Jayalalithaa Death: ಜಯಲಲಿತಾ ಸಾವಿನ ಪ್ರಕರಣಕ್ಕೆ ಹೊಸ ತಿರುವು; ಆಸ್ಪತ್ರೆಯಲ್ಲಿದ್ದಾಗಿನ ಆಡಿಯೋ ಲೀಕ್
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ (J Jayalalithaa) ಅವರ ಸಾವಿನ ಪ್ರಕರಣ ಇದೀಗ ಮತ್ತೆ ಚರ್ಚೆಗೀಡಾಗಿದೆ. ಜಯಲಲಿತಾ ಸಾವಿನ ಬಗ್ಗೆ ನ್ಯಾ. ಆರ್ಮುಗಸ್ವಾಮಿ ಆಯೋಗ ವರದಿ ಸಲ್ಲಿಸಿದ್ದು, ಆರೋಪಿಗಳಾದ ಜಯಲಲಿತಾ ಅವರ ಗೆಳತಿ ವಿ.ಕೆ ಶಶಿಕಲಾ (VK Sasikala), ವೈದ್ಯ ಕೆಎಸ್ ಶಿವಕುಮಾರ್, ಮಾಜಿ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಮತ್ತು ಆಗಿನ ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಅವರ ವಿರುದ್ಧ ತನಿಖೆಗೆ ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ಜಯಲಲಿತಾ ಅವರ ಹಳೆಯ ಆಡಿಯೋವೊಂದು ವೈರಲ್ ಆಗಿದ್ದು, ಜಯಲಲಿತಾ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಆ ಆಡಿಯೋದಲ್ಲಿ ಜಯಲಲಿತಾ ಕೋಪಗೊಂಡಿರುವುದು, ನಿರಂತರವಾಗಿ ಕೆಮ್ಮುವುದು ಮತ್ತು ತಮಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ಆರೋಪಿಸುತ್ತಿರುವುದನ್ನು ಕೇಳಬಹುದು.
ನ್ಯಾ. ಆರ್ಮುಗಸ್ವಾಮಿ ಆಯೋಗದ ವರದಿಯಲ್ಲಿ ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ, ಅವರ ಸಂಬಂಧಿ ವೈದ್ಯ ಶಿವ ಕುಮಾರ್, ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಮತ್ತು ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಅವರ ವಿರುದ್ಧ ತನಿಖೆ ನಡೆಸಬೇಕೆಂದು ಹೇಳಲಾಗಿತ್ತು. ಈ ವರದಿಯನ್ನು ಊಹಾಪೋಹಗಳ ಆಧಾರದ ಮೇಲೆ ರೂಪಿಸಲಾಗಿದೆ ಮತ್ತು ಜಯಲಲಿತಾ ಅವರ ಸಾವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಅದಕ್ಕೆ ಶಶಿಕಲಾ ಪ್ರತಿಕ್ರಿಯಿಸಿದ್ದರು. ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ಅವರು ಆರ್ಮುಗಸ್ವಾಮಿ ವಿಚಾರಣಾ ಸಮಿತಿಯ ವರದಿಗೆ ಪ್ರತಿಕ್ರಿಯಿಸಿದ್ದು, “ವರದಿಯಲ್ಲಿ ನನ್ನ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಜೆ. ಜಯಲಲಿತಾ ಅವರ ವೈದ್ಯಕೀಯ ಚಿಕಿತ್ಸೆಯಲ್ಲಿ ನಾನು ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ನಾನು ತನಿಖೆಯನ್ನು ಎದುರಿಸಲು ಸಿದ್ಧಳಿದ್ದೇನೆ” ಎಂದಿದ್ದರು.
ಇದನ್ನೂ ಓದಿ: Breaking News: ಜಯಲಲಿತಾ ಸಾವು ಪ್ರಕರಣ; ಶಶಿಕಲಾ, ಮಾಜಿ ಸಚಿವರ ವಿರುದ್ಧ ತನಿಖೆಗೆ ಆರ್ಮುಗಸ್ವಾಮಿ ಆಯೋಗ ಆದೇಶ
ಇದರ ನಡುವೆ ವೈದ್ಯ ರಿಚರ್ಡ್ ಬೀಲ್ ಅವರು ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಂತರ 2017ರ ವೀಡಿಯೊ ಕೂಡ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜಯಲಲಿತಾ ವಿದೇಶಕ್ಕೆ ಹೋಗುವುದು ಅಗತ್ಯವೇ? ಎಂದು ಶಶಿಕಲಾ ಪ್ರಶ್ನಿಸಿದ್ದಾರೆ. ಅವರನ್ನು ವಿದೇಶಕ್ಕೆ ಚಿಕಿತ್ಸೆಗೆ ಕರೆದುಕೊಂಡು ಹೋಗಲೇಬೇಕು ಎಂದು ವೈದ್ಯರು ಹೇಳಿದ್ದಾರೆ. ಅದಕ್ಕೆ ಶಶಿಕಲಾ ಕೂಡ ಒಪ್ಪಿದ್ದರು. ಆದರೆ, ನಂತರ, ಜಯಲಲಿತಾ ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಬಯಸಲಿಲ್ಲ.
ನ್ಯಾಯಮೂರ್ತಿ ಆರ್ಮುಗಸ್ವಾಮಿ ಆಯೋಗದ ವರದಿಯು ಜಯಲಲಿತಾ ಅವರ ಸಾವಿನ ಸಮಯ ಒಂದು ಗಂಟೆ ತಡವಾಗಿರುವುದು, ಆಂಜಿಯೋಗ್ರಫಿ ಮಾಡದಿರುವುದು ಮತ್ತು ಚಿಕಿತ್ಸೆಯಲ್ಲಿ ಶಶಿಕಲಾ ಮಧ್ಯಸ್ಥಿಕೆ ವಹಿಸುವ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಡಿಸೆಂಬರ್ 2016ರಲ್ಲಿ ಜಯಲಲಿತಾ ಅವರ ನಿಧನದ ನಂತರ, ಅವರ ಸಾವಿನ ಕಾರಣ ಮತ್ತು ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳ ಬಗ್ಗೆ ಪೂರ್ಣ ಪ್ರಮಾಣದ ರಾಜಕೀಯ ನಡೆದಿರುವುದು ಇದರಿಂದ ಬೆಳಕಿಗೆ ಬಂದಿತ್ತು. ತಮಿಳುನಾಡು ಮಾಜಿ ಸಿಎಂ ಓ ಪನ್ನರ್‌ಸೆಲ್ವಂ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದು, ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು 2016ರ ಸೆಪ್ಟೆಂಬರ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅವರ ಆರೋಗ್ಯ ಸ್ಥಿತಿ, ಚಿಕಿತ್ಸೆ ಕುರಿತು ತನಿಖೆ ನಡೆಸಲು ಆರ್ಮುಗಸ್ವಾಮಿ ಆಯೋಗವನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: Big News: ನಾನೇನೂ ತಪ್ಪು ಮಾಡಿಲ್ಲ, ತನಿಖೆಗೆ ಸಿದ್ಧ; ಜಯಲಲಿತಾ ಸಾವಿನಲ್ಲಿ ತಮ್ಮ ಕೈವಾಡದ ಬಗ್ಗೆ ಶಶಿಕಲಾ ಸ್ಪಷ್ಟನೆ
2017ರಲ್ಲಿ ಜಯಲಲಿತಾ ಅವರ ಪಕ್ಷವಾದ ಎಐಡಿಎಂಕೆ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿದ್ದಾಗ ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎ. ಆರ್ಮುಗಸ್ವಾಮಿ ನೇತೃತ್ವದ ಆಯೋಗವನ್ನು ಸ್ಥಾಪಿಸಲಾಗಿತ್ತು. ಬಳಿಕ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಾಗ, ಜಯಲಲತಾ ಅವರ ಸಾವಿನ ಬಗ್ಗೆ ವಿವರವಾದ ತನಿಖೆಯನ್ನು ನಡೆಸುವುದಾಗಿ ಭರವಸೆ ನೀಡಿತ್ತು. ನ್ಯಾಯಮೂರ್ತಿ ಎ ಆರ್ಮುಗಸ್ವಾಮಿ ಅವರ ವರದಿಯನ್ನು ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.