ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ, ಮಂಗಳೂರು ಯುವಕ ಸೇರಿ ಮೂವರು ಸಾವು, ‘ಅಪ್ಪ ನೋಡ್ಕೋತಾರೆ’ ಎಂದ ಆರೋಪಿ

ಕೊಚ್ಚಿ ಏರ್‌ಪೋರ್ಟ್ ರಸ್ತೆಯಲ್ಲಿ ಕುಡಿದು ಚಾಲನೆ ಮಾಡಿದ 19 ವರ್ಷದ ಯುವಕನ ಮಿನಿ ಕೂಪರ್ ಕಾರು ಡಿಕ್ಕಿ ಹೊಡೆದು ಮಂಗಳೂರು ಯುವಕ ಸೇರಿ ಮೂವರು ಐಟಿ ಉದ್ಯೋಗಿಗಳು ಭೀಕರವಾಗಿ ಸಾವನ್ನಪ್ಪಿದ್ದಾರೆ. ಆರೋಪಿ ಸುಹೇಲ್ ಸಜೀವ್ ಪಶ್ಚಾತ್ತಾಪವಿಲ್ಲದೆ ‘ಅಪ್ಪ ನೋಡ್ಕೋತಾರೆ’ ಎಂದಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಮದ್ಯ ಪೂರೈಸಿದ ಬಾರ್‌ಗಳ ವಿರುದ್ಧವೂ ಕೇರಳ ಸರ್ಕಾರ ಕ್ರಮಕ್ಕೆ ಆದೇಶಿಸಿದೆ.

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ, ಮಂಗಳೂರು ಯುವಕ ಸೇರಿ ಮೂವರು ಸಾವು, ‘ಅಪ್ಪ ನೋಡ್ಕೋತಾರೆ’ ಎಂದ ಆರೋಪಿ
ಅಪಘಾತ

Updated on: Oct 12, 2026 | 8:29 AM

ಕೊಚ್ಚಿ, ಅಕ್ಟೋಬರ್ 12: ಕೇರಳದ ಕೊಚ್ಚಿಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ನೆಡುಂಬಸ್ಸೆರಿಯಲ್ಲಿ ಭಾನುವಾರ ಬೆಳಗಿನ ಜಾವ 1.45 ರ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿಯಾದ ವೇಗ ಮತ್ತು ಮದ್ಯದ ಮತ್ತಿನಲ್ಲಿ 19 ವರ್ಷದ ಯುವಕ ಚಲಾಯಿಸುತ್ತಿದ್ದ ‘ಮಿನಿ ಕೂಪರ್’ ಕಾರು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಐಟಿ ಕಂಪನಿ ಉದ್ಯೋಗಿಗಳಾದ ಮೂವರು ಯುವಕ-ಯುವತಿಯರು ಸಾವಿಗೀಡಾಗಿದ್ದಾರೆ.

ಕೊಚ್ಚಿಯ ಕಾಕ್ಕನಾಡ್‌ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕ-ಯುವತಿಯರು ಟೀ ಕುಡಿಯಲು ಸ್ಕೂಟರ್‌ನಲ್ಲಿ ವಿಮಾನ ನಿಲ್ದಾಣದ ಕಡೆಗೆ ತೆರಳುತ್ತಿದ್ದರು. ವೇಗವಾಗಿ ಬಂದ ಮಿನಿ ಕೂಪರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ತೀವ್ರತೆಗೆ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಕಾರು ಸ್ಕೂಟರ್ ಅನ್ನು ಸುಮಾರು 100 ಮೀಟರ್‌ಗಳಷ್ಟು ದೂರಕ್ಕೆ ಎಳೆದುಕೊಂಡು ಹೋಗಿ ನಿಂತಿದೆ.

ಮೃತರು

ದೇವಿಕಾ (21) – ವಯನಾಡಿನ ಮಡಕ್ಕಿಮಲ ಮೂಲದವರು (ಸ್ಥಳದಲ್ಲೇ ಸಾವು)

ಗೋಪಿಕಾ (22) – ಪಾಲಕ್ಕಾಡ್ ಮೂಲದವರು (ಸ್ಥಳದಲ್ಲೇ ಸಾವು)

ಇಜಾಜ್ (21) – ಮಂಗಳೂರು ಮೂಲದವರು (ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು)

ಅಪ್ಪ ನೋಡ್ಕೋತಾರೆ: ಆರೋಪಿಯ ದುರಹಂಕಾರದ ಮಾತುಗಳು

ಅಪಘಾತದ ಬಳಿಕ ಆರೋಪಿ ಸುಹೇಲ್ ಸಜೀವ್ (19) ಕಿಂಚಿತ್ತೂ ಪಶ್ಚಾತ್ತಾಪ ಪಡದೆ, ಸ್ಥಳೀಯರೊಂದಿಗೆ ಮತ್ತು ಪೊಲೀಸರ ಬಳಿ: “ರಸ್ತೆಗಳು ಇರುವುದೇ ವಾಹನ ಚಾಲನೆ ಮಾಡಲು, ಇದರಲ್ಲಿ ತಪ್ಪೇನಿದೆ? ನನ್ನ ತಂದೆಯೇ ಈ ಎಲ್ಲ ವಿಷಯವನ್ನು ನೋಡಿಕೊಳ್ಳುತ್ತಾರೆ” ಎಂದು ಉದ್ಧಟತನದಿಂದ ಮಾತನಾಡಿದ್ದಾನೆ. ಈ ಮಾತುಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿದೆ. ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸ್ಥಳೀಯ ಯುವಕರ ಗುಂಪೊಂದು ಆರೋಪಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದೆ.

ಮತ್ತಷ್ಟು ಓದಿ: ಚನ್ನಪಟ್ಟಣ ಎಕ್ಸ್‌ಪ್ರೆಸ್‌ವೇ ಯುವತಿ ಅಪಘಾತ ಸಾವಿಗೆ ಬಿಗ್ ಟ್ವಿಸ್ಟ್: ಇದು ಆಕ್ಸಿಡೆಂಟ್ ಅಲ್ಲ, ಭೀಕರ ಕೊಲೆ ಎಂದು ಪೋಷಕರ ಆರೋಪ

ಕೇರಳದಲ್ಲಿ ಕಾನೂನುಬದ್ಧ ಮದ್ಯಪಾನದ ಕನಿಷ್ಠ ವಯಸ್ಸು 23 ವರ್ಷ. ಆದರೆ 19 ವರ್ಷದ ಸುಹೇಲ್ ಹಲವು ಬಾರ್‌ಗಳಲ್ಲಿ ಮದ್ಯ ಸೇವಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ನಿಯಮ ಮೀರಿ ಹದಿಹರೆಯದ ಯುವಕನಿಗೆ ಮದ್ಯ ಪೂರೈಸಿದ ಬಾರ್‌ಗಳು ಹಾಗೂ ಪಬ್‌ಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೇರಳ ಅಬಕಾರಿ ಸಚಿವ ಎಂ. ಲಿಜು ಅವರು ಅಬಕಾರಿ ಆಯುಕ್ತರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಪೋಸ್ಟ್​

ಪೊಲೀಸ್ ಕ್ರಮ: ನೆಡುಂಬಸ್ಸೆರಿ ಪೊಲೀಸರು ಆರೋಪಿಯ ವಿರುದ್ಧ ಅತಿವೇಗ, ನಿರ್ಲಕ್ಷ್ಯದ ಚಾಲನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸಾವು ಉಂಟುಮಾಡಿದ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us