ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ; ಎಫ್ಐಆರ್ ದಾಖಲಿಸಿದ ಸಿಬಿಐ, ಆಖಾಡ ಪರಿಷತ್ನಿಂದ ಸ್ವತಂತ್ರ ತನಿಖೆ
ದೇಶದ ಸಾಧು-ಸಂತರ ಅತ್ಯಂತ ದೊಡ್ಡ ಸಂಘಟನೆಯಾದ ಅಖಿಲ ಭಾರತೀಯ ಆಖಾಡ ಪರಿಷತ್ (ABAP) ಕೂಡ ಇದೀಗ ಮಹಾಂತ ನರೇಂದ್ರ ಗಿರಿ ಸಾವಿನ ತನಿಖೆಯನ್ನು ಸ್ವತಂತ್ರವಾಗಿ ನಡೆಸಲು ನಿರ್ಧರಿಸಿದೆ.
ಅಖಿಲ ಭಾರತೀಯ ಆಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಸಾವಿನ ಪ್ರಕರಣದ ತನಿಖೆ ಪ್ರಾರಂಭ ಮಾಡಿರುವ ಸಿಬಿಐ ಇದೀಗ ಎಫ್ಐಆರ್ ದಾಖಲಿಸಿದೆ. ಮಹಾಂತ ನರೇಂದ್ರ ಗಿರಿಯವ ಶವ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ಮಠದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನೇಣು ಬಿಗಿದುಕೊಂಡಿರುವ ಕಾರಣ ಉಸಿರುಗಟ್ಟಿ ಸ್ವಾಮೀಜಿಯವರು ಮೃತಪಟ್ಟಿದ್ದಾರೆಂದು ಶವಪರೀಕ್ಷೆಯ ಪ್ರಾಥಮಿಕ ವರದಿ ಹೇಳಿದೆ. ಈ ಕೇಸ್ಗೆ ಸಂಬಂಧಪಟ್ಟಂತೆ ಮಹಾಂತ ನರೇಂದ್ರ ಗಿರಿಯವರ ಇಬ್ಬರು ಶಿಷ್ಯಂದಿರ ಬಂಧನವೂ ಆಗಿದೆ. ಸದ್ಯ ಪ್ರಕರಣವನ್ನು ಉತ್ತರಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ.
72ವರ್ಷದ ಮಹಾಂತ ನರೇಂದ್ರ ಗಿರಿಯವರು ಸೋಮವಾರ ಮಧ್ಯಾಹ್ನ ಊಟ ಮಾಡಿ ತಮ್ಮ ಕೋಣೆಗೆ ಹೋಗಿದ್ದರು. ಆದರೆ ಸಂಜೆಯಾದರೂ ಹೊರಬಂದಿರಲಿಲ್ಲ. ಅವರ ಶಿಷ್ಯಂದಿರು ಬಾಗಿಲು ಬಡಿದರೂ ತೆರೆಯಲಿಲ್ಲ. ಕೋಣೆಯಿಂದ ಉತ್ತರವೂ ಬರಲಿಲ್ಲ. ಬಳಿಕ ನರೇಂದ್ರ ಗಿರಿಯವರ ಮೊಬೈಲ್ಗೆ ಕರೆ ಕೂಡ ಮಾಡಲಾಯಿತು. ಅದನ್ನೂ ಎತ್ತಲಿಲ್ಲ. ಆತಂಕಗೊಂಡ ಶಿಷ್ಯ ವೃಂದ ಕೋಣೆಯ ಬಾಗಿಲು ಒಡೆದಾಗ ಸ್ವಾಮಿಯವರ ಶವ ಹಗ್ಗಕ್ಕೆ ನೇತಾಡುತ್ತಿತ್ತು ಎಂದು ಯುಪಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಸ್ವಾಮೀಜಿ ಮೃತಪಟ್ಟ ಸ್ಥಳದಲ್ಲಿ ಸೂಸೈಡ್ ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿರುವ ವಿಷಯವನ್ನಾಧರಿಸಿ ಆನಂದ ಗಿರಿ ಮತ್ತು ಆಧ್ಯ ಪ್ರಸಾದ್ ತಿವಾರಿ ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ಮಹಾಂತ ನರೇಂದ್ರ ಗಿರಿಯವರ ಸಾವಿನ ಪ್ರಕರಣ ದಿನೇದಿನೆ ಸವಾಲಾಗುತ್ತ ಬರುತ್ತಿದ್ದಂತೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ಒತ್ತಡವೂ ಜಾಸ್ತಿಯಾಯಿತು. ಅದಕ್ಕೂ ಮೊದಲು 18 ಸಿಬ್ಬಂದಿಯನ್ನೊಳಗೊಂಡ ಎಸ್ಐಟಿ ತಂಡವನ್ನು ಉತ್ತರ ಪ್ರದೇಶ ಸರ್ಕಾರ ರಚನೆ ಮಾಡಿತ್ತು. ಪ್ರತಿಪಕ್ಷಗಳೂ ಕೂಡ ಈ ಕೇಸ್ ಸಿಬಿಐ ತನಿಖೆಯಾಗಬೇಕು ಎಂದು ಒತ್ತಡ ಹೇರತೊಡಗಿದ್ದವು. ಅದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದರು.
ಆಖಾಡ ಪರಿಷತ್ನಿಂದ ತನಿಖೆ ದೇಶದ ಸಾಧು-ಸಂತರ ಅತ್ಯಂತ ದೊಡ್ಡ ಸಂಘಟನೆಯಾದ ಅಖಿಲ ಭಾರತೀಯ ಆಖಾಡ ಪರಿಷತ್ (ABAP) ಕೂಡ ಇದೀಗ ಮಹಾಂತ ನರೇಂದ್ರ ಗಿರಿ ಸಾವಿನ ತನಿಖೆಯನ್ನು ಸ್ವತಂತ್ರವಾಗಿ ನಡೆಸಲು ನಿರ್ಧರಿಸಿದೆ. ದೇಶದ ಒಟ್ಟು 13 ಆಖಾಡಗಳ ಪ್ರಾತಿನಿಧಿಕ ಸಂಘಟನೆ ಈಗ 11 ಜನರ ಒಂದು ತಂಡವನ್ನು ರಚಿಸಿದೆ. ಆ ತಂಡ ಮಹಾಂತ ನರೇಂದ್ರ ಗಿರಿ ಸಾವಿನ ತನಿಖೆ ನಡೆಸಲಿದೆ. ಇನ್ನು ಮೇಲ್ನೋಟಕ್ಕೆ ನರೇಂದ್ರ ಗಿರಿಯವರದ್ದು ಆತ್ಮಹತ್ಯೆಯಂತೆ ಕಂಡುಬಂದರೂ ಕೊಲೆ ಎಂದು ಬಲವಾಗಿ ಅನ್ನಿಸುತ್ತಿದೆ ಎಂದು ಆಖಾಡ ಪರಿಷತ್ ಹೇಳಿದೆ. ಅದರಲ್ಲೂ ಶಿಷ್ಯ ಆನಂದ ಗಿರಿ ಮೇಲೆ ಸಿಕ್ಕಾಪಟೆ ಅನುಮಾನ ಇದೆ. ಮಹಾಂತ ನರೇಂದ್ರ ಗಿರಿಯವರ ಸೂಸೈಡ್ ನೋಟ್ ಕೂಡ ಆನಂದ್ ಗಿರಿಯನ್ನೇ ಗುರಿಯಾಗಿಸಿದೆ ಎಂದು ಹೇಳಿದೆ.
ಇದನ್ನೂ ಓದಿ: ನೀಳವಾದ ಕೂದಲು ಹೊಂದಿದ್ದ ಮಾಡೆಲ್ಗೆ ಕೆಟ್ಟ ಹೇರ್ ಸ್ಟೈಲ್ ಮಾಡಿ 2 ಕೋಟಿ ರೂ. ದಂಡ ಕಟ್ಟಿದ ಹೊಟೆಲ್; ನಿಜವಾಗ್ಯೂ ನಡೆದದ್ದೇನು?
Viral Video: ಹುಟ್ಟು ಹಬ್ಬದ ದಿನ ದೀಪ ಆರಿಸಲು ಹೋಗಿ ಕೂದಲಿಗೆ ಆವರಿಸಿದ ಬೆಂಕಿ; ಆಮೇಲೇನಾಯ್ತು? ವಿಡಿಯೊ ನೋಡಿ
(Narendra Giri death case Central Bureau of Investigationhas filed an FIR)