ಮಧ್ಯಪ್ರದೇಶ: ರಕ್ತ ನಿಧಿಯಿಂದ ರಕ್ತ ಪಡೆದಿದ್ದ ನಾಲ್ವರು ಮಕ್ಕಳಿಗೆ ಎಚ್‌ಐವಿ ಸೋಂಕು
ಮಧ್ಯಪ್ರದೇಶದ ಸತ್ನಾ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಬಳಿಕ ಥಲಸ್ಸೇಮಿಯಾ ಮಕ್ಕಳಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿದೆ. ನಾಲ್ವರು ಮಕ್ಕಳು ಸೋಂಕಿಗೆ ಒಳಗಾಗಿದ್ದು, ರಕ್ತ ನಿಧಿ ವೈದ್ಯರು ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಆಸ್ಪತ್ರೆಯ ಕಾರ್ಯವಿಧಾನ ಹಾಗೂ ರಕ್ತ ನಿಧಿಯ ಗುಣಮಟ್ಟದ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಇದು ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಪ್ರಕರಣವಾಗಿದ್ದು, ಸಾರ್ವಜನಿಕ ಆರೋಗ್ಯದ ಬಗ್ಗೆ ಕಳವಳ ಮೂಡಿಸಿದೆ

ಭೋಪಾಲ್, ಡಿಸೆಂಬರ್ 19: ರಕ್ತ ನಿಧಿಯಿಂದ ರಕ್ತ ಪಡೆದಿದ್ದ ನಾಲ್ವರು ಮಕ್ಕಳಿಗೆ ಎಚ್‌ಐವಿ(HIV) ಸೋಂಕು ತಗುಲಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಿಂದ ರಕ್ತ ವರ್ಗಾವಣೆ ಬಳಿಕ ಮಕ್ಕಳಲ್ಲಿ ಸೋಂಕು ದೃಢ ಪಟ್ಟಿದ್ದು, ರಕ್ತ ನಿಧಿಯ ಉಸ್ತುವಾರಿ ವೈದ್ಯರು ಹಾಗೂ ಪ್ರಯೋಗಾಲಯದ ಇಬ್ಬರು ಸಿಬ್ಬಂದಿ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಡಿ.16ರಂದು ಮಕ್ಕಳಲ್ಲಿ ಹೆಚ್ಐವಿ ಸೋಂಕು ಇರೋದು ಬೆಳಕಿಗೆ ಬಂದಿತ್ತು.
ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ಸೋಂಕು ದೃಢಪಟ್ಟಿತ್ತು.ಮಕ್ಕಳು ಥಲಸ್ಸೇಮಿಯಾ ಎಂಬ ಅನುವಂಶಿಕ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದರ, ರಕ್ತ ಪಡೆದ ಬಳಿಕ ಮಕ್ಕಳಲ್ಲಿ ಹೆಚ್ಐವಿ ಸೋಂಕು ದೃಢಪಟ್ಟಿತ್ತು. ವೈದ್ಯರನ್ನು ಅಮಾನತುಗೊಳಿಸಿ ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಸೋಂಕಿನ ಮೂಲವನ್ನು ಇನ್ನೂ ಗುರುತಿಸಲಾಗಿಲ್ಲ, ವಿಚಾರಣೆಯು ಆಸ್ಪತ್ರೆಯ ಕಾರ್ಯವೈಖರಿ ಮತ್ತು ರಕ್ತ ನಿಧಿಯ ಕಾರ್ಯವಿಧಾನಗಳ ಮೇಲೆ ಕೇಂದ್ರೀಕರಿಸಿದೆ. ಥಲಸ್ಸೇಮಿಯಾ ಇರುವ ಮಕ್ಕಳಿಗೆ ಪದೇ ಪದೇ ರಕ್ತ ವರ್ಗಾವಣೆ ಅಗತ್ಯವಿರುತ್ತದೆ ಎಂದು ಸಿಎಂಎಚ್ಒ ಡಾ. ಮನೋಜ್ ಶುಕ್ಲಾ ಹೇಳಿದ್ದಾರೆ.
ಮತ್ತಷ್ಟು ಓದಿ: HIV AIDS: ಎಚ್‌ಐವಿ ಏಡ್ಸ್ ಕುರಿತು ಈಗಲೂ ತಿಳಿದುಕೊಳ್ಳಬೇಕಾದ ಅಂಶಗಳಿವು
ಬ್ಯಾಂಕ್ ನೀಡುವ ರಕ್ತವನ್ನು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರೀಕ್ಷಿಸಲಾಗುತ್ತದೆ ಮತ್ತು ಯಾವುದೇ ಸೋಂಕಿತ ಮಾದರಿಗಳಿದ್ದರೆ ಅವುಗಳನ್ನು ನಾಶಪಡಿಸಲಾಗುತ್ತದೆ ಎಂದು ಡಾ. ಶುಕ್ಲಾ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆಗಳ ಜಂಟಿ ತನಿಖಾ ತಂಡವು ಆಸ್ಪತ್ರೆಗೆ ತಲುಪಿ, ಎಚ್‌ಐವಿ ಸೋಂಕಿತ ರಕ್ತವನ್ನು ಯಾವ ಸಂದರ್ಭಗಳಲ್ಲಿ ನೀಡಲಾಯಿತು ಎಂಬುದನ್ನು ಪರಿಶೀಲಿಸಿದೆ.
ಡಿಸೆಂಬರ್ 16 ರಂದು ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಚಿಸಲ್ಪಟ್ಟ ಆರು ಸದಸ್ಯರ ಸಮಿತಿಯು ತನಿಖೆ ನಡೆಸುತ್ತಿದೆ. ಜಿಲ್ಲಾ ಆಸ್ಪತ್ರೆಯ ಮಾಜಿ ಸಿವಿಲ್ ಸರ್ಜನ್ ಡಾ. ಮನೋಜ್ ಶುಕ್ಲಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಲಿಖಿತ ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಲಾಯಿತು. ಅವರ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲದಿದ್ದರೆ ಕಠಿಣ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಹೊರಗೆ ಅಕ್ರಮ ರಕ್ತ ಮಾರಾಟದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಗುರುವಾರ ಮೂವರನ್ನು ಬಂಧಿಸಲಾಗಿದೆ. ಆಸ್ಪತ್ರೆ ಆವರಣದ ಬಳಿ ರಕ್ತ ಮಾರಾಟ ಮಾಡಲಾಗುತ್ತಿದೆ ಎಂದು ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




