
ಹೈದರಾಬಾದ್, ಸೆಪ್ಟೆಂಬರ್ 16: ಗಲ್ಲಿಗೊಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಅತಿ ಎತ್ತರದ ವಿಗ್ರಹಗಳ ಸ್ಪರ್ಧೆ ಮತ್ತು ಬಲವಂತದ ಚಂದಾ ವಸೂಲಿಯ ಭರಾಟೆಯ ನಡುವೆ ಇಲ್ಲೊಂದು ಗ್ರಾಮ ಇಡೀ ನಾಡಿಗೆ ಮಾದರಿಯಾಗಿದೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮದ್ಗುಲಪಲ್ಲಿ ಮಂಡಲದ ಕೇಶವಪುರಂ ಗ್ರಾಮದಲ್ಲಿ ಕಳೆದ ನಾಲ್ಕು ದಶಕಗಳಿಂದ ಇಡೀ ಊರಿಗೆ ಒಂದೇ ಒಂದು ಗಣಪತಿ ವಿಗ್ರಹವನ್ನು ಕೂರಿಸಿ ಪೂಜಿಸುವ ಅಪರೂಪದ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ. ಸ್ವಾತಂತ್ರ್ಯ ಚಳವಳಿಯ ನೈಜ ಆಶಯವನ್ನು ಜೀವಂತವಾಗಿಟ್ಟಿರುವ ಈ ಗ್ರಾಮಸ್ಥರು, ಜಾತಿ-ಧರ್ಮದ ಭೇದ ಮರೆತು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.
40 ವರ್ಷಗಳ ಪರಂಪರೆ : ಊರಿಗೊಂದೇ ಮೂರ್ತಿ: ಕೇಶವಪುರಂನಲ್ಲಿ ಯಾವುದೇ ಬೀದಿಯಲ್ಲೂ ಪ್ರತ್ಯೇಕ ವಿಗ್ರಹಗಳನ್ನು ಕೂರಿಸುವುದಿಲ್ಲ. ಗ್ರಾಮದ ಪುರಾತನ ರಾಮ ಮಂದಿರದಲ್ಲಿ ಇಡೀ ಊರಿನ ಪರವಾಗಿ ಒಂದೇ ಒಂದು ಗಣಪತಿಯನ್ನು ನವರಾತ್ರಿ ಅವಧಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಹಬ್ಬಕ್ಕಾಗಿ ಮನೆಮನೆಗೆ ತೆರಳಿ ಚಂದಾ ವಸೂಲಿ ಮಾಡುವುದನ್ನು ಗ್ರಾಮಸ್ಥರು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ. ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ತಮ್ಮ ಕೈಲಾದ ಹಣವನ್ನು ಹಾಕಿ ಸಮಾರಂಭವನ್ನು ಮುನ್ನಡೆಸುತ್ತಾರೆ.
ಸೆಲೆಬ್ರಿಟಿಗಳು, ರಾಜಕಾರಣಿಗಳ ಹಣಕ್ಕೆ ‘ನೋ‘: ಗ್ರಾಮದ ಅಪರೂಪದ ಒಗ್ಗಟ್ಟನ್ನು ಕಂಡು ದೊಡ್ಡ ಮೊತ್ತದ ದೇಣಿಗೆ ನೀಡಲು ಬಂದ ಹಲವು ರಾಜಕೀಯ ಮುಖಂಡರು ಹಾಗೂ ಗಣ್ಯರ ಸಹಾಯವನ್ನು ಊರಿನವರು ವಿನಮ್ರವಾಗಿಯೇ ತಿರಸ್ಕರಿಸಿದ್ದು, ಸ್ವಂತ ಪರಿಶ್ರಮದಿಂದಲೇ ಪೂಜೆ ನೆರವೇರಿಸುತ್ತಿದ್ದಾರೆ. ಹಬ್ಬದ ದಿನಗಳಲ್ಲಿ ಊರಿನ ಹಿರಿಯರು, ಮಹಿಳೆಯರು ಹಾಗೂ ಯುವಕರು ಒಟ್ಟಾಗಿ ರಾಮಮಂದಿರದಲ್ಲಿ ಸಾಂಪ್ರದಾಯಿಕ ಭಜನೆ ಮತ್ತು ಕೋಲಾಟಗಳನ್ನು ನಡೆಸುತ್ತಾರೆ. ಲಡ್ಡು ಹರಾಜಿನಿಂದ ಹಿಡಿದು ವಿಸರ್ಜನೆಯವರೆಗೂ ಇಡೀ ಗ್ರಾಮ ಒಂದೇ ಕುಟುಂಬದಂತೆ ಭಾಗವಹಿಸುತ್ತದೆ.
ಮತ್ತಷ್ಟು ಓದಿ: ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ; ಗಣಪತಿಯ ವಿಶೇಷ ವಿಡಿಯೋ ವೈರಲ್
ತಿಲಕರ ಮೂಲ ಆಶಯಕ್ಕೆ ಜೀವ: ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದ್ದೇ ಸಮಾಜದ ಎಲ್ಲಾ ವರ್ಗದ ಜನರನ್ನು ಜಾತಿ-ಮತ ಮರೆತು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು. ಇಂದು ಬಹುತೇಕ ಕಡೆಗಳಲ್ಲಿ ಗಣೇಶೋತ್ಸವವು ಪ್ರತಿಷ್ಠೆಯ ಸ್ಪರ್ಧೆಯಾಗಿ ಬದಲಾಗಿರುವಾಗ, ಕೇಶವಪುರಂ ಗ್ರಾಮವು ತಿಲಕರ ಆ ಮೂಲ ಆಶಯವನ್ನು ಚಾಚೂತಪ್ಪದೆ ಪಾಲಿಸುತ್ತಿದೆ.
ನೂರಾರು ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳು, ಭಾರಿ ಸೌಂಡ್ ಸಿಸ್ಟಮ್‌ಗಳ ಶಬ್ದ ಮಾಲಿನ್ಯ ಮತ್ತು ಅನಗತ್ಯ ಆಡಂಬರದ ಖರ್ಚುಗಳಿಗೆ ಕಡಿವಾಣ ಹಾಕಿ, ಏಕ ವಿಗ್ರಹದ ಮೂಲಕ ನೈಸರ್ಗಿಕ ಜಲಮೂಲಗಳ ಮಾಲಿನ್ಯ ತಡೆಯಲು ಈ ಗ್ರಾಮದ ನಡೆ ದೊಡ್ಡ ಪ್ರೇರಣೆಯಾಗಿದೆ. ಹಬ್ಬಗಳು ಜನರನ್ನು ಒಗ್ಗೂಡಿಸುವ ಕೊಂಡಿಯಾಗಬೇಕೇ ಹೊರತು ಮನಸ್ಸುಗಳನ್ನು ಒಡೆಯುವ ಕಾರಣವಾಗಬಾರದು ಎಂಬುದನ್ನು ಕೇಶವಪುರಂ ಗ್ರಾಮಸ್ಥರು ತಮ್ಮ ನಾಲ್ಕು ದಶಕಗಳ ಐಕ್ಯತೆಯ ಮೂಲಕ ಸಾಬೀತುಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ