ಲಖಿಂಪುರ ಖೇರಿ ಪ್ರಕರಣ: ಸಚಿವರು ರೈತರಿಗೆ ಬೆದರಿಕೆ ಹಾಕಬಾರದಿತ್ತು, ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಲಖಿಂಪುರ ಖೇರಿ ಪ್ರಕರಣ: ಸಚಿವರು ರೈತರಿಗೆ ಬೆದರಿಕೆ ಹಾಕಬಾರದಿತ್ತು, ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಲಖಿಂಪುರ ಖೇರಿ ಪ್ರಕರಣ

Lakhimpur Kheri case ರಾಜಕೀಯ ವ್ಯಕ್ತಿಗಳು ಸಭ್ಯ ಭಾಷೆಯಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡಬೇಕು. ಅವರು ಸ್ಥಾನಮಾನ ಮತ್ತು ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಕಾನೂನು ರೂಪಿಸುವವರನ್ನು ಕಾನೂನು ಉಲ್ಲಂಘಿಸುವವರಂತೆ ನೋಡಲಾಗುವುದಿಲ್ಲ" ಎಂದು ಹೈಕೋರ್ಟ್ ಹೇಳಿದೆ. 

TV9kannada Web Team

| Edited By: Rashmi Kallakatta

May 09, 2022 | 8:12 PM

ದೆಹಲಿ: ಕಳೆದ ವರ್ಷ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ(Lakhimpur Kheri )ಪ್ರತಿಭಟನಾ ನಿರತ ರೈತರನ್ನು ಹತ್ಯೆಗೈದ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ (Ajay Mishra Teni) ಅವರ ಪುತ್ರ ಆಶಿಶ್ ಮಿಶ್ರಾ (Ashish Mishra) ಘಟನೆ ನಡೆಯುವ ಕೆಲವು ದಿನಗಳ ಮೊದಲು ರೈತರಿಗೆ ಬೆದರಿಕೆಯೊಡ್ಡುವ ಹೇಳಿಕೆ ನೀಡಬಾರದಿತ್ತು ಎಂದು ಹೇಳಿದ ಹೈಕೋರ್ಟ್ ಪ್ರಕರಣದ ಇತರ ನಾಲ್ವರು ಆರೋಪಿಗಳಿಗೆ ಸೋಮವಾರ ಜಾಮೀನು ತಿರಸ್ಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ರೈತರಿಗೆ ಬೆದರಿಕೆ ಹಾಕದಿದ್ದರೆ ಹತ್ಯೆಗಳು ನಡೆಯುತ್ತಿರಲಿಲ್ಲ ಎಂದು ಉತ್ತರ ಪ್ರದೇಶ ಪೊಲೀಸ್ ವಿಶೇಷ ತನಿಖಾ ತಂಡದ ಆರೋಪ ಪಟ್ಟಿಯನ್ನು ಅಲಹಾಬಾದ್ ಹೈಕೋರ್ಟ್ ಉಲ್ಲೇಖಿಸಿದೆ. ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತರ ಮೇಲೆ ಆಶಿಶ್ ಮಿಶ್ರಾ ವಾಹನ ಹರಿಸಿ ಹತ್ಯೆ ಮಾಡಿದ ಆರೋಪವಿದೆ. ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಗೆ ಒಂದು ಗಂಟೆಗೂ ಮುನ್ನ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಭಾಗವಹಿಸಿದ್ದ ಕುಸ್ತಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಆಶಿಶ್ ಮಿಶ್ರಾ ಅವರು ಅಪ್ಪ ಅಜಯ್ ಮಿಶ್ರಾ ಅವರ ಬೆಂಗಾವಲು ಪಡೆಯಲ್ಲಿದ್ದರು. ಈ ಬೆಂಗಾವಲು ಪಡೆ ಸಾಗುತ್ತಿದ್ದಂತೆ ರೈತರು ಕಪ್ಪು ಬಾವುಟ ಪ್ರದರ್ಶಿಸಿದ್ದರು. ಲಖಿಂಪುರ ಘಟನೆಗೆ ಕೆಲವು ದಿನಗಳ ಮೊದಲು, ಅಜಯ್ ಮಿಶ್ರಾ ಅವರು ಆ ಪ್ರದೇಶದಲ್ಲಿ ಮಾಡಿದ ಭಾಷಣದಲ್ಲಿ, ರೈತರು ತಮ್ಮ ಪ್ರತಿಭಟನೆ ಕೈಬಿಡದಿದ್ದರೆ “ಎರಡು ನಿಮಿಷಗಳಲ್ಲಿ ಸರಿಪಡಿಸುವುದಾಗಿ” ಬೆದರಿಕೆ ಹಾಕಿದ್ದರು.

“ರಾಜಕೀಯ ವ್ಯಕ್ತಿಗಳು ಸಭ್ಯ ಭಾಷೆಯಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡಬೇಕು. ಅವರು ಸ್ಥಾನಮಾನ ಮತ್ತು ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಕಾನೂನು ರೂಪಿಸುವವರನ್ನು ಕಾನೂನು ಉಲ್ಲಂಘಿಸುವವರಂತೆ ನೋಡಲಾಗುವುದಿಲ್ಲ” ಎಂದು ಹೈಕೋರ್ಟ್ ಹೇಳಿದೆ.  ರೈತರ ಪ್ರತಿಭಟನೆ ನಡುವೆಯೇ ನಿರ್ಬಂಧಗಳ ಹೊರತಾಗಿಯೂ ಆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಲು ಆಯ್ಕೆ ಮಾಡಿದ ಉಪಮುಖ್ಯಮಂತ್ರಿಯವರ ಬಗ್ಗೆಯೂ ನ್ಯಾಯಾಲಯ ಕಟುವಾಗಿ ಪ್ರತಿಕ್ರಿಯಿಸಿತು.

“ಉಪಮುಖ್ಯಮಂತ್ರಿ ಅವರಿಗೆ ಈ ಪ್ರದೇಶದಲ್ಲಿ ನಿಷೇಧಾಜ್ಞೆಗಳ ಬಗ್ಗೆ ತಿಳಿದಿರುವುದಿಲ್ಲ ಎಂದು ನಾವು ನಂಬಲು ಸಾಧ್ಯವಿಲ್ಲ. ಆದರೂ ಅವರು ಆ ಪ್ರದೇಶದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಒಪ್ಪಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರಾ ಇತ್ತೀಚೆಗೆ ಜಾಮೀನು ರದ್ದುಗೊಳಿಸಿದ ನಂತರ ಜೈಲಿಗೆ ಮರಳಿದ್ದರು. ಫೆಬ್ರವರಿ 10 ರಂದು ಅವರಿಗೆ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್ ಇಂದು ಆರೋಪಿಗಳು ಪ್ರಭಾವಿಗಳಾಗಿದ್ದು, ಸಾಕ್ಷ್ಯವನ್ನು ನಾಶಪಡಿಸಬಹುದು ಎಂದು ಹೇಳಿದೆ. “ಪ್ರಮುಖ ಆರೋಪಿಗಳು ಮತ್ತು ಸಹ ಆರೋಪಿಗಳು ಅತ್ಯಂತ ಪ್ರಭಾವಿ ಕುಟುಂಬಗಳಿಂದ ಬಂದವರು. ಅವರು ಸಾಕ್ಷ್ಯವನ್ನು ಹಾಳುಮಾಡಬಹುದು” ಎಂದು ಹೈಕೋರ್ಟ್ ಹೇಳಿದೆ.

ಸೋಮವಾರ ಹೊಸದಾಗಿ ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ನ್ಯಾಯಮೂರ್ತಿ ಕೃಷ್ಣ ಪಹಲ್, ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದು ಮೇ 25 ರೊಳಗೆ ಅರ್ಜಿಯ ಬಗ್ಗೆ ತನ್ನ ಕಡೆಯನ್ನು ಹಾಜರುಪಡಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತು.

ಇದನ್ನೂ ಓದಿ

Follow us on

Most Read Stories

Click on your DTH Provider to Add TV9 Kannada