ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಎಲ್ಪಿಜಿ ಸಿಲಿಂಡರ್ ಬೆಲೆ 2 ಸಾವಿರಕ್ಕೇರುವುದು ಗ್ಯಾರಂಟಿ: ಮಮತಾ ಬ್ಯಾನರ್ಜಿ
ಮುಂಬರುವ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್‌ಗೆ 2,000 ರೂ.ಗೆ ಏರಬಹುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ . ಮಮತಾ ಬ್ಯಾನರ್ಜಿ ಅವರು ಗುರುವಾರ ಬಂಗಾಳದ ಜಾರ್‌ಗ್ರಾಮ್ ಜಿಲ್ಲೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬೆಂಕಿಗಾಗಿ ಮತ್ತೆ ಕಟ್ಟಿಗೆ ಸಂಗ್ರಹಿಸಿ ಎಂದಿದ್ದಾರೆ.

ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಒಂದೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಪಿಜಿ ಸಿಲಿಂಡರ್ ಬೆಲೆ 2 ಸಾವಿರ ರೂ.ಗೆ ಏರುವುದು ಗ್ಯಾರಂಟಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರು ಜಾರ್‌ಗ್ರಾಮ್ ಜಿಲ್ಲೆಯ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದರು. ಹೀಗಿರುವಾಗ ಬೆಂಕಿ ಹಚ್ಚಲು ಕಟ್ಟಿಗೆ ಸಂಗ್ರಹಿಸುವ ಹಳೆಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು.
ಮಮತಾ ಬ್ಯಾನರ್ಜಿ ಹೇಳಿದ್ದೇನು? ವಸತಿ ಯೋಜನೆಯಡಿ ಮನೆಗಳ ನಿರ್ಮಾಣವನ್ನು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಮಮತಾ ಬ್ಯಾನರ್ಜಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಮತ್ತು ಅದು ಸಂಭವಿಸದಿದ್ದರೆ, ಮೇ ತಿಂಗಳಿನಿಂದ ತಮ್ಮ ಸರ್ಕಾರವು ನಿರ್ಮಾಣವನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.
ಷಹಜಹಾನ್ ಶೇಖ್ ಬಗ್ಗೆ ಏನು ಹೇಳಿದರು? ಸಂದೇಶ್ಖಾಲಿ ಪ್ರದೇಶದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಮತ್ತು ಭೂಕಬಳಿಕೆ ಆರೋಪದ ಪ್ರಕರಣದಲ್ಲಿ ಆರೋಪಿಯಾಗಿರುವ ಪಕ್ಷದ ನಾಯಕ ಶಹಜಹಾನ್ ಶೇಖ್ ಬಂಧನದ ಬಗ್ಗೆ ಮಮತಾ ಬ್ಯಾನರ್ಜಿ ಏನನ್ನೂ ಹೇಳಲಿಲ್ಲ. ಶೇಖ್ ಅವರನ್ನು ಇಂದು ಬಂಧಿಸಲಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಹಜಹಾನ್ ಶೇಖ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿದೆ. 55 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಶೇಖ್ ಅವರನ್ನು ಗುರುವಾರ ಮುಂಜಾನೆ ಬಂಧಿಸಲಾಗಿತ್ತು.
ಶೇಖ್ ತಲೆಮರೆಸಿಕೊಂಡಿದ್ದಾಗ, ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ಖಾಲಿಯಲ್ಲಿ ಮಹಿಳೆಯರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಶೇಖ್ ಬಂಧನಕ್ಕೆ ಮಹಿಳೆಯರು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಸಂದೇಶಖಾಲಿ ವಿಧಾನಸಭಾ ಕ್ಷೇತ್ರದ ಪಕ್ಷದ ಸಂಚಾಲಕರಾದ ಶೇಖ್ ಅವರು ಉತ್ತರ 24 ಪರಗಣ ಜಿಲ್ಲಾ ಕೌನ್ಸಿಲ್‌ನ ಸದಸ್ಯರೂ ಆಗಿದ್ದಾರೆ.
ಮತ್ತಷ್ಟು ಓದಿ: ತೃಣಮೂಲ ಸಂಸ್ಥಾಪನಾ ದಿನ; ಜನರ ಹಕ್ಕುಗಳನ್ನು ಕಾಪಾಡುವ ಹೋರಾಟ ಮುಂದುವರಿಸುವೆ: ಮಮತಾ ಬ್ಯಾನರ್ಜಿ
ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರ ಬಂಧನವು ಅಂತ್ಯದ ಆರಂಭ ಎಂದು ಗುರುವಾರ ಹೇಳಿದ್ದಾರೆ. ಇದು ಅಂತ್ಯದ ಆರಂಭ. ನಾವು ಬಂಗಾಳದಲ್ಲಿ ಹಿಂಸಾಚಾರದ ಚಕ್ರವನ್ನು ಕೊನೆಗೊಳಿಸಬೇಕಾಗಿದೆ. ಬಂಗಾಳದ ಕೆಲವು ಭಾಗಗಳಲ್ಲಿ ಗೂಂಡಾಗಳು ಆಳ್ವಿಕೆ ನಡೆಸುತ್ತಿದ್ದಾರೆ. ಇದು ಕೊನೆಗೊಳ್ಳಬೇಕು ಮತ್ತು ದರೋಡೆಕೋರರನ್ನು ಕಂಬಿ ಹಿಂದೆ ಹಾಕಬೇಕು ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:52 am, Fri, 1 March 24




