XE Variant: ವಾಸನೆ ಬರೋದಿಲ್ಲ, ರುಚಿ ತಿಳಿಯೋದಿಲ್ಲ-ಎಕ್ಸ್​​ಇ ಸೋಂಕು ತರುವ ಸಮಸ್ಯೆಗಳಿವು !

| Updated By: Lakshmi Hegde

Updated on: Apr 10, 2022 | 2:16 PM

ಎಕ್ಸ್​ಇ ಮಾರಣಾಂತಿಕವಲ್ಲ ಎಂದು ಹೇಳಲಾಗಿದ್ದರೂ, ಅದು ತುಂಬ ಸೌಮ್ಯ ಎಂದೂ ಭಾವಿಸಬೇಕಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅದರಲ್ಲೂ ಕೊವಿಡ್​ 19 ಲಸಿಕೆ ಪೂರ್ಣಪ್ರಮಾಣದಲ್ಲಿ ತೆಗೆದುಕೊಂಡವರಿಗೆ ಈ ವೈರಾಣು ಅಷ್ಟೇನೂ ಬಾಧಿಸದು.

XE Variant: ವಾಸನೆ ಬರೋದಿಲ್ಲ, ರುಚಿ ತಿಳಿಯೋದಿಲ್ಲ-ಎಕ್ಸ್​​ಇ ಸೋಂಕು ತರುವ ಸಮಸ್ಯೆಗಳಿವು !
ಸಾಂಕೇತಿಕ ಚಿತ್ರ
Follow us on

ಕೊರೊನಾದ ಒಂದು ರೂಪಾಂತರ ಸ್ವಲ್ಪ ತಗ್ಗುತ್ತಿದೆ ಎನ್ನುವಷ್ಟರಲ್ಲಿ ಮತ್ತೊಂದು ತಳಿ ಧುತ್ತನೆ ಏಳುತ್ತಿದೆ. ಸದ್ಯ ಹೊಸದಾಗಿ ಶುರುವಾಗಿರುವುದು ಎಕ್ಸ್​​ಇ ಎಂಬ ರೂಪಾಂತರಿ ವೈರಾಣು. ಇದು ಕೊರೊನಾದ ತಳಿಗಳಲ್ಲೇ ಅತ್ಯಂತ ಹೆಚ್ಚು ಪ್ರಸರಣ ಸಾಮರ್ಥ್ಯ ಇರುವ ವೈರಸ್ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಹಾಗೇ, ವಿಶ್ವ ಆರೋಗ್ಯ ಸಂಸ್ಥೆಯೂ ಇದೇ ಎಚ್ಚರಿಕೆಯನ್ನು ನೀಡಿದೆ. ಎಕ್ಸ್​ಇ ವೈರಾಣು, ಒಮಿಕ್ರಾನ್​ಗಿಂತಲೂ ವಿಭಿನ್ನ ಲಕ್ಷಣಗಳನ್ನು ಉಂಟು ಮಾಡುತ್ತದೆ.  ಎಕ್ಸ್​ಇ ಸೋಂಕಿಗೆ ಒಳಗಾದವರು ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅಂದಹಾಗೇ, ಈ ವಾಸನೆ ಮತ್ತು ರುಚಿಯ ಅನುಭವವನ್ನು ಕಳೆದುಕೊಳ್ಳುವುದು ಡೆಲ್ಟಾ ರೂಪಾಂತರಿ ವೈರಾಣುವಿನ ಪ್ರಮುಖ ಲಕ್ಷಣ. 

ಈ ಎಕ್ಸ್​ಇ ವೈರಸ್​ ಭಾರತದಲ್ಲಿ ಮುಂಬೈನಲ್ಲಿ ಮೊದಲು ಕಾಣಿಸಿಕೊಂಡಿತು. ಅದಾದ ಮೇಲೆ ಗುಜರಾತ್​​ನಲ್ಲಿ ಕೂಡ ಒಂದು ಕೇಸ್ ದಾಖಲಾಗಿದೆ. ಅಂದಹಾಗೇ, ಮುಂಬೈನಲ್ಲಿ ಎಕ್ಸ್​ಇ ಕೇಸ್​ ದಾಖಲಾಗಿದ್ದಾಗಿ ಅಲ್ಲಿನ ನಗರಾಡಳಿತ ತಿಳಿಸಿದ್ದರೂ, ಕೇಂದ್ರ ಸರ್ಕಾರ ಅದನ್ನು ದೃಢಪಡಿಸಿಲ್ಲ. ದಾಖಲಾದ ಕೇಸ್​​ನಲ್ಲಿ ಆ ಮಹಿಳೆಯ ರಕ್ತ, ಗಂಟಲು ದ್ರವದ ಮಾದರಿಯನ್ನು ಪುಣೆಗೆ ತಪಾಸಣೆಗೆ ಕಳಿಸಲಾಗಿದ್ದು, ಅದಿನ್ನೂ ವರದಿ ಬರಬೇಕಿದೆ. ಅಲ್ಲಿಯವರೆಗೂ ಅದು ಎಕ್ಸ್​ಇ ಪ್ರಕರಣ ಎಂದು ದೃಢವಾಗಿ ಹೇಳಲಾಗದು ಎಂದು ಕೇಂದ್ರ ಆರೋಗ್ಯ ಇಲಾಖೆ ಶನಿವಾರ ಹೇಳಿದೆ.

ಒಮಿಕ್ರಾನ್​ನ ತಳಿಗಳಾದ ಬಿಎ.1 ಮತ್ತು ಬಿಎ.2ಗಳು ಮರುಸಂಯೋಜನೆಗೊಂಡು ಮಾರ್ಪಾಡಾಗಿದ್ದೇ ಈ ಎಕ್ಸ್​ಇ ಹುಟ್ಟಲು ಕಾರಣ. ಇದರ ಬೆಳವಣಿಗೆ ದರ ಬಿಎ.2ಗಿಂತಲೂ ಶೇ.9.8ರಷ್ಟು ಹೆಚ್ಚು. ಇದನ್ನು ಪತ್ತೆ ಹಚ್ಚಲು ತುಸು ಕಷ್ಟವಾಗಿರುವ ಕಾರಣ ರಹಸ್ಯ ಚಲನವಲನ ರೂಪಾಂತರಿ ಎಂದೂ ಕರೆಯಲಾಗುತ್ತದೆ. ಆದರೆ ಇದು ಗಂಭೀರ ಕಾಯಿಲೆಯನ್ನು ಉಂಟು ಮಾಡುವ ವೈರಾಣು ಅಲ್ಲ ಎಂದು ಡಬ್ಲ್ಯೂಎಚ್​ಒ ತಿಳಿಸಿದೆ. ಜನವರಿ 19ರಂದು ಮೊದಲ ಬಾರಿಗೆ ಇಂಗ್ಲೆಂಡ್​ನಲ್ಲಿ ಎಕ್ಸ್​ಇ ಪತ್ತೆಯಾಯಿತು. ಅದಾದ ಮೇಲೆ ಇಲ್ಲಿಯವರೆಗೆ 600 ಕೇಸ್​ಗಳು ದಾಖಲಾಗಿವೆ. ನ್ಯೂಜಿಲ್ಯಾಂಡ್, ಥೈಲ್ಯಾಂಡ್​ಗಳಲ್ಲೂ ಎಕ್ಸ್​ಇ ಕಾಣಿಸಿಕೊಂಡಿದೆ.  ಡೆಲ್ಟಾ ರೂಪಾಂತರಿಯಿಂದ ಎದ್ದಿದ್ದ ಕೊವಿಡ್​ 19 ಎರಡನೇ ಅಲೆ ವೇಳೆ ಅನೇಕ ಜನರು ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡಿದ್ದರು.  ಅದೇ ರೀತಿ ಅನುಭವ ಎಕ್ಸ್​ಇ ಸೋಂಕಿತರಿಗೂ ಆಗುತ್ತಿದೆ. ಅದರೊಂದಿಗೆ ಸಾಮಾನ್ಯವಾಗಿ ಕೊರೊನಾ ಬಂದಾಗ ಉಂಟಾಗುವ ಜ್ವರ, ಗಂಟಲು ನೋವು, ಗಂಟಲು ತುರಿಕೆ, ಕೆಮ್ಮು, ಶೀತ, ಚರ್ಚ ಕೆಂಪಾಗುವುದು, ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆಯೂ ಕಾಣಿಸಿಕೊಳ್ಳುತ್ತಿದೆ.

ಲಸಿಕೆ ತೆಗೆದುಕೊಂಡಿದ್ರೆ ಸೇಫ್​ !

ಎಕ್ಸ್​ಇ ಮಾರಣಾಂತಿಕವಲ್ಲ ಎಂದು ಹೇಳಲಾಗಿದ್ದರೂ, ಅದು ತುಂಬ ಸೌಮ್ಯ ಎಂದೂ ಭಾವಿಸಬೇಕಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅದರಲ್ಲೂ ಕೊವಿಡ್​ 19 ಲಸಿಕೆ ಪೂರ್ಣಪ್ರಮಾಣದಲ್ಲಿ ತೆಗೆದುಕೊಂಡವರಿಗೆ ಈ ವೈರಾಣು ಅಷ್ಟೇನೂ ಬಾಧಿಸದು. ಎಂದೂ ಭಾರತೀಯ ಆರೋಗ್ಯ ತಜ್ಞರು ಹೇಳಿದ್ದಾರೆ. ಭಾರತದಲ್ಲಿ ಬಹುತೇಕರಿಗೆ ಕೊರೊನಾ ಲಸಿಕೆ ಎರಡೂ ಡೋಸ್ ನೀಡಲಾಗಿದ್ದು, ಸದ್ಯ ಇಂದಿನಿಂದ ಮೂರನೇ ಡೋಸ್​ ನೀಡುವ ಅಭಿಯಾನ ಶುರುವಾಗುತ್ತಿದೆ. ಲಸಿಕೆ ಪೂರ್ತಿ ಪ್ರಮಾಣದಲ್ಲಿ ಪಡೆದವರಿಗೆ ಎಕ್ಸ್​ಇ ಅತ್ಯಂತ ಸೌಮ್ಯವಾಗಿರಲಿದೆ. ಆದರೆ ಲಸಿಕೆ ಪಡೆಯದೆ ಇರುವವರು ತುಂಬ ಎಚ್ಚರಿಕೆಯಿಂದ ಇರಬೇಕು ಎಂದು  ವೈದ್ಯ ಭಾಸ್ಕರ್ ನಾರಾಯಣ್​ ಚೌಧರಿ ಹೇಳಿದ್ದಾಗಿ ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Shocking News: ತಲೆಕೂದಲು ಉದುರದಂತೆ ತಡೆಯಲು ಈ ವ್ಯಕ್ತಿ ಮಾಡಿದ ಪ್ಲಾನ್ ಏನು ಗೊತ್ತಾ?; ಕೇಳಿದ್ರೆ ಶಾಕ್ ಆಗ್ತೀರ

Published On - 1:23 pm, Sun, 10 April 22