ಆಹಾರ ಸಂಗ್ರಹಣೆ ಜಾಗದಲ್ಲೇ ಮೂತ್ರ ವಿಸರ್ಜನೆ, ಫ್ರಿಡ್ಜ್‌ನಲ್ಲಿ ರಕ್ತದ ಕಲೆ: ಮುಂಬೈನ ಪ್ರಸಿದ್ಧ ಒಲಿಂಪಿಯಾ ಕಾಫಿ ಹೌಸ್ ಲೈಸೆನ್ಸ್ ರದ್ದು

ಮುಂಬೈನ ಪ್ರತಿಷ್ಠಿತ ಒಲಿಂಪಿಯಾ ಕಾಫಿ ಹೌಸ್ ಲೈಸೆನ್ಸ್ ಅನ್ನು ಎಫ್‌ಡಿಎ ಅಮಾನತುಗೊಳಿಸಿದೆ. ಗ್ರಾಹಕರ ದೂರಿನ ಮೇರೆಗೆ ನಡೆದ ತಪಾಸಣೆಯಲ್ಲಿ ಆಹಾರ ಸಂಗ್ರಹ ಜಾಗದಲ್ಲೇ ಮೂತ್ರ ವಿಸರ್ಜನೆ, ಫ್ರಿಡ್ಜ್‌ನಲ್ಲಿ ರಕ್ತದ ಕಲೆ, ಜಿರಳೆ, ನೊಣಗಳು, ಅಶುದ್ಧ ನೀರು ಮತ್ತು ತರಬೇತಿರಹಿತ ಸಿಬ್ಬಂದಿ ಸಹಿತ ಹಲವು ಗಂಭೀರ ನೈರ್ಮಲ್ಯ ಲೋಪಗಳು ಪತ್ತೆಯಾಗಿವೆ. "ಸುರಕ್ಷಿತ ಆಹಾರ ಸುರಕ್ಷಿತ ಮಹಾರಾಷ್ಟ್ರ" ಅಭಿಯಾನದ ಭಾಗವಾಗಿ ಈ ಕ್ರಮ ಕೈಗೊಂಡಿದ್ದು, ಗ್ರಾಹಕರು ಇಂತಹ ಲೋಪಗಳನ್ನು ವರದಿ ಮಾಡಲು ಎಫ್‌ಡಿಎ ಮನವಿ ಮಾಡಿದೆ.

ಆಹಾರ ಸಂಗ್ರಹಣೆ ಜಾಗದಲ್ಲೇ ಮೂತ್ರ ವಿಸರ್ಜನೆ, ಫ್ರಿಡ್ಜ್‌ನಲ್ಲಿ ರಕ್ತದ ಕಲೆ: ಮುಂಬೈನ ಪ್ರಸಿದ್ಧ ಒಲಿಂಪಿಯಾ ಕಾಫಿ ಹೌಸ್ ಲೈಸೆನ್ಸ್ ರದ್ದು
ರೆಸ್ಟೋರೆಂಟ್
Image Credit source: News 9

Updated on: Sep 18, 2026 | 9:02 AM

ಮುಂಬೈ, ಸೆಪ್ಟೆಂಬರ್ 18: ಮುಂಬೈನ ಪ್ರತಿಷ್ಠಿತ ಕೊಲಾಬಾ ಪ್ರದೇಶದಲ್ಲಿರುವ ಶತಮಾನದ ಇತಿಹಾಸವಿರುವ ‘ಒಲಿಂಪಿಯಾ ಕಾಫಿ ಹೌಸ್’ ರೆಸ್ಟೋರೆಂಟ್‌ನಲ್ಲಿ ಗಂಭೀರ ನೈರ್ಮಲ್ಯ ಲೋಪ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಅದರ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಗ್ರಾಹಕರ ದೂರಿನ ಮೇರೆಗೆ ಎಫ್‌ಡಿಎ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ ವೇಳೆ, ಆಹಾರ ಸಂಗ್ರಹಿಸುವ ಜಾಗದಲ್ಲೇ ಮೂತ್ರ ವಿಸರ್ಜನೆ ಮಾಡಿರುವುದು ಹಾಗೂ ಫ್ರಿಡ್ಜ್‌ನಲ್ಲಿ ಹಸಿ ಮಾಂಸದ ರಕ್ತದ ಕಲೆಗಳು ಪತ್ತೆಯಾಗಿರುವ ಆಘಾತಕಾರಿ ಸತ್ಯ ಬಯಲಾಗಿದೆ.

ತಪಾಸಣೆ ವೇಳೆ ಆಹಾರ ಪದಾರ್ಥಗಳನ್ನು ನೇರವಾಗಿ ಕೊಳಕು ನೆಲದ ಮೇಲೆ ಇಟ್ಟು ನಿರ್ವಹಿಸಲಾಗುತ್ತಿತ್ತು. ಅಡುಗೆ ಮತ್ತು ಪಾತ್ರೆ ತೊಳೆಯುವ ಜಾಗ ಕಳಪೆಯಾಗಿದ್ದು, ಆವರಣವಿಡೀ ಜಿರಳೆಗಳು ಮತ್ತು ನೊಣಗಳು ಮುತ್ತಿಕೊಂಡಿದ್ದವು. ಹಾನಿಗೊಳಗಾದ ಮರದ ಕಟಿಂಗ್ ಬೋರ್ಡ್‌ಗಳನ್ನು ಬಳಸಲಾಗುತ್ತಿತ್ತು ಹಾಗೂ ಅಶುದ್ಧ ನೀರಿನಿಂದ ಅಡುಗೆ ಮಾಡಲಾಗುತ್ತಿತ್ತು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಪ್ರತ್ಯೇಕಿಸದೆ ಒಂದೇ ಕಡೆ ಇಟ್ಟಿದ್ದರಿಂದ ಆಹಾರ ಕಲುಷಿತಗೊಳ್ಳುವ ಅಪಾಯವಿತ್ತು.

ಸಿಬ್ಬಂದಿಗೆ ತರಬೇತಿ ಇಲ್ಲ: ರೆಸ್ಟೋರೆಂಟ್‌ನ 35 ಆಹಾರ ನಿರ್ವಾಹಕರಲ್ಲಿ 34ಮಂದಿಗೆ ಯಾವುದೇ ಕಡ್ಡಾಯ ಆಹಾರ ಸುರಕ್ಷತಾ ತರಬೇತಿ ಇರಲಿಲ್ಲ. ನೀರಿನ ಗುಣಮಟ್ಟ ಪರೀಕ್ಷಾ ವರದಿ ಮತ್ತು ನೈರ್ಮಲ್ಯ ದಾಖಲೆಗಳನ್ನು ಒದಗಿಸಲು ಆಡಳಿತ ಮಂಡಳಿ ವಿಫಲವಾಗಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಸೆಕ್ಷನ್ 32(3) ಅಡಿಯಲ್ಲಿ ಲೈಸೆನ್ಸ್ ಅಮಾನತು ಮಾಡಲಾಗಿದ್ದು, ಎಲ್ಲಾ ಲೋಪಗಳನ್ನು ಸರಿಪಡಿಸಿ ಮುಂದಿನ ತಪಾಸಣೆಯಲ್ಲಿ ತೇರ್ಗಡೆಯಾಗುವವರೆಗೂ ಹೋಟೆಲ್‌ನಲ್ಲಿ ಆಹಾರ ಖರೀದಿ, ತಯಾರಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮತ್ತಷ್ಟು ಓದಿ: ಸ್ಕೈ-ಡೈನಿಂಗ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಹೋಗಿ 120 ಅಡಿ ಎತ್ತರದಲ್ಲಿ ಸಿಲುಕಿದ ಮಂಗಳೂರಿನ ಪ್ರವಾಸಿಗರು

ಹೆಸರಾಂತ ಕೆಫೆಗಳ ಮೇಲೂ ಕಠಿಣ ಕ್ರಮ: ಕೇವಲ ಒಲಿಂಪಿಯಾ ಮಾತ್ರವಲ್ಲದೆ, ಮುಂಬೈ ಸೆಂಟ್ರಲ್‌ನ ನಾಯರ್ ಆಸ್ಪತ್ರೆಯ ಕ್ಯಾಂಟೀನ್, ಕೊಲಾಬಾದ ಖ್ಯಾತ ‘ಕೆಫೆ ಮಾಂಡೆಗರ್’, ಮಹಾರಾಷ್ಟ್ರ ಬಿರಿಯಾನಿ ಸೆಂಟರ್, ತ್ರಿಭುವನ್ ಡೈರಿ ಫಾರ್ಮ್ ಹಾಗೂ ಮಹಾವೀರ್ ಕ್ಯಾಶ್ಯೂ & ಫುಡ್ಸ್ ಸಂಸ್ಥೆಗಳ ಪರವಾನಗಿಗಳನ್ನೂ ಇತ್ತೀಚೆಗಷ್ಟೇ ಎಫ್‌ಡಿಎ ಅಮಾನತುಗೊಳಿಸಿದೆ.

ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ಅವರು ಎಫ್‌ಡಿಎ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ‘ಸುರಕ್ಷಿತ ಆಹಾರ ಸುರಕ್ಷಿತ ಮಹಾರಾಷ್ಟ್ರ’ ಅಭಿಯಾನ ಆರಂಭವಾಗಿದ್ದು, ಕಳೆದ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಬರೋಬ್ಬರಿ 1,800ಕ್ಕೂ ಹೆಚ್ಚು ಹೋಟೆಲ್‌ಗಳು, ಧಾಬಾಗಳು ಮತ್ತು ಕ್ಲಬ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಮುಂಬರುವ ಹಬ್ಬದ ದಿನಗಳಲ್ಲಿ ಕಲಬೆರಕೆ ಆಹಾರ, ಕಳಪೆ ಗುಣಮಟ್ಟದ ಸಿಹಿತಿಂಡಿ ಮತ್ತು ಅನೈರ್ಮಲ್ಯ ಆಹಾರ ಪದಾರ್ಥಗಳ ಮಾರಾಟವನ್ನು ತಡೆಯಲು ನಾಗರಿಕರು ಯಾವುದೇ ದೂರುಗಳಿದ್ದಲ್ಲಿ ಎಫ್‌ಡಿಎ ಟೋಲ್-ಫ್ರೀ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅಧಿಕಾರಿಗಳು ಕೋರಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us