Lakhimpur Kheri Violence: ಲಖಿಂಪುರ್ ಖೇರಿಯಲ್ಲಿ ರೈತರ ಹತ್ಯೆಯ ಮತ್ತೊಂದು ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Oct 07, 2021 | 10:07 AM

Lakhimpur Video: ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ಎಸ್​ಯುವಿ ಕಾರು ಹರಿಸಿದ ವಿಡಿಯೋ ಕ್ಲಿಪ್ ಮತ್ತೆ ವೈರಲ್ ಆಗಿದ್ದು, ಆರೋಪಿಗಳನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.

Lakhimpur Kheri Violence: ಲಖಿಂಪುರ್ ಖೇರಿಯಲ್ಲಿ ರೈತರ ಹತ್ಯೆಯ ಮತ್ತೊಂದು ವಿಡಿಯೋ ವೈರಲ್
ಲಖೀಂಪುರ ಹಿಂಸಾಚಾರದ ಮತ್ತೊಂದು ವಿಡಿಯೋ ವೈರಲ್
Follow us on

ಲಕ್ನೋ: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆಯ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಎರಡು ಕಾರುಗಳು ಹರಿದು ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಹಿಂಸಾಚಾರ ಭುಗಿಲೆದ್ದ ಕಾರಣ ಲಖಿಂಪುರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಪ್ರತಿಭಟನಾಕಾರರಿಗೆ ಕಾರಿನಿಂದ ಡಿಕ್ಕಿ ಹೊಡೆದು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ಆ ಘಟನೆಯ ಮತ್ತೊಂದು ವಿಡಿಯೋವನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಬಹಳ ಸ್ಪಷ್ಟವಾಗಿ, ದೊಡ್ಡದಾಗಿರುವ ಈ ವಿಡಿಯೋದಲ್ಲಿ ಆ ದಿನ ನಡೆದಿದ್ದೇನು? ಎಂಬುದು ನಿಖರವಾಗಿ ಗೊತ್ತಾಗುತ್ತಿದೆ. ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ಎಸ್​ಯುವಿ ಕಾರು ಹರಿಸಿದ ವಿಡಿಯೋ ಕ್ಲಿಪ್ ಮತ್ತೆ ವೈರಲ್ ಆಗಿದ್ದು, ಆರೋಪಿಗಳನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಉದ್ದೇಶಪೂರ್ವಕವಾಗಿಯೇ ವೇಗವಾಗಿ ಬಂದು ರೈತರ ಮೇಲೆ ಕಾರು ಹರಿಸಿ ಕೊಲ್ಲಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಒಂದರ ಹಿಂದೊಂದು ವೇಗವಾಗಿ ಬಂದ ಎಸ್​ಯುವಿ ಕಾರುಗಳು ರೈತರಿಗೆ ಡಿಕ್ಕಿ ಹೊಡೆದು ಹೋಗಿವೆ. ಬಳಿಕ ಅದರಲ್ಲಿ ಒಂದು ಕಾರನ್ನು ರೈತರು ಸುಟ್ಟು ಹಾಕಿದ್ದಾರೆ.

ಕಳೆದ ಭಾನುವಾರ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು. ಇನ್ನೂ ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ರೈತರಾಗಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಓಡಿಸುತ್ತಿದ್ದ ವಾಹನಗಳನ್ನು ರೈತರ ಮೇಲೆ ಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಆ ಎರಡು ಕಾರುಗಳಲ್ಲಿ ಒಂದು ಕಾರನ್ನು ಓಡಿಸುತ್ತಿದ್ದುದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಎಂದು ರೈತರು ಆರೋಪಿಸಿದ್ದರು. ಹೀಗಾಗಿ, ಆತನನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು.

ಈ ಹಿಂದೆ ವೈರಲ್ ಆಗಿದ್ದ ವಿಡಿಯೋ ಕೇವಲ 25 ಸೆಂಕೆಡ್‌ನದ್ದಾಗಿತ್ತು. ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಹೋಗುತ್ತಿದ್ದ ರೈತರ ಮೇಲೆ 2 ಕಾರುಗಳು ಹರಿದು ಹೋಗಿದ್ದು, ಈ ಸಂದರ್ಭದಲ್ಲಿ ರೈತರು ನೆಲದ ಮೇಲೆ ಬಿದ್ದಿರುವ ದೃಶ್ಯ ಈ ವಿಡಿಯೋದಲ್ಲಿತ್ತು. ಇನ್ನು ಈ ಸಂದರ್ಭದಲ್ಲಿ ಉಳಿದ ರೈತರು ಈ ವಾಹನ ಚಲಿಸುವ ಹಾದಿಯಿಂದ ತಪ್ಪಿಸಿಕೊಳ್ಳಲು ತಡಕಾಡಿದ್ದರು.

ಲಖಿಂಪುರ ಖೇರಿಯ ಹಿಂಸಾಚಾರದ ಬಳಿಕ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗಲು ಬಂದಿದ್ದ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೇಶವ ಪ್ರಸಾದ್​ ಇದ್ದ ಕಾರನ್ನು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದಿತ್ತು. ಅದರಲ್ಲಿ ಒಂದು ಕಾರನ್ನು ಚಲಾಯಿಸಿದ್ದು ಅಜಯ್ ಮಿಶ್ರಾ ಅವರ ಮಗ ಆಶಿಶ್ ಎಂದು ಎಫ್​ಐಆರ್ ದಾಖಲಿಸಲಾಗಿತ್ತು.

ನಾಲ್ವರು ರೈತರು ಸಾವನ್ನಪ್ಪಿದ ನಂತರ ಹಿಂಸಾಚಾರ ಹೆಚ್ಚಾಗಿ ನಿಷೇಧಾಜ್ಞೆ ಘೋಷಿಸಲಾಗಿತ್ತು. ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮೃತರ ಕುಟುಂಬಗಳಿಗೆ 45 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗ ನೀಡುವ ಭರವಸೆ ನೀಡಿದೆ. ಹಾಗೇ ಗಾಯಾಳುಗಳಿಗೆ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದೆ. ಆದರೆ, ರೈತರ ಹತ್ಯೆ ನಡೆದ ಸ್ಥಳದಲ್ಲಿ ನನ್ನ ಮಗ ಇದ್ದುದಕ್ಕೆ ಸಾಕ್ಷಿ ಸಿಕ್ಕಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಭಾನುವಾರ ರಾತ್ರಿ ಆ ಸ್ಥಳದಲ್ಲಿ ನನ್ನ ಮಗ ಆಶಿಶ್ ಇರಲೇ ಇಲ್ಲ. ಆತ ಅಲ್ಲಿರಲಿಲ್ಲ ಎಂಬುದಕ್ಕೆ ನನ್ನ ಬಳಿ ವಿಡಿಯೋ ಸಾಕ್ಷಿಗಳಿವೆ. ವಿನಾಕಾರಣ ಅವನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆಶಿಶ್ ಭಾನುವಾರ ಬೇರೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂದು ಹಿಂಸಾಚಾರ ನಡೆದ ದಿನ ಅಜಯ್ ಮಿಶ್ರಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Lakhimpur Kheri Violence: ಲಖಿಂಪುರ್ ಖೇರಿಗೆ ಭೇಟಿ ನೀಡಲು ರಾಹುಲ್, ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ

Lakhimpur Kheri Violence: ಲಖಿಂಪುರ ಖೇರಿ ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದುದು ನಿಜವಾದರೆ ರಾಜೀನಾಮೆ ನೀಡುತ್ತೇನೆ; ಸಚಿವ ಅಜಯ್ ಮಿಶ್ರಾ