ಚನ್ನಪಟ್ಟಣ ಎಕ್ಸ್‌ಪ್ರೆಸ್‌ವೇ ಯುವತಿ ಅಪಘಾತ ಸಾವಿಗೆ ಬಿಗ್ ಟ್ವಿಸ್ಟ್: ಇದು ಆಕ್ಸಿಡೆಂಟ್ ಅಲ್ಲ, ಭೀಕರ ಕೊಲೆ ಎಂದು ಪೋಷಕರ ಆರೋಪ
ಚನ್ನಪಟ್ಟಣ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಭೂಮಿಕಾ ಅಪಘಾತ ಪ್ರಕರಣ ಈಗ ಪ್ರೀ-ಪ್ಲಾನ್ಡ್ ಕೊಲೆ ತಿರುವು ಪಡೆದಿದೆ. ಆರಂಭದಲ್ಲಿ ಹಿಟ್ ಅಂಡ್ ರನ್ ಎಂದಿದ್ದ ಪೊಲೀಸರು, ಪೋಷಕರ ಗಂಭೀರ ಆರೋಪದ ನಂತರ ಮರು ತನಿಖೆ ಕೈಗೊಂಡಿದ್ದಾರೆ. ಪ್ರೇಮ ವೈಫಲ್ಯವೇ ಸಾವಿಗೆ ಕಾರಣವೆಂದು ಕುಟುಂಬ ಶಂಕಿಸಿದೆ. ಸ್ಕೂಟಿ ಸವಾರನ ಅನುಮಾನಾಸ್ಪದ ನಡತೆ, ಹಳೆಯ ಪ್ರೇಮಿಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಗಳು, ಪೋಷಕರ ದೂರು ಆಧರಿಸಿ ಚನ್ನಪಟ್ಟಣ ಪೊಲೀಸರು ಪ್ರಕರಣ ಭೇದಿಸಲು ಯತ್ನಿಸುತ್ತಿದ್ದಾರೆ.

ಬೆಂಗಳೂರು, ಅ.10: ಕೆಲ ದಿನಗಳ ಹಿಂದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ದುರಂತ ಅಂತ್ಯ ಕಂಡಿದ್ದ ಪ್ರಕರಣಕ್ಕೆ ಇದೀಗ ಆಘಾತಕಾರಿ ಟ್ವಿಸ್ಟ್ ಸಿಕ್ಕಿದೆ. ಪ್ರಾರಂಭದಲ್ಲಿ ಹಿಟ್ ಅಂಡ್ ರನ್ ಅಪಘಾತ ಎಂದು ಬಿಂಬಿತವಾಗಿದ್ದ ಪ್ರಕರಣದ ಸುತ್ತ ಇದೀಗ ಅನುಮಾನದ ಹುತ್ತ ಬೆಳೆದಿದ್ದು, ಮಗಳದ್ದು ಅಪಘಾತವಲ್ಲ, ಪ್ರೀ-ಪ್ಲಾನ್ಡ್ ಕೊಲೆ (Pre-planned Murder) ಎಂದು ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ರಾಮೋಹಳ್ಳಿ ನಿವಾಸಿ ಭೂಮಿಕಾ (22) ಸಾವನ್ನಪ್ಪಿದ ಯುವತಿಯಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಪೊಲೀಸರು ಮರು ತನಿಖೆಗೆ ಮುಂದಾಗಿದ್ದಾರೆ.
ಅಕ್ಟೋಬರ್ 3 ಕ್ಕೆ ನಡೆದಿದ್ದೇನು?:
ಅಕ್ಟೋಬರ್ 3 ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರಸ್ತೆ ದಾಟುತ್ತಿದ್ದ ಭೂಮಿಕಾಗೆ ಮೈಸೂರು ಕಡೆಗೆ ವೇಗವಾಗಿ ಸಾಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಯುವತಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಳು. ಅಪಘಾತದ ದೃಶ್ಯಗಳು ಸಿಸಿಟಿವಿ ಕೆಮರಾದಲ್ಲಿಯೂ ಸೆರೆಯಾಗಿದ್ದವು. ಆರಂಭದಲ್ಲಿ ಇದನ್ನು ರಸ್ತೆ ಅಪಘಾತವೆಂದು ಪರಿಗಣಿಸಿ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ತಾಯಿಯ ದೂರಿನ ಬೆನ್ನಲ್ಲೇ ಪ್ರಕರಣ ಸಂಪೂರ್ಣ ಬೇರೆ ತಿರುವು ಪಡೆದುಕೊಂಡಿದೆ.
ಪ್ರೇಮ ವೈಫಲ್ಯಕ್ಕೆ ಕೊಲೆ ಶಂಕೆ:
ಮೃತ ಯುವತಿಯ ತಾಯಿ ಪುಷ್ಪಾಲತಾ ನೀಡಿರುವ ದೂರಿನ ಪ್ರಕಾರ, ಪ್ರಕರಣದ ಹಿಂದೆ ಪ್ರೇಮ ವೈಫಲ್ಯ ಹಾಗೂ ಸಂಚು ಅಡಗಿದೆ. ಬೆಂಗಳೂರಿನ ಭೂಮಿಕಾ, ಚನ್ನಪಟ್ಟಣ ಮೂಲದ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಕಿರಣ್ ಈ ಮಧ್ಯೆ ಬೇರೊಂದು ಯುವತಿಯನ್ನು ಮದುವೆಯಾಗಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಕಳೆದ ಕೆಲ ದಿನಗಳಿಂದ ತೀವ್ರ ಗಲಾಟೆ ನಡೆಯುತ್ತಿತ್ತು. ಅಕ್ಟೋಬರ್ 2ರ ರಾತ್ರಿ ಚಾಲಕ ಕಿಶೋರ್ ಅವರ ಕಾರಿನಲ್ಲಿ ಭೂಮಿಕಾ ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಬಂದಿದ್ದಳು. ಈ ವೇಳೆ ಕಿರಣ್ ಆಕೆಗೆ ಮದ್ಯ ಕುಡಿಸಿದ್ದ ಎನ್ನಲಾಗಿದೆ. ಬಳಿಕ ಕಿರಣ್ ಹಾಗೂ ಆತನ ಸಹೋದರ ಆಶಿಕ್ ಸೇರಿ ಭೂಮಿಕಾ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಈ ವಿಚಾರವನ್ನು ಭೂಮಿಕಾ ಅದೇ ರಾತ್ರಿ ತನ್ನ ಇನ್ನೊಬ್ಬ ಸ್ನೇಹಿತ ಹರೀಶ್‌ಗೆ ಕರೆ ಮಾಡಿ ತಿಳಿಸಿದ್ದಳು.
ಕಾರಿನಲ್ಲಿ ಬಂದಿದ್ದ ಭೂಮಿಕಾಳನ್ನು ಅಪರಿಚಿತ ವ್ಯಕ್ತಿಯೊಬ್ಬ ತನ್ನ ಸ್ಕೂಟಿಯಲ್ಲಿ ತಂದು ಎಕ್ಸ್‌ಪ್ರೆಸ್‌ವೇ ಬದಿಯಲ್ಲಿ ಡ್ರಾಪ್ ಮಾಡಿದ್ದ. ಡ್ರಾಪ್ ಮಾಡಿದ ಕೆಲವೇ ಕ್ಷಣಗಳಲ್ಲಿ ರಸ್ತೆ ದಾಟುತ್ತಿದ್ದ ಭೂಮಿಕಾಗೆ ಕಾರು ಡಿಕ್ಕಿಯಾಗಿದೆ. ಆದರೆ, ಕಣ್ಣೆದುರಲ್ಲೇ ಅಷ್ಟು ದೊಡ್ಡ ಅಪಘಾತ ಸಂಭವಿಸಿದರೂ ಸ್ಕೂಟಿ ಚಾಲಕ ಹಿಂತಿರುಗಿ ನೋಡದೆ ವೇಗವಾಗಿ ತೆರಳಿರುವುದು ಅನುಮಾನವನ್ನು ಇಮ್ಮಡಿಗೊಳಿಸಿದೆ. ಯುವತಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಚನ್ನಪಟ್ಟಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೊಲೆ ಕೋನದಲ್ಲೂ ತನಿಖೆ ಆರಂಭಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಈ ಕುರಿತು ಪ್ರತಿಕ್ರಿಯಿಸಿ, ಪೋಷಕರ ಆರೋಪ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ. ಸ್ಕೂಟಿ ಸವಾರ ಹಾಗೂ ಕಾರು ಚಾಲಕನನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




