
ಕೊಯಮತ್ತೂರು, ಫೆಬ್ರವರಿ 12: ಈ ವರ್ಷ ಫೆಬ್ರವರಿ 15ರಂದು ಮಹಾ ಶಿವರಾತ್ರಿ (Maha Shivaratri 2026) ನಡೆಯಲಿದೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆಯುವ ಈ ಬಾರಿಯ ಉತ್ಸವದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಸದೀಯ ವ್ಯವಹಾರಗಳ ಸಚಿವ ಎಲ್. ಮುರುಗನ್ ಮತ್ತು ಇತರ ಗಣ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಮಹಾ ಶಿವರಾತ್ರಿ ಉತ್ಸವವು ಫೆ. 15ರಂದು ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಈ ವೇಳೆ ಧ್ಯಾನ, ಮಂತ್ರ ಪಠಣ, ಯೋಗೇಶ್ವರಲಿಂಗ ಮಹಾ ಅಭಿಷೇಕ ಮತ್ತು ಅತ್ಯುತ್ತಮ ಕಲಾವಿದರಿಂದ ಸಂಗೀತ ಪ್ರದರ್ಶನಗಳು ನಡೆಯಲಿವೆ.
ಈ ಮಹಾ ಶಿವರಾತ್ರಿ ಉತ್ಸವದ ಕುರಿತು ಇಂದು ಕೊಯಮತ್ತೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ದಕ್ಷಿಣ ಕೈಲಾಯ ಭಕ್ತಿ ಪೆರವೈ ಸ್ವಯಂಸೇವಕ ರವೀಂದ್ರನ್ ಮತ್ತು ಸ್ವಯಂಸೇವಕ ಸರವಣನ್ ಭಾಗವಹಿಸಿ ಮಾತನಾಡಿದರು. “32ನೇ ಮಹಾ ಶಿವರಾತ್ರಿ ಹಬ್ಬವನ್ನು ಫೆ. 15ರಂದು ಇಶಾ ಯೋಗ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಕ್ಷಾಂತರ ಜನರು ಸಹ ಇದರಲ್ಲಿ ಭಾಗವಹಿಸಲಿದ್ದಾರೆ” ಎಂದು ಅವರು ಹೇಳಿದರು.
ಇದನ್ನೂ ಓದಿ: Maha Shivratri: ಇಶಾ ಫೌಂಡೇಶನ್‌ನಲ್ಲಿ ಸದ್ಗುರು ಜೊತೆ ಶಿವರಾತ್ರಿಯಲ್ಲಿ ಅಮಿತ್ ಶಾ ಭಾಗಿ
“ಇದಲ್ಲದೆ, ಈ ವರ್ಷ ಮೊದಲ ಬಾರಿಗೆ, ಸದ್ಗುರು ಆದಿಯೋಗಿ ಈ ಹಿಂದೆ ಸ್ಥಾಪಿಸಲಾದ ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕದ ಆಧ್ಯಾತ್ಮಿಕ ಕಾರ್ಯವನ್ನು ಮಾಡಲಿದ್ದಾರೆ” ಎಂದು ಅವರು ತಿಳಿಸಿದರು.
ಇಶಾದಲ್ಲಿ ನಡೆಯುವ ಮಹಾ ಶಿವರಾತ್ರಿ ಉತ್ಸವವನ್ನು ತಮಿಳುನಾಡಿನ 60 ಸ್ಥಳಗಳು ಮತ್ತು ಕೇರಳದ 29 ದೇವಾಲಯಗಳು ಸೇರಿದಂತೆ ಭಾರತದಾದ್ಯಂತ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಹಾಗೇ, ಇಶಾ ಫೌಂಡೇಷನ್ನ ಯೂಟ್ಯೂಬ್ ಚಾನೆಲ್ನಲ್ಲಿ ಕೂಡ ಇದರ ನೇರ ಪ್ರಸಾರ ಇರಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ