‘ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಚೀನಾ ಎಂದಿಗೂ ಗುರುತಿಸಿಲ್ಲ’; ಭಾರತದ ಅಭಿಯಾನಕ್ಕೆ ಬೀಜಿಂಗ್ ಆಕ್ಷೇಪ
ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿರುವ 28 ಆಯಕಟ್ಟಿನ ಪ್ರದೇಶಗಳು ಮತ್ತು ಭೌಗೋಳಿಕ ಸ್ಥಳಗಳಿಗೆ ಭಾರತ ಸರ್ಕಾರವು ಅಧಿಕೃತ ಹೆಸರುಗಳನ್ನು ನಿಗದಿಪಡಿಸಿ ಭೂಪಟದಲ್ಲಿ ಪ್ರಕಟಿಸಿರುವುದನ್ನು ಚೀನಾ ತೀವ್ರವಾಗಿ ವಿರೋಧಿಸಿದೆ. ಕೇಂದ್ರ ಗೃಹ ಸಚಿವಾಲಯವು ಲಡಾಖ್‌ನ 28 ಪ್ರಮುಖ ಸ್ಥಳಗಳಿಗೆ (ಝೋಲ್ಮೋರಿ, ಗುರು ರಿನ್ಪೋಚೆ, ಕುಮಾರಾಯಣ ಪಾಯಿಂಟ್, ಪಂಗ್ಲುಂಗ್, ಶಮಾಲ್ ಲುಂಗ್ಪಾ ಮುಂತಾದ ಸ್ಥಳಗಳು) ಅಧಿಕೃತ ಹೆಸರುಗಳನ್ನು ನಿಗದಿಪಡಿಸಿ 'ಸರ್ವೆ ಆಫ್ ಇಂಡಿಯಾ' ನಕ್ಷೆಯಲ್ಲಿ ಪ್ರಕಟಿಸಿತ್ತು. ಇದೀಗ ವಿವಾದಕ್ಕೆ ಕಾರಣವಾಗಿದೆ.

ಬೀಜಿಂಗ್, ಅಕ್ಟೋಬರ್ 13: ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿರುವ 28 ಆಯಕಟ್ಟಿನ ಸ್ಥಳಗಳಿಗೆ ಭಾರತ ಸರ್ಕಾರವು ಪ್ರಮಾಣೀಕೃತ (ಅಧಿಕೃತ) ಹೆಸರುಗಳನ್ನು ನಿಗದಿಪಡಿಸಿರುವುದನ್ನು ಚೀನಾ ತೀವ್ರವಾಗಿ ವಿರೋಧಿಸಿದೆ. ಭಾರತದ ಈ ನಿರ್ಧಾರವು “ಕಾನೂನುಬಾಹಿರ ಮತ್ತು ಅಸಿಂಧು” ಎಂದಿರುವ ಚೀನಾ, ತಾನು ‘ಲಡಾಖ್ ಕೇಂದ್ರಾಡಳಿತ ಪ್ರದೇಶ’ವನ್ನು ಎಂದಿಗೂ ಗುರುತಿಸಿಲ್ಲ ಎಂದು ಪ್ರತಿಪಾದಿಸಿದೆ.
ಕಳೆದ ಕೆಲವು ವರ್ಷಗಳಿಂದ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಭಾರತೀಯ ಭೂಭಾಗಗಳಿಗೆ ಚೀನಾ ಏಕಪಕ್ಷೀಯವಾಗಿ ಚೀನಿ ಹೆಸರುಗಳನ್ನು ಇಡುತ್ತಿದ್ದ ಕೃತ್ಯಕ್ಕೆ ಪ್ರತಿಯಾಗಿ, ಭಾರತದ ಗೃಹ ಸಚಿವಾಲಯವು ಅಕ್ಟೋಬರ್ 2ರಂದು ‘ಸರ್ವೆ ಆಫ್ ಇಂಡಿಯಾ’ ಅಧಿಕೃತ ಭೂಪಟದಲ್ಲಿ ಲಡಾಖ್‌ನ 28 ಪ್ರಮುಖ ಸ್ಥಳಗಳಿಗೆ ಪ್ರಮಾಣೀಕೃತ ಹೆಸರುಗಳನ್ನು ಪ್ರಕಟಿಸಿತ್ತು. ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಇಂತಹುದೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: ‘ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ’; ಪಾಕಿಸ್ತಾನಕ್ಕೆ ವಿದೇಶಾಂಗ ಸಚಿವಾಲಯ ತಿರುಗೇಟು
ಬೀಜಿಂಗ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್, “ಭಾರತವು ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ರಚಿಸಿರುವ ‘ಲಡಾಖ್ ಕೇಂದ್ರಾಡಳಿತ ಪ್ರದೇಶ’ವನ್ನು ಚೀನಾ ಎಂದಿಗೂ ಗುರುತಿಸಿಲ್ಲ. ಭಾರತವು ಪ್ರಕಟಿಸಿರುವ ‘ಪ್ರಮಾಣೀಕೃತ ಸ್ಥಳೀಯ ಹೆಸರುಗಳನ್ನು’ ಚೀನಾ ಬಲವಾಗಿ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ.
#FMsays China said on Tuesday that it does not recognize the “Ladakh Union Territory” illegally set up by #India, and firmly opposes the so-called standard names India released for locations in the region, calling the attempt illegal, null and void. https://t.co/m4PWMYWISv
— China Daily (@ChinaDaily) October 13, 2026
“ಭಾರತದ ಈ ನಡವಳಿಕೆಯು ಕಾನೂನುಬಾಹಿರ ಹಾಗೂ ಅಸಿಂಧು. ಭಾರತ-ಚೀನಾ ಗಡಿಯ ಪಶ್ಚಿಮ ವಲಯವು ಸದಾ ಚೀನಾಕ್ಕೆ ಸೇರಿದ್ದು ಎಂಬ ವಸ್ತುನಿಷ್ಠ ವಾಸ್ತವವನ್ನು ಭಾರತದ ಈ ಹೆಜ್ಜೆ ಬದಲಾಯಿಸಲು ಸಾಧ್ಯವಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೊಂದು ಶಾಕ್; ಲಡಾಖ್ನಲ್ಲಿ ಭಾರತದ ಮೊದಲ ರಾಕ್ ಚೆಕ್ ಡ್ಯಾಂ ನಿರ್ಮಾಣ
ಗೃಹ ಸಚಿವಾಲಯವು ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತದೊಂದಿಗೆ ಸಮಾಲೋಚಿಸಿ, ಸರ್ವೆ ಆಫ್ ಇಂಡಿಯಾ ನಕ್ಷೆಯಲ್ಲಿ 10 ಶಿಖರಗಳು, 2 ಕಣಿವೆ ಹಾದಿಗಳು, 3 ಪರ್ವತಗಳು, 7 ಭೂಭಾಗಗಳು, 2 ಹಿಮನದಿಗಳು, 2 ಜಲಾಶಯಗಳು, ಒಂದು ಕಣಿವೆ ಮತ್ತು ಒಂದು ನದಿಯನ್ನು ಒಳಗೊಂಡಂತೆ 28 ಸ್ಥಳಗಳನ್ನು ಅಧಿಕೃತವಾಗಿ ಹೆಸರಿಸಿದೆ.
ಗಡಿ ಭಾಗದ ಸೂಕ್ಷ್ಮ ಪ್ರದೇಶಗಳನ್ನು ನಿಖರವಾಗಿ ಗುರುತಿಸಲು ಮತ್ತು ಸಾರ್ವಜನಿಕರಲ್ಲಿ ಈ ಭೂಭಾಗಗಳ ಕುರಿತು ಜಾಗೃತಿ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತ ಸರ್ಕಾರ ವಿವರಿಸಿದೆ. ಮೊದಲಿನಿಂದಲೂ ಅರುಣಾಚಲ ಪ್ರದೇಶವನ್ನು “ದಕ್ಷಿಣ ಟಿಬೆಟ್” ಎಂದು ಪ್ರತಿಪಾದಿಸುತ್ತಾ ಬಂದಿರುವ ಚೀನಾ, 2017, 2021, 2023 ಮತ್ತು 2024ರಲ್ಲಿ ಅರುಣಾಚಲ ಪ್ರದೇಶದ ಹತ್ತು ಹಲವು ನಗರ, ನದಿ ಹಾಗೂ ಭೂಭಾಗಗಳಿಗೆ ಚೀನಿ ಹೆಸರುಗಳನ್ನು ಮರುನಾಮಕರಣ ಮಾಡುವ ಪ್ರಚೋದನಾಕಾರಿ ಯತ್ನ ನಡೆಸಿತ್ತು.
2020ರ ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು ತೀವ್ರ ತಳಮಟ್ಟಕ್ಕೆ ಕುಸಿದಿದ್ದವು. ಪ್ರಸ್ತುತ ಉಭಯ ದೇಶಗಳು ಗಡಿ ವಿವಾದ ಬಗೆಹರಿಸಲು ಮತ್ತು ಸಂಬಂಧಗಳನ್ನು ಸಹಜಸ್ಥಿತಿಗೆ ತರಲು ಮಾತುಕತೆ ನಡೆಸುತ್ತಿರುವ ನಡುವೆಯೇ ಚೀನಾದ ಈ ಪ್ರಚೋದನಾಕಾರಿ ಹೇಳಿಕೆ ಹೊರಬಿದ್ದಿದೆ. 2019ರ ಆಗಸ್ಟ್‌ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಭಾರತ ಸರ್ಕಾರ ಘೋಷಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




