ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಶಾಕ್, ಬಿಜೆಪಿ ಕಡೆ ಮುಖ ಮಾಡಿದ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ
ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕ ಜಯಂತ್ ಚೌಧರಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಂಭವನೀಯ ಮೈತ್ರಿಗಾಗಿ ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಬೆಳವಣಿಗೆಗೆ ಹತ್ತಿರವಿರುವ ಮೂಲಗಳ ಪ್ರಕಾರ, ಬಿಜೆಪಿಯು ಉತ್ತರ ಪ್ರದೇಶದ ನಾಲ್ಕು ಲೋಕಸಭಾ ಸ್ಥಾನಗಳಾದ ಕೈರಾನಾ, ಬಾಗ್‌ಪತ್, ಮಥುರಾ ಮತ್ತು ಅಮ್ರೋಹಾವನ್ನು ಆರ್‌ಎಲ್‌ಡಿಗೆ ನೀಡಿದೆ.
ಪಶ್ಚಿಮ ಬಂಗಾಳ ಹಾಗೂ ಪಂಜಾಬ್ ಬಳಿಕ ಈಗ ಇಂಡಿಯಾ ಒಕ್ಕೂಟದ ಮೈತ್ರಿ ಉತ್ತರ ಪ್ರದೇಶದಲ್ಲೂ ಒಡೆಯುವ ಹಂತದಲ್ಲಿದೆ. ಇದೀಗ ರಾಷ್ಟ್ರೀಯ ಲೋಕದಳ(RLD) ಮುಖ್ಯಸ್ಥ ಜಯಂತ್ ಚೌಧರಿ(Jayant Chaudhary) ಕೂಡ ಇಂಡಿಯಾ ಒಕ್ಕೂಟದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಜಯಂತ್ ಶೀಘ್ರದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಬಹುದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯು ಉತ್ತರ ಪ್ರದೇಶ ತಲುಪುವ ಮೊದಲು ರಾಷ್ಟ್ರೀಯ ಲೋಕದಳವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಸೇರುವ ಸಾಧ್ಯತೆ ಇದೆ.
ಜಯಂತ್ ಅವರು ಬಿಜೆಪಿಯ ಕೆಲವು ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. ಅವರ ತಂದೆ ಅಜಿತ್ ಚೌಧರಿ ಅವರ ಜನ್ಮದಿನವಾದ ಫೆಬ್ರವರಿ 12ರಂದು ಬಿಜೆಪಿಯೊಂದಿಗಿನ ಮೈತ್ರಿಯ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಮಾತುಕತೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದೆ. ಸದ್ಯ ಮುಜಾಫರ್ನಗರ ಸೀಟು ವಿವಾದದ ಕಣವಾಗಿದೆ, ಸೋಮವಾರ ತಡರಾತ್ರಿ ಜಯಂತ್ ಚೌಧರಿ ಕೇಂದ್ರದ ಹಿರಿಯ ಸಚಿವರನ್ನು ಭೇಟಿಯಾಗಿದ್ದಾರೆ.
ಮತ್ತಷ್ಟು ಓದಿ: 3 ರಾಜ್ಯಗಳು ಬಿಜೆಪಿ ತೆಕ್ಕೆಗೆ, ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡ ಇಂಡಿಯಾ ಒಕ್ಕೂಟ
ಸಭೆಯಲ್ಲಿ ಆರ್‌ಎಲ್‌ಡಿ ಮುಖ್ಯಸ್ಥರು ಐದು ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರು, ಆದರೆ ಇನ್ನೂ ಸೂತ್ರವನ್ನು ನಿರ್ಧರಿಸಲಾಗಿಲ್ಲ, ಮುಂದಿನ ಸಭೆ ಶೀಘ್ರದಲ್ಲೇ ನಡೆಯಲಿದ್ದು, ವಿಲೀನ ಅಥವಾ ಮೂತ್ರಿ ಕುರಿತು ಅಂತಿಮ ಮಾತುಕತೆ ನಡೆಯಲಿದೆ.
ಕಳೆದ ತಿಂಗಳು ಸಮಾಜವಾದಿ ಪಕ್ಷ ಮತ್ತು ಆರ್‌ಎಲ್‌ಡಿ ಮೈತ್ರಿಯನ್ನು ಘೋಷಿಸಲಾಗಿತ್ತು. ಒಪ್ಪಂದದ ಪ್ರಕಾರ ಪಶ್ಚಿಮ ಉತ್ತರ ಪ್ರದೇಶದ 7 ಲೋಕಸಭಾ ಸ್ಥಾನಗಳನ್ನು ಜಯಂತ್ ಚೌಧರಿ ಅವರ ಪಕ್ಷಕ್ಕೆ ನೀಡುವುದಾಗಿ ಎಸ್ಪಿ ಭರವಸೆ ನೀಡಿದೆ. ಆರ್‌ಎಲ್‌ಡಿಗೆ ಅಖಿಲೇಶ್ ಯಾದವ್ ನೀಡಿದ ಸ್ಥಾನಗಳಲ್ಲಿ ಬಾಗ್‌ಪತ್, ಮಥುರಾ, ಮುಜಾಫರ್ನಗರ, ಬಿಜ್ನೋರ್, ಮೀರತ್, ಆಮ್ರೋಹಾ ಮತ್ತು ಕೈರಾನಾ ಸೇರಿವೆ.
4 ಲೋಕಸಭೆ ಮತ್ತು ಒಂದು ರಾಜ್ಯಸಭಾ ಸ್ಥಾನದ ಕುರಿತು ಬಿಜೆಪಿಯೊಂದಿಗೆ ಮಾತುಕತೆ ಅಂತಿಮಗೊಳಿಸಿದೆ. ಏಪ್ರಿಲ್, ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. 17ನೇ ಲೋಕಸಭಾ ಅವಧಿ ಜೂನ್ನಲ್ಲಿ ಕೊನೆಗೊಳ್ಳಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ