೂಜೆ ಮಾಡಿರುವುದು ದೇವಾಲಯದ ಪ್ರಧಾನ ಅರ್ಚಕರೇ ವಿನಃ ಭಕ್ತರು ಅಲ್ಲ ಎಂದು ಹೇಳಿದ್ದಾರೆ. ಕೊಚ್ಚಿನ್ ದೇವಸ್ವಂ ಮಂಡಳಿ ಈ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ. ಫೆಬ್ರವರಿ 25 ಕ್ಕೆ ವಿಚಾರಣೆ ಮುಂದೂಡಲಾಗಿದೆ.
ದೇಗುಲದಲ್ಲಿ ಬ್ರಾಹ್ಮಣರಿಗೆ ಪಾದಪೂಜೆ: ಪತ್ರಿಕಾ ವರದಿ ಆಧರಿಸಿ ಪ್ರಕರಣ ಕೈಗೆತ್ತಿಕೊಂಡ ಕೇರಳ ಹೈಕೋರ್ಟ್
ಪಂತ್ರಂಡು ನಮಸ್ಕಾರಂ (Panthrandu Namaskaram) ಸಂಪ್ರದಾಯದ ಭಾಗವಾಗಿ ಶ್ರೀ ಪೂರ್ಣತ್ರಯೀಸಾ ದೇವಸ್ಥಾನದಲ್ಲಿ ಬ್ರಾಹ್ಮಣರ ಕಾಲುತೊಳೆದು ಪಾದಪೂಜೆ ಮಾಡುವಂತೆ ಭಕ್ತರಿಗೆ ಸೂಚಿಸಲಾಗಿತ್ತು ಎಂದು ಪತ್ರಿಕೆಯಲ್ಲಿ ವರದಿಯಾಗಿತ್ತು. ಅದರ ಮಾಹಿತಿ ಆಧಾರದ ಮೇರೆಗೆ ಜಸ್ಟೀಸ್ ಅನಿಲ್ ನರೇಂದ್ರ ಮತ್ತು ಪಿಜಿ ಅಜಿತ್ಕುಮಾರ್ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಆದರೆ ದೇವಸ್ಥಾನದ ಪ್ರಧಾನ ಅರ್ಚಕರು (ತಂತಿ) ಬ್ರಾಹ್ಮಣರ ಪಾದಪೂಜೆ ಮಾಡಿರುವುದು, ಭಕ್ತರು ಅಲ್ಲ ಎಂದು ಕೊಚ್ಚಿನ್ ದೇವಸ್ವಂ ಮಂಡಳಿ ಹೇಳಿದೆ. ಈ ಸಂಬಂಧ ಅಫಿಡವಿತ್ ಸಲ್ಲಿಸಲು 2 ವಾರಗಳ ಕಾಲಾವಕಾಶ ಕೇಳಿದೆ.
ಈ ಮಧ್ಯೆ, ಪ್ರಕರಣದಲ್ಲಿ ರಾಜ್ಯ ಸರ್ಕಾರವೂ ಮಧ್ಯ ಪ್ರವೇಶಿಸಿದೆ. ದೇವಸ್ವಂ ಸಚಿವ ಆರ್ ರಾಧಾಕೃಷ್ಣನ್ ಸಹ ಕೊಚ್ಚಿನ್ ದೇವಸ್ವಂ ಮಂಡಳಿಯಿಂದ (CDB) ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. CDB ಅಧ್ಯಕ್ಷ ವಿ ನಂದಕುಮಾರ್ ಅವರನ್ನು ಸಂಪರ್ಕಿಸಿದ ಸಚಿವ ರಾಧಾಕೃಷ್ಣನ್, ಪುರಾತನ ಸಂಪ್ರದಾಯಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಕೇರಳದಂತಹ ಪ್ರಗತಿಪರ ರಾಜ್ಯಕ್ಕೆ ಇದು ಅವಮಾನಕರ. ಇತರೆ ದೇವಾಲಯಗಳಲ್ಲಿಯೂ ಇಂತಹ ಪುರಾತನ ಆಚರಣೆಗಳನ್ನು ನಿಷೇಧಿಸಲಾಗುವುದು ಎಂದು ಅವರು ಹೇಳಿದ್ದಾರೆ. (ವರದಿ ಮೂಲ: www.barandbench.com)
ಇದನ್ನೂ ಓದಿ: ಬಿಕನಿಯನ್ನಾದರೂ ಧರಿಸಲಿ, ಹಿಜಾಬನ್ನಾದರೂ ಹಾಕಲಿ ಅದು ಹೆಣ್ಣುಮಕ್ಕಳ ಹಕ್ಕು, ಕಿರುಕುಳ ನಿಲ್ಲಿಸಿ: ಪ್ರಿಯಾಂಕಾ ಗಾಂಧಿ ಟ್ವೀಟ್
Published On - 11:30 am, Wed, 9 February 22