
ನವದೆಹಲಿ, ಅಕ್ಟೋಬರ್ 31: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಆಯೋಜಿಸಿರುವ ಅಣಕು ಮಹಾಭಿಯೋಗ ಕಾರ್ಯಕ್ರಮವು ಇಂದು ನವದೆಹಲಿಯಲ್ಲಿ ನಡೆಯಲಿದೆ. ಲೋಕಸಭೆಯ ಮಾಜಿ ಸಭಾಪತಿ ಮೀರಾ ಕುಮಾರ್ ಅವರು ಈ ಸಾಂಕೇತಿಕ ಮಹಾಭಿಯೋಗ ನಡಾವಳಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜ್ಞಾನೇಶ್ ಕುಮಾರ್ ವಿರುದ್ಧದ ಪ್ರಸ್ತಾವನೆಯನ್ನು ಮಂಡಿಸಲಿದ್ದಾರೆ.
‘ಇಂಡಿಯಾ’ ಒಕ್ಕೂಟದ ಪ್ರಮುಖ ಘಟಕ ಪಕ್ಷಗಳು, ಎಡಪಕ್ಷಗಳು ಸೇರಿದಂತೆ ಒಟ್ಟು 21 ವಿರೋಧ ಪಕ್ಷಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಂದು ಪಕ್ಷದ ಒಬ್ಬ ನಾಯಕರಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಮತ ಕಳ್ಳತನ ಮತ್ತು ಎಸ್ಐಆರ್ನಲ್ಲಿ ನಡೆದಿರುವ ಅಕ್ರಮಗಳ ಕುರಿತು ನಾಯಕರು ಮಾತನಾಡಿದ ಬಳಿಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮಾರೋಪ ಭಾಷಣ ಮಾಡಲಿದ್ದಾರೆ. ನಂತರ ಸಾಂಕೇತಿಕ ಮಹಾಭಿಯೋಗ ಪ್ರಸ್ತಾವನೆಯನ್ನು ಅಂಗೀಕರಿಸಲಾಗುತ್ತದೆ.
ಇದನ್ನೂ ಓದಿ: ‘ಅಣಕು ಪಾರ್ಲಿಮೆಂಟ್’ ರದ್ದು; ಜ್ಞಾನೇಶ್ ಕುಮಾರ್ ವಿರುದ್ಧ ಜನ ಮಹಾಭಿಯೋಗಕ್ಕೆ ಇಂಡಿಯಾ ಒಕ್ಕೂಟ ಮಾಸ್ಟರ್ ಪ್ಲಾನ್
ಸಾರ್ವಜನಿಕ ಮೈದಾನಗಳಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ವಿಪಕ್ಷ ನಾಯಕರು ಕಿಡಿಕಾರಿದ್ದು, ಖರ್ಗೆ ಅವರ ನಿವಾಸದಲ್ಲೇ ಈ ನಡಾವಳಿ ನಡೆಸಲಾಗುತ್ತಿದೆ. ಇಂದಿನ ಮಹಾಭಿಯೋಗದ ಬಳಿಕ, ನವೆಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ದೇಶಾದ್ಯಂತದ ಜನರನ್ನು ಒಗೂಡಿಸಿ ಬೃಹತ್ ರ್ಯಾಲಿ ನಡೆಸಲು ಪ್ರತಿಪಕ್ಷಗಳು ತೀರ್ಮಾನಿಸಿವೆ.
ಸಂಸತ್ತಿನಲ್ಲಿ ನಡೆಯುವ ಮಹಾಭಿಯೋಗ ಪ್ರಕ್ರಿಯೆಯ ಮಾದರಿಯಲ್ಲೇ ಇದು ನಡೆಯಲಿದೆ. ಪ್ರತಿಯೊಂದು ಪಕ್ಷದಿಂದ ಒಬ್ಬರು ನಾಯಕರು ಮಾತ್ರ ಮಾತನಾಡಲಿದ್ದು, ‘ಮತ ಕಳವು’ ಹಾಗೂ ಪ್ರಜಾಪ್ರಭುತ್ವದ ಮೇಲಿನ ದಾಳಿಯ ಕುರಿತು ಚರ್ಚಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ