ಜಾರ್ಖಂಡ್‌ನಲ್ಲಿ ಅಕ್ರಮ ಗಣಿಗಾರಿಕೆ ವೇಳೆ ಕುಸಿದ ಕಲ್ಲಿದ್ದಲು ಗಣಿ; ಮೂರು ಗಣಿಗಳಲ್ಲಿ ಹಲವಾರು ಜನ ಸಿಲುಕಿರುವ ಶಂಕೆ
ಪೊಲೀಸ್ ಕ್ರಮಕ್ಕೆ ಹೆದರಿ, ಅಕ್ರಮ ಗಣಿಗಾರರ ಕುಟುಂಬಗಳು ಯಾವುದೇ ವ್ಯಕ್ತಿ ಕಾಣೆಯಾಗಿದ್ದಲ್ಲಿ ಅಧಿಕಾರಿಗಳಿಗೆ ವರದಿ ಮಾಡಲು ಇನ್ನೂ ಮುಂದಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಅಥವಾ ಪೊಲೀಸರು ಸ್ಥಳಕ್ಕಾಗಮಿಸುವ ಮುನ್ನ ಗ್ರಾಮಸ್ಥರು ಅವಶೇಷಗಳಿಂದ ಹೊರ ಬರಬಹುದಾದ ಕೆಲವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಧನ್‌ಬಾದ್: ಜಾರ್ಖಂಡ್‌ನ (Jharkhand) ಧನ್‌ಬಾದ್ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯ ಸಮಯದಲ್ಲಿ ಮೂರು ಕಲ್ಲಿದ್ದಲು ಗಣಿಗಳು(coal mines) ಕುಸಿದಿದ್ದು ಅನೇಕ ಜನರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈ ಕಲ್ಲಿದ್ದಲು ಗಣಿಗಳು ಕಾರ್ಯ ನಿರ್ವಹಿಸದೆ ಕೈಬಿಟ್ಟ ಸ್ಥಿತಿಯಲ್ಲಿದ್ದವುಗಳಾಗಿವೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ನಿರ್ಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ (ಇಸಿಎಲ್) ಕಪಸಾರ ಹೊರಗುತ್ತಿಗೆ ಯೋಜನೆಯಲ್ಲಿ ಮೊದಲ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು. ಎರಡನೇ ಘಟನೆ ಸೋಮವಾರ ರಾತ್ರಿ ನಿರ್ಸಾದ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್‌ನ (ಬಿಸಿಸಿಎಲ್) ಚಾಚ್ ವಿಕ್ಟೋರಿಯಾದಲ್ಲಿ ನಡೆದಿದ್ದರೆ, ಮೂರನೇ ಘಟನೆ ಮಂಗಳವಾರ ಬೆಳಿಗ್ಗೆ ಪಂಚೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಿನಾಥಪುರದ ಇಸಿಎಲ್‌ನ ಓಪನ್ ಕಾಸ್ಟ್ ಗಣಿಗಳಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮೂರು ಗಣಿಗಳಲ್ಲಿ ಭಾರೀ ಯಂತ್ರೋಪಕರಣಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆಯ ಸಮಯದಲ್ಲಿ ಈ ಘಟನೆಗಳು ಸಂಭವಿಸಿವೆ ಮತ್ತು ಕಲ್ಲಿದ್ದಲು ಕಂಪನಿಗಳು ಮಾತ್ರ ಒಳಗೆ ಸಿಲುಕಿರುವ ಜನರ ಸಂಖ್ಯೆಯನ್ನು ನಿರ್ದಿಷ್ಟಪಡಿಸಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ (ಧನ್‌ಬಾದ್-ಗ್ರಾಮೀಣ) ರೀಷ್ಮಾ ರಮೇಶನ್ ಹೇಳಿದ್ದಾರೆ. ಗಾಯಗೊಂಡವರ ಸಂಖ್ಯೆಯನ್ನು ನಾನು ಹೇಳಲಾರೆ. ನಾವು ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ವರದಿಗಳನ್ನು ಪಡೆದ ನಂತರ ಹೇಳುತ್ತೇವೆ. ನಮ್ಮ ತಂಡಗಳು ಅಲ್ಲಿಗೆ ಧಾವಿಸಿವೆ ಎಂದು ಅವರು ಹೇಳಿದರು.
A portion of ECL coal mine collapsed under Nirsa police station of Dhanbad, Jharkhand. Many feared trapped. The rescue operation is on. The number of casulaties can be ascertained once the rescue operation is over: Dhanbad SSP
— ANI (@ANI) February 1, 2022
ಪೊಲೀಸ್ ಕ್ರಮಕ್ಕೆ ಹೆದರಿ, ಅಕ್ರಮ ಗಣಿಗಾರರ ಕುಟುಂಬಗಳು ಯಾವುದೇ ವ್ಯಕ್ತಿ ಕಾಣೆಯಾಗಿದ್ದಲ್ಲಿ ಅಧಿಕಾರಿಗಳಿಗೆ ವರದಿ ಮಾಡಲು ಇನ್ನೂ ಮುಂದಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಅಥವಾ ಪೊಲೀಸರು ಸ್ಥಳಕ್ಕಾಗಮಿಸುವ ಮುನ್ನ ಗ್ರಾಮಸ್ಥರು ಅವಶೇಷಗಳಿಂದ ಹೊರ ಬರಬಹುದಾದ ಕೆಲವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಬಿಟ್ಟು ಹೋಗಿರುವ ಗಣಿಗಳಲ್ಲಿ ಘಟನೆ ಸಂಭವಿಸಿದ್ದು, ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ ಎಂದು ಇಸಿಎಲ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಮ್ಮ ಕೆಲಸ ಮಾಡುವ ಗಣಿಗಳಲ್ಲಿ, ಕುಸಿತ ಸಂಭವಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಕೈಬಿಟ್ಟ ಗಣಿಗಳಲ್ಲಿನ ಅಕ್ರಮ ಚಟುವಟಿಕೆಗಳಿಂದಾಗಿರಬಹುದು ಆದರೆ ನಮ್ಮ ಕೆಲಸ ಮಾಡುವ ಗಣಿಗಳಲ್ಲಿ ಅಲ್ಲ ಎಂದು ಅವರು ಹೇಳಿದರು.
ಸಿಕ್ಕಿಬಿದ್ದಿರುವ ಗ್ರಾಮಸ್ಥರ ಸಂಖ್ಯೆಯ ಬಗ್ಗೆ ನಾವು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಇಸಿಎಲ್‌ನ ಗೋಪಿನಾಥಪುರ ಗಣಿಯಲ್ಲಿ ಮೂವರು ಸಿಕ್ಕಿಬಿದ್ದಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಸಿಎಲ್‌ನ ಕಪಾಸರಾ ಕೋಲಿಯರಿಯಲ್ಲಿ, ಮೂವರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಗಣಿಗಳ ಪ್ರವೇಶ ದ್ವಾರದಲ್ಲಿ ಹಲವು ಚಪ್ಪಲಿಗಳು ಪತ್ತೆಯಾಗಿದ್ದು, ಹಲವರು ಸಿಕ್ಕಿಬಿದ್ದಿದ್ದಾರೆಂದು ಸೂಚಿಸಿದೆ. ಆದರೆ ಬಿಸಿಸಿಎಲ್ ನಂತರ ವಿವರಗಳನ್ನು ಹಂಚಿಕೊಳ್ಳುವುದಾಗಿ ಹೇಳಿದೆ. ಬಿಸಿಸಿಎಲ್‌ನ ಚಾಚ್ ವಿಕ್ಟೋರಿಯಾ ಪ್ರದೇಶದಲ್ಲಿ, ಅಕ್ರಮ ಗಣಿಗಾರಿಕೆಯ ಸಂದರ್ಭದಲ್ಲಿ ಛಾವಣಿ ಕುಸಿದು ಮೂವರು ವ್ಯಕ್ತಿಗಳು ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.