ಅಯೋಧ್ಯೆ ವಿಮಾನ ನಿಲ್ದಾಣದ ಹೆಸರು ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ?
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್' ಎಂದು ಹೆಲಸರಿಡುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ದೆಹಲಿ ಡಿಸೆಂಬರ್ 28: ಅಯೋಧ್ಯೆ ರೈಲು ನಿಲ್ದಾಣದ (Ayodhya Railway station)ಹೆಸರನ್ನು ಅಯೋಧ್ಯಾ ಧಾಮ್ ಎಂದು ಬದಲಾಯಿಸಿದ ಒಂದು ದಿನದ ನಂತರ, ಉತ್ತರ ಪ್ರದೇಶ (Uttar Pradesh) ಸರ್ಕಾರವು ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್’ (Maharishi Valmiki International Airport Ayodhya Dham)ಎಂದು ಹೆಸರಿಡಲು ಚಿಂತಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ಗುರುವಾರ ವರದಿ ಮಾಡಿದೆ. ಹೊಸ ವಿಮಾನ ನಿಲ್ದಾಣವನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಜನವರಿ 22 ರಂದು ರಾಮಮಂದಿರ ಉದ್ಘಾಟನಾ ಸಮಾರಂಭದ ಮೊದಲು, ಪ್ರಧಾನಿ ಮೋದಿ ಹೊಸ ವಿಮಾನ ನಿಲ್ದಾಣ ಮತ್ತು ನವೀಕರಿಸಿದ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ನಾಗರಿಕ ಸೌಲಭ್ಯಗಳನ್ನು ನವೀಕರಿಸಲು ಮತ್ತು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 11,100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಯೋಜನೆಗಳನ್ನು ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಗೆ 4,600 ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಲಿದ್ದಾರೆ.
The name of the new airport in Ayodhya to be Maharishi Valmiki International Airport Ayodhya Dham: Sources pic.twitter.com/OAIo7SGoRX
— ANI (@ANI) December 28, 2023
ಮರ್ಯಾದಾ ಪುರುಷೋತ್ತಮ ಶ್ರೀ ರಾಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಸಲಾದ ಹೊಸ ವಿಮಾನ ನಿಲ್ದಾಣದ ಆರಂಭಿಕ ಹಂತವು ಜನವರಿ 6 ರಿಂದ ವಿಮಾನ ಹಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಪ್ರತಿಷ್ಠಾಪನೆಯ ನಂತರ ರಾಮ ಮಂದಿರಕ್ಕೆ ಪ್ರತಿದಿನದ ಸಂದರ್ಶಕರ ಒಳಹರಿವನ್ನು ಸರಿಹೊಂದಿಸಲು ಏರ್ಲೈನ್ಸ್ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳನ್ನು ಒದಗಿಸುತ್ತದೆ.
ಮೊದಲ ಹಂತದ ಅತ್ಯಾಧುನಿಕ ವಿಮಾನ ನಿಲ್ದಾಣವನ್ನು 1,450 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ಟರ್ಮಿನಲ್ ಕಟ್ಟಡವು 6,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತದೆ, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಜ್ಜುಗೊಂಡಿದೆ.
ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಯಾಗಲಿದೆ 600ಕೆಜಿ ತೂಕದ ಲೋಹದ ಗಂಟೆ
ಕಟ್ಟಡದ ಮುಂಭಾಗವು ರಾಮ ಮಂದಿರದ ವಾಸ್ತುಶಿಲ್ಪವನ್ನು ಚಿತ್ರಿಸುತ್ತದೆ. ಒಳಭಾಗದಲ್ಲಿ ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಗವಾನ್ ರಾಮನ ಜೀವನವನ್ನು ಚಿತ್ರಿಸುವ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ. ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಎಲ್ಇಡಿ ಲೈಟಿಂಗ್, ಮಳೆ-ನೀರು ಕೊಯ್ಲು, ಕಾರಂಜಿಗಳೊಂದಿಗೆ ಭೂದೃಶ್ಯ, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಸೌರ ವಿದ್ಯುತ್ ಸ್ಥಾವರ ಮತ್ತು ಇತರ ಹಲವು ಸೌಲಭ್ಯಗಳಂತಹ ವಿವಿಧ ಸಮರ್ಥನೀಯ ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸಲಿದ್ದು ಇದು ಪ್ರವಾಸೋದ್ಯಮ, ವ್ಯಾಪಾರ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳಲ್ಲಿ ಉತ್ತೇಜನಕ್ಕೆ ಕಾರಣವಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:47 pm, Thu, 28 December 23