ಮುಂಬೈ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ
20016ರ ಜುಲೈ 11ರಂದು ಮುಂಬೈನ ಲೋಕಲ್ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟಿಸಲಾಗಿತ್ತು. ಈ ದುರಂತದಲ್ಲಿ 189 ಜನರು ಮೃತಪಟ್ಟಿದ್ದರು. ಈ ಪ್ರಕರಣದ ಆರೋಪಿಗಳಾಗಿದ್ದ 12 ಜನರನ್ನು ಸಾಕ್ಷ್ಯಾಧಾರದ ಕೊರತೆಯಿದೆ ಎಂಬ ಕಾರಣ ನೀಡಿ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಇದಕ್ಕೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದು, ಆ ಆರೋಪಿಗಳು ನಿರಪರಾಧಿಗಳಾದರೆ ಆ 189 ಜನರ ಜೀವವನ್ನು ಬಲಿ ಪಡೆದವರು ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ. ಈ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ನವದೆಹಲಿ, ಜುಲೈ 22: ಬರೋಬ್ಬರಿ 189 ಜನರನ್ನು ಬಲಿ ಪಡೆದ 2006ರ ಮುಂಬೈ ಸರಣಿ ರೈಲು ಸ್ಫೋಟ (Mumbai Train Bomb Blast Case) ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್ (Bombay High Court) ಸೋಮವಾರ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ ಖುಲಾಸೆಗೊಳಿಸಿದೆ. ನ್ಯಾಯಾಲಯದ ಮುಂದಿರುವ ಸಾಕ್ಷ್ಯಗಳನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆಂದು ನಂಬಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣವೇ ಎಲ್ಲರನ್ನೂ ಬಿಡುಗಡೆ ಮಾಡಿ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿತ್ತು. ಈ ತೀರ್ಪು ಹೊರಬಿದ್ದ ಬಳಿಕ ಜೈಲಿನಿಂದ 8 ಜನರನ್ನು ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ 5 ಜನರಿಗೆ ಗಲ್ಲು ಮತ್ತು 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು. ಒಬ್ಬ ಆರೋಪಿ 2021ರಲ್ಲಿಯೇ ಸಾವನ್ನಪ್ಪಿದ್ದ.
ಇದೀಗ ಹೈಕೋರ್ಟ್ನ ಈ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ 12 ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 2006ರ ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಳಿಸುವುದರ ವಿರುದ್ಧ ಮಹಾ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಜುಲೈ 21ರ ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯದ ಮೇಲ್ಮನವಿಯನ್ನು ಗುರುವಾರಕ್ಕೆ ಪಟ್ಟಿ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಾಡಿದ ತುರ್ತು ಮನವಿಯನ್ನು ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್, ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಪರಿಗಣಿಸಿದೆ.
Maharashtra Government files appeal in Supreme Court against the Bombay High Court, acquitting all 12 people in relation to the 2006 Mumbai train bombings. Matter to be heard on 24th July: ATS Maharashtra pic.twitter.com/hSXxOMkCjy
— ANI (@ANI) July 22, 2025
ಇದನ್ನೂ ಓದಿ: 2006ರ ಮುಂಬೈ ರೈಲು ಸ್ಫೋಟ, ಸಾಕ್ಷ್ಯಾಧಾರಗಳ ಕೊರತೆ, ಎಲ್ಲಾ 12 ಆರೋಪಿಗಳ ಖುಲಾಸೆ
“ಇದು ಗಂಭೀರ ವಿಷಯ. ಎಸ್‌ಎಲ್‌ಪಿ (ವಿಶೇಷ ರಜೆ ಅರ್ಜಿ) ಸಿದ್ಧವಾಗಿದೆ. ದಯವಿಟ್ಟು ಅದನ್ನು ನಾಳೆಗೆ ಪಟ್ಟಿ ಮಾಡಿ. ಬಹಳ ತುರ್ತು ಇದೆ. ಇನ್ನೂ ಕೆಲವು ಪ್ರಮುಖ ವಿಷಯಗಳನ್ನು ಪರಿಶೀಲಿಸಬೇಕಾಗಿದೆ” ಎಂದು ಸಾಲಿಟರ್ ಜನರಲ್ ಹೇಳಿದ್ದರು.ಹೈಕೋರ್ಟ್ ತೀರ್ಪಿನ ನಂತರ 8 ವ್ಯಕ್ತಿಗಳು ಜೈಲಿನಿಂದ ಬಿಡುಗಡೆಯಾಗಿರುವ ಬಗ್ಗೆ ಪತ್ರಿಕೆಯ ವರದಿಗಳನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಪ್ರಸ್ತಾಪಿಸಲಾಗಿತ್ತು.
ಜುಲೈ 11, 2006ರಂದು ಪಶ್ಚಿಮ ಮಾರ್ಗದ ವಿವಿಧ ಸ್ಥಳಗಳಲ್ಲಿ ಮುಂಬೈ ಸ್ಥಳೀಯ ರೈಲುಗಳಲ್ಲಿ 7 ಸ್ಫೋಟಗಳು ಸಂಭವಿಸಿ 189 ಜನರು ಸಾವನ್ನಪ್ಪಿದರು, 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ಕ್ಕೆ ಬಾಂಬೆ ಹೈಕೋರ್ಟ್ ನೀಡಿದ ತೀರ್ಪು ದೊಡ್ಡ ಮುಜುಗರವನ್ನುಂಟು ಮಾಡಿದೆ. ಆರೋಪಿಗಳು ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)ದ ಸದಸ್ಯರಾಗಿದ್ದು, ಪಾಕಿಸ್ತಾನಿ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ಜೊತೆ ಪಿತೂರಿ ನಡೆಸಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿತ್ತು. ಆದರೆ, ಸಾಕ್ಷ್ಯಾಧಾರಗಳು ಸಾಕಾಗುತ್ತಿಲ್ಲ ಎಂಬ ಕಾರಣ ನೀಡಿ ಆ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Tue, 22 July 25




