Mumbai Rains: ಭಾರೀ ಮಳೆ, ಭೂ ಕುಸಿತಕ್ಕೆ ಸಿಲುಕಿ 129 ಜನ ವಿಧಿವಶ; ಮುಳುಗುತ್ತಿದ್ದ ಬಸ್ನಿಂದ 11 ಜನ ಪವಾಡ ಸದೃಶ ರೀತಿಯಲ್ಲಿ ಪಾರು
ರಾಜ್ಯದ ವಿವಿಧೆಡೆ ಮಳೆಯಿಂದ ಸಂಭವಿಸಿದ ಅನಾಹುತಗಳಿಂದ ಕನಿಷ್ಠ 129 ಜನ ದುರ್ಮರಣಕ್ಕೀಡಾಗಿದ್ದಾರೆ. ಗುರುವಾರ ಭಾರೀ ಮಳೆಯಿಂದ ತಲೈ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದ 38 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಹದ್ ತೆಸ್ಲಿ ಬಳಿ ಉಂಟಾದ ಭೂಕುಸಿತದಲ್ಲಿ ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.
ಮುಂಬೈ: ಭಾರತದ ವಿವಿಧ ರಾಜ್ಯಗಳಲ್ಲಿ ಮುಂಗಾರಿನ ಅಬ್ಬರ ಹೆಚ್ಚಾಗಿದ್ದು, ಹಲವೆಡೆ ಸಾವು ನೋವುಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ (Maharashtra) ಕನಿಷ್ಠವೆಂದರೂ 129 ಜನ ಮಹಾಮಳೆಯಿಂದಾದ ಅನಾಹುತಕ್ಕೆ ಕಳೆದೆರೆಡು ದಿನಗಳಲ್ಲಿ ಪ್ರಾಣ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ. ಭಾರೀ ಮಳೆಯ ಕಾರಣದಿಂದ ಮಹಾರಾಷ್ಟ್ರದ ಹಲವೆಡೆ ಪ್ರವಾಹ (Flood) ಪರಿಸ್ಥಿತಿಯೂ ಉಂಟಾಗಿದ್ದು, ರಾಯಗಡ ಜಿಲ್ಲೆಯ ತಲೈ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದಿಂದಲೇ (Landslide) 38 ಮಂದಿ ಒಂದೇ ಬಾರಿಗೆ ಮೃತಪಟ್ಟಿದ್ದಾರೆ. ನೀರಿನ ರಭಸಕ್ಕೆ ಅನೇಕ ರಸ್ತೆಗಳೂ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರದ ವಿಕೋಪ ನಿರ್ವಹಣೆ ವಿಭಾಗದ ಹಿರಿಯ ಅಧಿಕಾರಿಗಳು, ಕಳೆದ 48 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ಮಳೆಯಿಂದ ಸಂಭವಿಸಿದ ಅನಾಹುತಗಳಿಂದ ಕನಿಷ್ಠ 129 ಜನ ದುರ್ಮರಣಕ್ಕೀಡಾಗಿದ್ದಾರೆ. ಗುರುವಾರ ಭಾರೀ ಮಳೆಯಿಂದ ತಲೈ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದ 38 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಹದ್ ತೆಸ್ಲಿ ಬಳಿ ಉಂಟಾದ ಭೂಕುಸಿತದಲ್ಲಿ ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ. ಬೇರೆ ಬೇರೆ ಭೂಕುಸಿತ ಘಟನೆಗಳಿಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯ ನಡೆಯುತ್ತಿದೆಯಾದರೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕರಾವಳಿ ಭಾಗದಲ್ಲಿ ತೀವ್ರ ಹಾನಿಯಾಗಿದ್ದು, ರಸ್ತೆಗಳು ಕೊಚ್ಚಿ ಹೋಗಿವೆ. ಹಲವರು ಮನೆ, ಮಠ ಕಳೆದುಕೊಂಡಿದ್ದಾರೆ. ರತ್ನಗಿರಿ ಬಳಿ ಸಂಭವಿಸಿದ ಭೂ ಕುಸಿತದಲ್ಲಿ 10 ಜನ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದ್ದು, ಕೊಲ್ಲಾಪುರದಲ್ಲಿ ನದಿಯಲ್ಲಿ ತೇಲಿಹೋಗುತ್ತಿದ್ದ ಬಸ್ನಲ್ಲಿದ್ದ 11 ಜನ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
PM @narendramodi has announced an ex-gratia of Rs. 2 lakh each from PMNRF for the next of kin of those who lost their lives due to a landslide in Raigad, Maharashtra. Rs. 50,000 would be given to the injured.
— PMO India (@PMOIndia) July 23, 2021
ಮಹಾರಾಷ್ಟ್ರದ ರಾಯ್ಗಡ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಅವಘಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಂತೆಯೇ, ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಹೇಳಿದೆ.
(Maharashtra Heavy Rains Flood Landslide killed at least 129 in 48 hours Death toll may increase)
ಇದನ್ನೂ ಓದಿ: Karnataka Rains: ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಎಲ್ಲೆಡೆಯೂ ಭಾರೀ ಮಳೆ
ಕರ್ನಾಟಕದಲ್ಲಿ ಮಳೆ ಅನಾಹುತ, 21 ರಾಜ್ಯ ಹೆದ್ದಾರಿಗಳ ಸಂಪರ್ಕ ಕಡಿತ: ಡಿಸಿಎಂ ಗೋವಿಂದ ಕಾರಜೋಳ