ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ಸರ್ಕಾರದಿಂದ ಹೊಸ ಸಲಹೆ

ಯಾವ ರೀತಿಯಿಂದ ಸಾಧ್ಯವೋ ಆ ಮಾರ್ಗಗಳಿಂದ ಆದಷ್ಟು ಬೇಗ ದೇಶ ಬಿಟ್ಟು ಹೊರಡಿ ಎಂದು ಇರಾನ್​ನಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರ ಹೊಸ ಸಲಹೆ ನೀಡಿದೆ. ಪ್ರಸ್ತುತ ಇರಾನ್‌ನಲ್ಲಿರುವ ತನ್ನ ಎಲ್ಲಾ ನಾಗರಿಕರು ಲಭ್ಯವಿರುವ ಯಾವುದೇ ಸಾರಿಗೆ ವಿಧಾನದ ಮೂಲಕ ಇರಾನ್ ದೇಶವನ್ನು ತೊರೆಯುವಂತೆ ಭಾರತ ಸರ್ಕಾರ ಮನವಿ ಮಾಡಿದೆ. ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು ಸೇರಿದಂತೆ ಭಾರತೀಯ ನಾಗರಿಕರು ಎಚ್ಚರಿಕೆಯಿಂದಿರಬೇಕು. ಪ್ರತಿಭಟನೆಗಳು ಅಥವಾ ಪ್ರದರ್ಶನಗಳ ಪ್ರದೇಶಗಳ ಬಳಿ ಓಡಾಟ ತಪ್ಪಿಸಬೇಕು. ಸ್ಥಳೀಯ ಮಾಧ್ಯಮಗಳಲ್ಲಿ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸಿ, ಮಿಷನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕೆಂದು ರಾಯಭಾರ ಕಚೇರಿ ಸೂಚಿಸಿದೆ.

ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ಸರ್ಕಾರದಿಂದ ಹೊಸ ಸಲಹೆ
Iran Strike

Updated on: Feb 23, 2026 | 4:31 PM

ನವದೆಹಲಿ, ಫೆಬ್ರವರಿ 23: ಭಾರತ ಸರ್ಕಾರ ಮತ್ತೊಮ್ಮೆ ಇರಾನ್‌ನಲ್ಲಿರುವ ತನ್ನ ನಾಗರಿಕರಿಗೆ ಸಾಧ್ಯವಾದಷ್ಟು ಬೇಗ ದೇಶ ಬಿಟ್ಟು ಹೊರಡಿ ಎಂದು ಸಲಹೆ ನೀಡಿದೆ. ಫೆಬ್ರವರಿ 23ರಂದು ಬಿಡುಗಡೆ ಮಾಡಿದ ಹೊಸ ಸಲಹೆಯಲ್ಲಿ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರು ಮನೆಗೆ ಮರಳಲು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಯಾವ ಸಾರಿಗೆಯನ್ನು ಬೇಕಾದರೂ ಬಳಸುವಂತೆ ಮನವಿ ಮಾಡಿದೆ. ಇರಾನ್​​ನಲ್ಲಿ (Iran) ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಸಂಘರ್ಷದ ಭಯ ಹೆಚ್ಚುತ್ತಿರುವ ಕಾರಣದಿಂದ ಅಮೆರಿಕದ ಈ ಎಚ್ಚರಿಕೆ ಬಂದಿದೆ.

2026ರ ಜನವರಿ 5ರಂದು ಭಾರತ ಸರ್ಕಾರ ಹೊರಡಿಸಿದ ಸಲಹೆಯ ಮುಂದುವರಿಕೆಯಾಗಿ ಮತ್ತು ಇರಾನ್‌ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು (ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು) ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ಇರಾನ್‌ನಿಂದ ಹೊರಹೋಗಲು ಸೂಚಿಸಲಾಗಿದೆ.

“ಎಲ್ಲಾ ಭಾರತೀಯ ನಾಗರಿಕರು ಮತ್ತು ಪಿಐಒಗಳು ಸರಿಯಾದ ಎಚ್ಚರಿಕೆ ವಹಿಸಬೇಕು. ಪ್ರತಿಭಟನೆಗಳು ಅಥವಾ ಪ್ರದರ್ಶನಗಳ ಪ್ರದೇಶಗಳನ್ನು ತಪ್ಪಿಸಬೇಕು, ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಯಾವುದೇ ಬೆಳವಣಿಗೆಗಳಿಗಾಗಿ ಸ್ಥಳೀಯ ಮಾಧ್ಯಮಗಳನ್ನು ಗಮನಿಸುತ್ತಿರಬೇಕು” ಎಂದು ಸಲಹೆಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ಅನಿವಾರ್ಯವಲ್ಲದಿದ್ದರೆ ಇರಾನ್​​ಗೆ ಹೋಗಬೇಡಿ; ಸರ್ಕಾರದಿಂದ ಭಾರತೀಯರಿಗೆ ಸೂಚನೆ

ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಮತ್ತು ಪ್ರವಾಸಿಗರು ಸೇರಿದಂತೆ ಇದೀಗ ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಭಾರತ ಸರ್ಕಾರದ ಈ ಸಲಹೆ ಅನ್ವಯಿಸುತ್ತದೆ. ಇರಾನ್​​ನಲ್ಲಿರುವ ಭಾರತೀಯರು ಜಾಗರೂಕರಾಗಿರಲು, ಪ್ರತಿಭಟನಾ ಪ್ರದೇಶಗಳ ಕಡೆ ಹೋಗುವುದನ್ನು ತಪ್ಪಿಸಲು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿರಲು ಜನರಿಗೆ ಸೂಚಿಸಲಾಗಿದೆ.


ಭಾರತೀಯ ನಾಗರಿಕರು ತಮ್ಮ ಪಾಸ್‌ಪೋರ್ಟ್‌ಗಳು ಮತ್ತು ಇತರ ಪ್ರಮುಖ ಪ್ರಯಾಣದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ತಿಳಿಸಲಾಗಿದೆ. ಇನ್ನೂ ರಾಯಭಾರ ಕಚೇರಿಯಲ್ಲಿ ನೋಂದಾಯಿಸದವರು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಇದರ ಜೊತೆಗೆ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಆದಷ್ಟು ಬೇಗ ದೇಶ ಬಿಟ್ಟು ಹೊರಡಿ; ಇರಾನ್​​ನ ಭಾರತೀಯ ಪ್ರಜೆಗಳಿಗೆ ಸೂಚನೆ, ಸಹಾಯವಾಣಿ ಸಂಖ್ಯೆ ಬಿಡುಗಡೆ

ಇರಾನ್ ಒಳಗೆ ಇಂಟರ್ನೆಟ್ ಸಮಸ್ಯೆಗಳಿದ್ದಲ್ಲಿ, ಭಾರತದ ಕುಟುಂಬಗಳು ಅವರ ಪರವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ತಕ್ಷಣದ ಸಹಾಯಕ್ಕಾಗಿ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಸಹ ಹಂಚಿಕೊಳ್ಳಲಾಗಿದೆ. “ಭಾರತೀಯ ರಾಯಭಾರ ಕಚೇರಿಯ ತುರ್ತು ಸಂಪರ್ಕ ಸಹಾಯವಾಣಿಗಳನ್ನು ಕೆಳಗೆ ನೀಡಲಾಗಿದೆ: ಮೊಬೈಲ್ ಸಂಖ್ಯೆಗಳು: +989128109115; +989128109109; +989128109102; +989932179359. ಇಮೇಲ್: cons.tehran@mea.gov.in” ಎಂದು ಸರ್ಕಾರ ಹೇಳಿದೆ.

ಇರಾನ್‌ನ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳು ಮತ್ತು ಪರಮಾಣು ಮಾತುಕತೆಗಳ ಕುರಿತು ಇರಾನ್ ಮತ್ತು ಅಮೆರಿಕದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕಾರಣದಿಂದ ಈ ಸಲಹೆ ನೀಡಲಾಗಿದೆ. ಈ ವಾರದ ಕೊನೆಯಲ್ಲಿ ಜಿನೀವಾದಲ್ಲಿ ಮತ್ತೊಂದು ಸುತ್ತಿನ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಆದರೆ, ಒಪ್ಪಂದಕ್ಕೆ ಬರದಿದ್ದರೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಯುದ್ಧದ ಭೀತಿ ಸೃಷ್ಟಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ