ಕುಟುಂಬಸ್ಥರ ಭೇಟಿಯಿಲ್ಲ, ಪಶ್ಚಾತ್ತಾಪವೂ ಇಲ್ಲ; ಗಂಡನನ್ನು ಕೊಂದು ಜೈಲಿನಲ್ಲಿ 1 ತಿಂಗಳು ಕಳೆದ ಸೋನಂ ರಘುವಂಶಿ
ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಮೇಘಾಲಯದ ಕೊಲೆ ಪ್ರಕರಣದ ಆರೋಪಿ ಸೋನಂ ರಘುವಂಶಿ ಜೈಲಿನಲ್ಲಿ 1 ತಿಂಗಳು ಕಳೆದಿದ್ದಾರೆ. ಹನಿಮೂನ್ ವೇಳೆ ಗಂಡನನ್ನು ಕೊಂದಿದ್ದ ಸೋನಂ ಈ ಕೊಲೆ ಪ್ರಕರಣದ ಬಗ್ಗೆ ಮೌನ ವಹಿಸಿದ್ದಾರೆ. ಜೈಲಿನ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಂಡಿರುವ ಸೋನಂ ಅಲ್ಲಿ ಟಿವಿ ನೋಡುತ್ತಾ, ಏಕಾಂಗಿತನವನ್ನು ಎಂಜಾಯ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ನವದೆಹಲಿ, ಜುಲೈ 22: ಮೇಘಾಲಯದಲ್ಲಿ (Meghalaya) ತಮ್ಮ ಹನಿಮೂನ್ ಸಮಯದಲ್ಲಿ ಪತಿ ರಾಜಾ ರಘುವಂಶಿಯನ್ನು ಕೊಲೆ ಮಾಡಿದ ಸೋನಮ್ ರಘುವಂಶಿ (Sonam Raghuvanshi) ಶಿಲ್ಲಾಂಗ್ ಜೈಲಿನಲ್ಲಿ 1 ತಿಂಗಳು ಕಳೆದಿದ್ದಾರೆ. ಆದರೆ ಇಲ್ಲಿಯವರೆಗೆ, ಅವರು ತಮ್ಮ ಅಪರಾಧಕ್ಕೆ ವಿಷಾದ ವ್ಯಕ್ತಪಡಿಸಿಲ್ಲ ಅಥವಾ ಅವರ ಕುಟುಂಬದ ಸದಸ್ಯರು ಯಾರೂ ಅವರನ್ನು ಭೇಟಿ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಸೋನಮ್ ಜೈಲಿನಲ್ಲಿರುವ ಪರಿಸರಕ್ಕೆ ಹೊಂದಿಕೊಂಡಿದ್ದಾರೆ. ಇತರ ಮಹಿಳಾ ಕೈದಿಗಳೊಂದಿಗೆ ಆಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ.
ಮೇಘಾಲಯದಲ್ಲಿ ಹನಿಮೂನ್ ವೇಳೆ ಪತಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಮಹಿಳೆ ಸೋನಮ್ ರಘುವಂಶಿ, ಶಿಲ್ಲಾಂಗ್ ಜೈಲಿನಲ್ಲಿ ಒಂದು ತಿಂಗಳು ಕಳೆದಿದ್ದಾರೆ. ಇಂದೋರ್ ಉದ್ಯಮಿ ರಾಜಾ ರಘುವಂಶಿ ಹತ್ಯೆಯನ್ನು ಯೋಜಿಸಿ ಕಾರ್ಯಗತಗೊಳಿಸಿದ್ದಕ್ಕಾಗಿ ಆಕೆಯ ‘ಪ್ರೇಮಿ’ ರಾಜ್ ಕುಶ್ವಾಹ ಮತ್ತು ಇತರ ಮೂವರನ್ನು ಕೂಡ ಬಂಧಿಸಲಾಗಿದೆ .
ಆದರೆ, ಸೋನಮ್ ಇಲ್ಲಿಯವರೆಗೆ ತನ್ನ ಕೃತ್ಯಗಳಿಗೆ ಯಾವುದೇ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿಲ್ಲ. ಜೈಲಿನಲ್ಲಿದ್ದಾಗಿನಿಂದ ಆಕೆಯ ಕುಟುಂಬದ ಸದಸ್ಯರು ಯಾರೂ ಆಕೆಯನ್ನು ನೋಡಲು ಬಂದಿಲ್ಲ ಎಂದು ಜೈಲು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮೇಘಾಲಯದ ಹನಿಮೂನ್ನಲ್ಲಿ ಕೊಲೆ; ನಾನೇ ಗಂಡ ರಾಜ ರಘುವಂಶಿಯನ್ನು ಕೊಂದಿದ್ದೆಂದು ಒಪ್ಪಿಕೊಂಡ ಸೋನಂ
24 ವರ್ಷದ ಯುವತಿ ಸೋನಮ್ ಜೈಲು ಜೀವನಕ್ಕೆ ಹೊಂದಿಕೊಂಡಿದ್ದಾರೆ. ಈ ಕೊಲೆ ಪ್ರಕರಣದ ಬಗ್ಗೆ ಸೋನಂ ಮೌನ ವಹಿಸಿದ್ದಾರೆ. ಕೈದಿಗಳು ಅಥವಾ ಜೈಲು ಅಧಿಕಾರಿಗಳೊಂದಿಗೆ ತನ್ನ ಅಪರಾಧ ಅಥವಾ ವೈಯಕ್ತಿಕ ಜೀವನದ ಬಗ್ಗೆ ಚರ್ಚಿಸುವುದನ್ನು ದೂರವಿಟ್ಟಿದ್ದಾರೆ ಎನ್ನಲಾಗಿದೆ.
“ಆಕೆ ಜೈಲು ವಾರ್ಡನ್ ಕಚೇರಿಯ ಬಳಿ ವಾಸಿಸುತ್ತಿದ್ದಾರೆ ಮತ್ತು ಇಬ್ಬರು ವಿಚಾರಣಾಧೀನ ಮಹಿಳಾ ಕೈದಿಗಳೊಂದಿಗೆ ಆಕೆ ಸೆಲ್ ಅನ್ನು ಹಂಚಿಕೊಂಡಿದ್ದಾರೆ” ಎಂದು ಎನ್‌ಡಿಟಿವಿ ಮೂಲವನ್ನು ಉಲ್ಲೇಖಿಸಿ ತಿಳಿಸಿದೆ. ಸೋನಮ್‌ಗೆ ಇನ್ನೂ ಯಾವುದೇ ಕೆಲಸ ನಿಯೋಜಿಸಲಾಗಿಲ್ಲ. ಶೀಘ್ರದಲ್ಲೇ ಪುನರ್ವಸತಿ ಕಾರ್ಯಕ್ರಮದ ಭಾಗವಾಗಿ ಹೊಲಿಗೆ ಮತ್ತು ಇತರ ಕೌಶಲ್ಯಗಳನ್ನು ಕಲಿಸಲಾಗುವುದು. ಜೈಲಿನೊಳಗೆ ಆಕೆಗೆ ಟಿವಿ ನೋಡಲು ಕೂಡ ಅವಕಾಶವಿದೆ.
ಇದನ್ನೂ ಓದಿ: ಮೇಘಾಲಯದಲ್ಲಿ ಕೊಲೆಗೂ ಮೊದಲಿನ ರಾಜ ರಘುವಂಶಿಯ ಕೊನೆಯ ವಿಡಿಯೋ ಬಯಲು
ಮೇಘಾಲಯ ಹನಿಮೂನ್ ಕೊಲೆ ಪ್ರಕರಣ:
ಇಂದೋರ್ ನಿವಾಸಿ ಸೋನಮ್ ರಘುವಂಶಿ ಮೇ 11ರಂದು ಉದ್ಯಮಿ ರಾಜ ರಘುವಂಶಿ ಅವರನ್ನು ವಿವಾಹವಾದರು. ಈ ದಂಪತಿ ಮೇ 20ರಂದು ತಮ್ಮ ಹನಿಮೂನ್‌ಗಾಗಿ ಗುವಾಹಟಿ ಮತ್ತು ಶಿಲ್ಲಾಂಗ್‌ಗೆ ಪ್ರಯಾಣ ಬೆಳೆಸಿದರು. ಆದರೆ ಮೇ 23ರಂದು ನಾಪತ್ತೆಯಾಗಿದ್ದರು. ಬಳಿಕ ಸೊಹ್ರಾದಲ್ಲಿನ ಆಳವಾದ ಕಣಿವೆಯಲ್ಲಿ ರಾಜಾ ಅವರ ಮೃತದೇಹ ಪತ್ತೆಯಾಗಿತ್ತು. ನಂತರ ಸೋನಮ್ ಉತ್ತರ ಪ್ರದೇಶದ ಘಾಜಿಪುರದಲ್ಲಿ ಶರಣಾಗಿದ್ದರು. ಆಕೆ ಮತ್ತು ಇತರ ನಾಲ್ವರು ಆರೋಪಿಗಳಾದ ಸೋನಂಳ ಪ್ರೇಮಿ ಎಂದು ಹೇಳಲಾಗುವ ರಾಜ್ ಕುಶ್ವಾಹ ಮತ್ತು ಸಹಚರರಾದ ಆಕಾಶ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ಅವರನ್ನು ಕೂಡ ಬಂಧಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ