
ನವದೆಹಲಿ, ಅಕ್ಟೋಬರ್ 13: ಕೇಂದ್ರಾಡಳಿತ ಪ್ರದೇಶ ಲಡಾಖ್ ಕುರಿತು ಚೀನಾ ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಇಂದು ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಲಡಾಖ್ ಕೇಂದ್ರಾಡಳಿತ ಪ್ರದೇಶವು ಭಾರತದ ಅತ್ಯಂತ ಬೇರ್ಪಡಿಸಲಾಗದ ಮತ್ತು ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಪುನರುಚ್ಚರಿಸಲಾಗುತ್ತದೆ. ಚೀನಾ ಎಷ್ಟೇ ನಿರಾಕರಿಸಿದರೂ ಈ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಖಡಕ್ ಪ್ರತ್ಯುತ್ತರ ನೀಡಿದ್ದಾರೆ.
ಬೀಜಿಂಗ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್, “ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಚೀನಾ ಎಂದಿಗೂ ಗುರುತಿಸಿಲ್ಲ. ಭಾರತದ ಈ ನಾಮಕರಣ ಪ್ರಕ್ರಿಯೆಯು ‘ಕಾನೂನುಬಾಹಿರ ಮತ್ತು ಅಸಿಂಧು'” ಎಂದು ಹೇಳಿಕೆ ನೀಡಿದ್ದರು. ಚೀನಾದ ಈ ಪ್ರಚೋದನಾಕಾರಿ ಹೇಳಿಕೆಗೆ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯದ (MEA) ಸ್ಪಷ್ಟನೆ:ಚೀನಾದ ನಿರಾಕರಣೆಗೆ ಬೆಲೆಯಿಲ್ಲ:”ಕೇಂದ್ರಾಡಳಿತ ಪ್ರದೇಶ ಲಡಾಖ್ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿದೆ. ಚೀನಾ ಕಡೆಯಿಂದ ಎಷ್ಟೇ ನಿರಾಕರಣೆಗಳು ಬಂದರೂ ಈ ಸತ್ಯವನ್ನು ಮತ್ತು ಸ್ಥಾಪಿತ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ,” ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ‘ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ’; ಪಾಕಿಸ್ತಾನಕ್ಕೆ ವಿದೇಶಾಂಗ ಸಚಿವಾಲಯ ತಿರುಗೇಟು
ಪ್ರಕಟಣೆಯೊಂದರಲ್ಲಿ ವಿವರ ನೀಡಿದ ಎಂಇಎ, ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತ ಮತ್ತು ಸ್ಥಳೀಯ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ, ‘ಸರ್ವೆ ಆಫ್ ಇಂಡಿಯಾ’ ಅಧಿಕೃತ ಭೂಪಟದಲ್ಲಿ ಲಡಾಖ್ನ 28 ಸ್ಥಳಗಳಿಗೆ ಪ್ರಮಾಣೀಕೃತ (ಅಧಿಕೃತ) ಹೆಸರುಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.
ಸರ್ವೆ ಆಫ್ ಇಂಡಿಯಾದ ಲಡಾಖ್ ನಕ್ಷೆಯಲ್ಲಿ ಈ ಸ್ಥಳಗಳನ್ನು ಅಧಿಕೃತವಾಗಿ ಹೆಸರಿಸುವುದರ ಮುಖ್ಯ ಉದ್ದೇಶವೆಂದರೆ, ಆಡಳಿತಾತ್ಮಕವಾಗಿ ನಿಖರವಾದ ಗುರುತಿಸುವಿಕೆಯನ್ನು ಸೃಷ್ಟಿಸುವುದು ಮತ್ತು ಸಾರ್ವಜನಿಕರಲ್ಲಿ ಗಡಿ ಪ್ರದೇಶಗಳ ಕುರಿತು ಉತ್ತಮ ಜಾಗೃತಿ ಮೂಡಿಸುವುದಾಗಿದೆ ಎಂದು ಜೈಸ್ವಾಲ್ ವಿವರಿಸಿದ್ದಾರೆ.
ಇದನ್ನೂ ಓದಿ: ‘ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಚೀನಾ ಎಂದಿಗೂ ಗುರುತಿಸಿಲ್ಲ’; ಭಾರತದ ಅಭಿಯಾನಕ್ಕೆ ಬೀಜಿಂಗ್ ಆಕ್ಷೇಪ
ಕೇಂದ್ರ ಸರ್ಕಾರವು ಅಕ್ಟೋಬರ್ 2ರಂದು ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಇರುವ ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ ನಂತಹ ಪ್ರಮುಖ ಗಡಿ ಸಂಘರ್ಷದ ಬಿಂದುಗಳು ಸೇರಿದಂತೆ ಲಡಾಖ್ನ 28 ಆಯಕಟ್ಟಿನ ಪ್ರದೇಶಗಳನ್ನು ಭಾರತದ ಅಧಿಕೃತ ಭೂಪಟದಲ್ಲಿ ಗುರುತಿಸಿತ್ತು. ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶಗಳು 2020ರಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಸಂಘರ್ಷ ಉಂಟಾಗಿದ್ದ ಪ್ರಮುಖ ಸ್ಥಳಗಳಾಗಿದ್ದು, ಎಲ್ಎಸಿಯಲ್ಲಿ ಭಾರತೀಯ ಸೇನೆಯ ಗಸ್ತು ಕಾರ್ಯಾಚರಣೆಗೆ ಅತ್ಯಂತ ನಿರ್ಣಾಯಕವಾಗಿವೆ. 2020ರ ಮೇ 5ರಂದು ಪಾಂಗಾಂಗ್ ಸರೋವರದ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದ ನಂತರ ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಉದ್ಭವಿಸಿತ್ತು. ಬಳಿಕ 2022ರಿಂದ ಎರಡೂ ಪಡೆಗಳು ಸೇನಾ ವಾಪಸಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ