Guru Purnima 2021: ‘ಭಗವಾನ್ ಬುದ್ಧನ ಬೋಧನೆಗಳು ಈಗ ತುಂಬ ಪ್ರಸ್ತುತವೆನಿಸುತ್ತವೆ’-ಗುರು ಪೂರ್ಣಿಮೆಯಂದು ಪ್ರಧಾನಿ ಮೋದಿ ಮಾತು
ದುಃಖ, ನೋವುಗಳ ವಿರುದ್ಧ ನಾವು ಗೆಲ್ಲಬಹುದು ಎಂಬುದನ್ನು ಪ್ರತಿಪಾದಿಸಿದರು ಮತ್ತು ಅದಕ್ಕಿರುವ ಮಾರ್ಗಗಳನ್ನೂ ಭಗವಾನ್ ಬುದ್ಧ ಬೋಧಿಸಿದರು-ಪ್ರಧಾನಿ ಮೋದಿ
ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi)ಯವರು ಇಂದು ದೇಶದ ಜನರಿಗೆ ಗುರುಪೂರ್ಣಿಮೆ (Guru Purnima)ಯ ಶುಭಕೋರಿದರು. ಇಂದು ಆಷಾಢ ಪೌರ್ಣಿಮಾ ಧಮ್ಮ ಚಕ್ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ಬುದ್ಧನ ಮೌಲ್ಯಗಳನ್ನು ಎತ್ತಿಹಿಡಿದರು. ಇಡೀ ಜಗತ್ತು ಸಾಂಕ್ರಾಮಿಕದಿಂದ ತತ್ತರಿಸುತ್ತಿರುವ ಈ ಹೊತ್ತಲ್ಲಿ ಬುದ್ಧನ ಬೋಧನೆಗಳು, ಮೌಲ್ಯಗಳು ತುಂಬ ಪ್ರಸ್ತುತ ಎನ್ನಿಸುತ್ತಿವೆ ಎಂದರು.
ಮನುಕುಲ ಇಂದು ಕೊವಿಡ್ 19 ಸಾಂಕ್ರಾಮಿಕದಂಥ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈಗ ಭಗವಾನ್ ಬುದ್ಧನ ಬೋಧನೆಗಳು ಪ್ರಸ್ತುತವೆನಿಸುತ್ತವೆ. ಬುದ್ಧ ತೋರಿಸಿದ ಹಾದಿಯಲ್ಲೇ ಸಾಗಿ ಇಂದು ಭಾರತ ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದೆ. ಕಷ್ಟದ ಸಮಯದಲ್ಲಿ ಅನೇಕ ರಾಷ್ಟ್ರಗಳು ಒಗ್ಗಟ್ಟಾಗಿನಿಂತು ಪರಸ್ಪರ ಸಹಕಾರ ತೋರಿಸಿಕೊಂಡಿವೆ ಎಂದು ಮೋದಿ ಹೇಳಿದರು.
ಹಿಂದು ಧರ್ಮದಲ್ಲಿ ಆಷಾಢ ಮಾಸದ ಈ ಪೌರ್ಣಿಮೆ (ಹುಣ್ಣಿಮೆ)ಪವಿತ್ರವಾದದ್ದಾಗಿದೆ. ಭಗವಾನ್ ಬುದ್ಧ ದುಃಖದ ಬಗ್ಗೆ, ಆ ದುಃಖಕ್ಕೆ ಕಾರಣವೇನು ಎಂಬುದರ ಬಗ್ಗೆ ಸಾರಾನಾಥ್ದಲ್ಲಿ ನಮಗೆ ತಿಳಿಸಿಕೊಟ್ಟರು. ದುಃಖ, ನೋವುಗಳ ವಿರುದ್ಧ ನಾವು ಗೆಲ್ಲಬಹುದು ಎಂಬುದನ್ನು ಪ್ರತಿಪಾದಿಸಿದರು ಮತ್ತು ಅದಕ್ಕಿರುವ ಮಾರ್ಗಗಳನ್ನೂ ಬೋಧಿಸಿದರು ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಪ್ರತಿವರ್ಷವೂ ಗುರು ಪೂರ್ಣಿಮೆಯಂದು ದೇಶದ ಜನರಿಗೆ ಶುಭ ಹಾರೈಸುವ ಜತೆ ಭಗವಾನ್ ಬುದ್ಧನ ಸಂದೇಶ, ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಅಂತೆಯೇ ನಿನ್ನೆಯೇ ಟ್ವೀಟ್ ಮಾಡಿದ್ದ ಪ್ರಧಾನಿ, ನಾಳೆ (ಜು.24) ಆಷಾಢ ಪೌರ್ಣಿಮೆ ಧಮ್ಮ ಚಕ್ರ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8.30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದೇನೆ ಎಂದಿದ್ದರು. ಅಂತೆಯೇ ಇಂದು ಬೆಳಗ್ಗೆ ಜನರಿಗೆ ಗುರುಪೂರ್ಣಿಮೆಯ ಶುಭ ಕೋರಿದ್ದಾರೆ.
ಈ ಗುರುಪೂರ್ಣಿಮೆಯನ್ನು ಆಷಾಢ ಮಾಸ, ಶುಕ್ಲಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನದಂದು ಅನೇಕರು ತಮಗೆ ಬೋಧಿಸಿದ ಶಿಕ್ಷಕರಿಗೂ ಗೌರವ ಸಲ್ಲಿಸುವುದುಂಟು. ಹಾಗೇ ಗುರುಪೂರ್ಣಿಮೆಯನ್ನು ವ್ಯಾಸ ಮಹರ್ಷಿಗಳ ಜನ್ಮದಿನವೆಂದು ಪರಿಗಣಿಸಿ, ವ್ಯಾಸ ಪೂರ್ಣಿಮಾ ಎಂದೂ ಕೂಡ ಆಚರಿಸುವ ಪರಿಪಾಠ ಇದೆ. ಇನ್ನು ಬೌದ್ಧ ಧರ್ಮೀಯರಿಗಂತೂ ಇಂದಿನ ದಿನ ತೀರ ವಿಶೇಷ. ಭಗವಾನ್ ಗೌತಮ ಬುದ್ಧನ ಬೋಧನೆಗಳನ್ನು ನೆನಪಿಸಿಕೊಂಡು, ಅವರಿಗೆ ಗೌರವ ಸಮರ್ಪಿಸಲಾಗುತ್ತದೆ. ಬುದ್ಧ ಸಾರಾನಾಥದಲ್ಲಿ ನೀಡಿದ ಮೊದಲ ಧರ್ಮೋಪದೇಶದ ಸ್ಮರಣಾರ್ಥ ಈ ದಿನ ಆಚರಿಸುತ್ತಾರೆ.
ಇದನ್ನೂ ಓದಿ: ‘ದುಡ್ಡಿಗಾಗಿ ನಾನು ಮದುವೆ ಆಗಿಲ್ಲ, ಅಂಥವರ ದಾರಿ ಬೇರೆ’; ಚೈತ್ರಾ ಕೋಟೂರ್ ತೆರೆದಿಟ್ಟ ಸತ್ಯ
Lord Buddhas teachings become more relevant in these covid 19 situation says PM Modi
Published On - 10:14 am, Sat, 24 July 21