ಕೊಲ್ಕತ್ತಾದಲ್ಲಿ ಭೀಕರ ದುರಂತ; ಗೋದಾಮಿನ ಕಟ್ಟಡ ಕುಸಿದು ಬಿದ್ದು 5 ಜನ ಸಾವು

ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಇಂದು ಮಧ್ಯಾಹ್ನ ನಿರ್ಮಾಣ ಹಂತದಲ್ಲಿದ್ದ 3 ಅಂತಸ್ತಿನ ಗೋದಾಮು ಕುಸಿದು ಬಿದ್ದ ಕಾರಣದಿಂದ 5 ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 21 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಸುಮಾರು 12 ರಿಂದ 18 ಜನರು ಸಿಲುಕಿಕೊಂಡಿರುವ ಸಾಧ್ಯತೆಯಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಹೊರತರಲು ಸೇನೆ ಹಾಗೂ ವಿಪತ್ತು ನಿರ್ವಹಣಾ ಪಡೆಗಳು ಅತ್ಯಾಧುನಿಕ ಉಪಕರಣಗಳೊಂದಿಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

ಕೊಲ್ಕತ್ತಾದಲ್ಲಿ ಭೀಕರ ದುರಂತ; ಗೋದಾಮಿನ ಕಟ್ಟಡ ಕುಸಿದು ಬಿದ್ದು 5 ಜನ ಸಾವು
Kolkata Warehouse Collapse
Image Credit source: PTI

Updated on: Jun 24, 2026 | 6:48 PM

ಕೊಲ್ಕತ್ತಾ, ಜೂನ್ 24: ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ (Kolkata) ನಿರ್ಮಾಣ ಹಂತದಲ್ಲಿದ್ದ ದೊಡ್ಡ ಗೋದಾಮಿನ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ 5 ಜನರು ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಕಾರ್ಮಿಕರು ಸಿಲುಕಿಕೊಂಡಿರುವ ಆತಂಕವಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಮೂಲಗಳ ಪ್ರಕಾರ, ಗೋದಾಮಿನ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಕಟ್ಟಡದ ಒಂದು ದೊಡ್ಡ ಭಾಗ ಕುಸಿದು ಬಿದ್ದಿದೆ. ಆ ಸಮಯದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಿಮೆಂಟ್ ಮತ್ತು ಕಬ್ಬಿಣದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಘಟನೆ ನಡೆದ ತಕ್ಷಣವೇ ಸ್ಥಳೀಯರು ಧಾವಿಸಿ ಬಂದು ರಕ್ಷಣೆಗೆ ಮುಂದಾಗಿದ್ದಾರೆ.


ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಜೆಸಿಬಿ ಮತ್ತು ಗ್ಯಾಸ್ ಕಟರ್‌ಗಳನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: ಲಕ್ನೋ ಬೆಂಕಿ ದುರಂತಕ್ಕೆ ತಲೆದಂಡ; ಉತ್ತರ ಪ್ರದೇಶದ 4 ಅಧಿಕಾರಿಗಳ ಅಮಾನತು, ನಾಲ್ವರ ಬಂಧನ

ಇದುವರೆಗೆ ಅವಶೇಷಗಳಿಂದ ಹೊರತೆಗೆಯಲಾದ ಹಲವು ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಕಟ್ಟಡ ನಿರ್ಮಾಣದಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿತ್ತು ಮತ್ತು ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಂಡಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಸ್ಥಳದಲ್ಲಿ ಎನ್‌ಡಿಆರ್‌ಎಫ್, ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಒಟ್ಟಾಗಿ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದುವರೆಗೆ 21 ಜನರನ್ನು ರಕ್ಷಿಸಲಾಗಿದೆ. ದುರದೃಷ್ಟವಶಾತ್ 3 ಜನರು ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us