
ನವದೆಹಲಿ, ಸೆಪ್ಟೆಂಬರ್ 27: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ 138ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿ ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ವಿರುದ್ಧ ಭಾರತದ ನಿಲುವು, ಜನಗಣತಿ, ಪರಿಸರ ಸಂರಕ್ಷಣೆ, ಡ್ರಗ್ಸ್ ಮುಕ್ತ ಭಾರತ ಮತ್ತು ಸಮಾಜ ಸೇವೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು.
2016ರ ಸೆಪ್ಟೆಂಬರ್ 28-29ರಂದು ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗೆ 10 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಆ ಕಾರ್ಯಾಚರಣೆಯನ್ನು ಸ್ಮರಿಸಿದರು. ಉರಿ ದಾಳಿಯ ಬಳಿಕ ಭಾರತೀಯ ಸೇನೆ ನಿಯಂತ್ರಣ ರೇಖೆ (LoC) ದಾಟಿ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದ ರೀತಿಯನ್ನು ಇಡೀ ಜಗತ್ತು ಗಮನಿಸಿತ್ತು ಎಂದು ಅವರು ಹೇಳಿದರು. ಇದು ಭಾರತದ ಭಯೋತ್ಪಾದನೆ ವಿರೋಧಿ ನೀತಿಯ ಹೊಸ ಸಂದೇಶವಾಗಿತ್ತು ಎಂದು ತಿಳಿಸಿದರು. ಪ್ರಧಾನಿ ತಮ್ಮ ಭಾಷಣದಲ್ಲಿ 2016ರ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಾಕೋಟ್ ವಾಯುದಾಳಿ ಹಾಗೂ ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿ, ಭಯೋತ್ಪಾದನೆಗೆ ಭಾರತ ಕಠಿಣ ಉತ್ತರ ನೀಡುವ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.
ಭಾರತ ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮುಂಬೈ 26/11 ದಾಳಿ ಸೇರಿದಂತೆ ಹಲವು ಭಯೋತ್ಪಾದಕ ಘಟನೆಗಳನ್ನು ನೆನಪಿಸಿಕೊಂಡ ಅವರು, ನಿರಪರಾಧಿಗಳ ಜೀವ ಬಲಿಯಾದ ಘಟನೆಗಳು ದೇಶಕ್ಕೆ ದೊಡ್ಡ ನೋವು ತಂದಿದ್ದವು ಎಂದರು. ದೇಶದ ಮೇಲೆ ದಾಳಿ ನಡೆಸುವ ಯಾವುದೇ ಶಕ್ತಿಗೆ ತಕ್ಕ ಉತ್ತರ ನೀಡಲಾಗುತ್ತದೆ ಎಂಬ ಸಂದೇಶವನ್ನು ಭಾರತ ಸ್ಪಷ್ಟಪಡಿಸಿದೆ ಎಂದು ಹೇಳಿದರು.
ಮತ್ತಷ್ಟು ಓದಿ: ಪ್ರಧಾನಿ ಮೋದಿ, ಉಡುಪಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ: ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಲಾಂಛನ ಅನಾವರಣ
ಮುಂದಿನ ಜನಗಣತಿ ಬಗ್ಗೆ ಮಾತನಾಡಿದ ಪ್ರಧಾನಿ, ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು. ಜನರು ತಮ್ಮ ಕುಟುಂಬದ ಮಾಹಿತಿಯನ್ನು ಸರಿಯಾಗಿ ನೀಡಬೇಕು. ಮೊಬೈಲ್ ಮೂಲಕವೂ ಮಾಹಿತಿ ದಾಖಲಿಸುವ ವ್ಯವಸ್ಥೆ ಲಭ್ಯವಿದ್ದು, 13 ಭಾರತೀಯ ಭಾಷೆಗಳಲ್ಲಿ ಈ ಸೇವೆ ದೊರೆಯಲಿದೆ ಎಂದು ತಿಳಿಸಿದರು. ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನಗಣತಿ ಸಿದ್ಧತೆಗಳು ನಡೆಯುತ್ತಿವೆ ಎಂದರು.
ವಿಶ್ವ ಹಿಂದೂ ಪರಿಷತ್ನ ಮಾಜಿ ನಾಯಕ ಅಶೋಕ್ ಸಿಂಘಾಲ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅವರಿಗೆ ಪ್ರಧಾನಿ ಗೌರವ ಸಲ್ಲಿಸಿದರು. ಸಮಾಜ ಮತ್ತು ರಾಷ್ಟ್ರಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದ ಪ್ರಧಾನಿ, ಅವರ ಜೀವನ ಯುವಜನತೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ವಿಡಿಯೋ
ಗುಜರಾತ್ನ ಮೊಧೇರಾ ಸೂರ್ಯ ದೇವಾಲಯವನ್ನು ಉಲ್ಲೇಖಿಸಿದ ಪ್ರಧಾನಿ, ಇದು ಇತಿಹಾಸ ಮತ್ತು ವಿಜ್ಞಾನದ ಸಂಗಮವಾಗಿದೆ ಎಂದು ಹೇಳಿದರು. ಮೊಧೇರಾ ಇಂದು ದೇಶದ ಮೊದಲ ಸೌರ ಗ್ರಾಮವಾಗಿ ಗುರುತಿಸಿಕೊಂಡಿದ್ದು, ಸೂರ್ಯನ ಆರಾಧನೆಯಿಂದ ಸೌರಶಕ್ತಿಯ ಬಳಕೆಯವರೆಗೆ ಭಾರತದ ಪಯಣವನ್ನು ಪ್ರತಿಬಿಂಬಿಸುತ್ತದೆ ಎಂದರು.
ಸ್ವಚ್ಛ ಭಾರತ ಅಭಿಯಾನದಲ್ಲಿ ಜನರ ಭಾಗವಹಿಸುವಿಕೆಯನ್ನು ಪ್ರಧಾನಿ ಮೆಚ್ಚಿದರು. ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನರು ಸ್ವಯಂಪ್ರೇರಿತವಾಗಿ ಸ್ವಚ್ಛತಾ ಅಭಿಯಾನ ನಡೆಸುತ್ತಿರುವುದನ್ನು ಶ್ಲಾಘಿಸಿದರು. ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂದರು. ವನ್ಯಜೀವಿ ಸಂರಕ್ಷಣೆ ಕುರಿತು ಮಾತನಾಡಿದ ಅವರು, ಅಸ್ಸಾಂನಲ್ಲಿ ಅಪರೂಪದ ಪಿಗ್ಮಿ ಹಾಗ್ ಸಂರಕ್ಷಣಾ ಯೋಜನೆ ಹಾಗೂ ಆನೆಗಳ ವಾಸಸ್ಥಳ ರಕ್ಷಣೆಯ ಪ್ರಯತ್ನಗಳನ್ನು ಉಲ್ಲೇಖಿಸಿದರು.
ವಿಡಿಯೋ
ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಯುವಜನತೆ ಪ್ರಮುಖ ಪಾತ್ರವಹಿಸಬೇಕು ಎಂದು ಪ್ರಧಾನಿ ಕರೆ ನೀಡಿದರು. ‘ನಶಾಮುಕ್ತ ಯುವ ಅಭಿಯಾನ’ ಅಡಿಯಲ್ಲಿ 100 ವಾರಗಳ ಕಾಲ ದೇಶಾದ್ಯಂತ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಎನ್ಎಸ್ಎಸ್ ಘಟಕಗಳು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಎಂದರು. ಪ್ರತಿಯೊಬ್ಬ ಯುವಕ-ಯುವತಿಯೂ ಮಾದಕ ವ್ಯಸನದಿಂದ ದೂರವಿರುವ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:30 am, Sun, 27 September 26