ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಯಾವುದೇ ವಿಷಯವನ್ನು ಸರ್ಕಾರ ಬಹಿರಂಗಪಡಿಸಬೇಕಿಲ್ಲ: ಸುಪ್ರೀಂಕೋರ್ಟ್
ಪೆಗಾಸಸ್ ವಿಚಾರದಲ್ಲಿ ಬಚ್ಚಿಡುವಂಥದ್ದು ಕೇಂದ್ರ ಸರ್ಕಾರಕ್ಕೆ ಏನೂ ಇಲ್ಲ. ಈ ವಿಷಯ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು ಎಂದು ಸಾಲಿಸಿಟರ್ ಜನರಲ್ ವಿವರಿಸಿದ್ದಾರೆ.
ದೆಹಲಿ: ದೇಶದ ಭದ್ರತೆಗೆ ಧಕ್ಕೆ ತರುವ ಯಾವುದೇ ವಿಷಯವನ್ನು ಸರ್ಕಾರ ಬಹಿರಂಗಪಡಿಸಬೇಕಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಮಂಗಳವಾರ ಸ್ಪಷ್ಟವಾಗಿ ತಿಳಿಸಿದೆ. ಪೆಗಾಸಸ್ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿದೆ. ಈ ವೇಳೆ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪೆಗಾಸಸ್ ವಿಚಾರದಲ್ಲಿ ಬಚ್ಚಿಡುವಂಥದ್ದು ಕೇಂದ್ರ ಸರ್ಕಾರಕ್ಕೆ ಏನೂ ಇಲ್ಲ. ಈ ವಿಷಯ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು ಎಂದು ವಿವರಿಸಿದರು.
ಗೂಢಚರ್ಚೆಗೆ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಕೆಯಾಗಿದೆ ಎಂಬ ಆರೋಪದ ಬಗ್ಗೆ ಸರ್ಕಾರ 10 ದಿನಗಳ ಒಳಗೆ ಪ್ರತಿಕ್ರಿಯಿಸಬೇಕು. ಸರ್ಕಾರದ ಪ್ರತಿಕ್ರಿಯೆ ಗಮನಿಸಿದ ನಂತರ ಈ ವಿಚಾರದ ಬಗ್ಗೆ ನಿರ್ಧರಿಸಲು ಸಮಿತಿ ರಚಿಸಬೇಕೇ? ಬೇಡವೇ ಎನ್ನುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ನ್ಯಾಯಪೀಠವು ಹೇಳಿತು. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಜೊತೆಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಸಹ ಈ ನ್ಯಾಯಪೀಠದಲ್ಲಿದ್ದಾರೆ.
ಈ ವಿಚಾರವನ್ನು ಸಾರ್ವಜನಿಕ ಚರ್ಚೆಯ ವಿಷಯವಾಗಿಸಲು ಸಾಧ್ಯವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್ಗೆ ತಿಳಿಸಿದರು. ಇಂಥ ಸಾಫ್ಟ್ವೇರ್ಗಳನ್ನು ಎಲ್ಲ ದೇಶಗಳೂ ಖರೀದಿಸುತ್ತವೆ. ತಮ್ಮ ವಿರುದ್ಧ ಈ ಸ್ಪೈವೇರ್ ಬಳಸಿಲ್ಲ ಎಂಬುದನ್ನು ಖಾಸಗಿಯಾಗಿ ಖಾತ್ರಿಪಡಿಸುವಂತೆ ಅರ್ಜಿದಾರರು ಕೋರುತ್ತಿದ್ದಾರೆ. ಒಂದು ವೇಳೆ ನಾವು ಹೀಗೆ ಸ್ಪಷ್ಟನೆ ನೀಡಿದರೆ ಭಯೋತ್ಪಾದಕರು ಎಚ್ಚೆತ್ತುಕೊಂಡು ಮುಜಾಗ್ರತೆ ವಹಿಸಬೇಕು. ಅದರಿಂದ ದೇಶದ ಭದ್ರತೆ ಧಕ್ಕೆಯಾಗುತ್ತದೆ. ನಾವು ನ್ಯಾಯಾಲಯದಿಂದ ಯಾವುದನ್ನೂ ಮುಚ್ಚಿಡುವುದಿಲ್ಲ ಎಂದು ಮೆಹ್ತಾ ತಮ್ಮ ವಾದವನ್ನು ವಿಸ್ತರಿಸಿದರು.
ಸರ್ಕಾರವು ತಜ್ಞರ ಸಮಿತಿಗೆ ಮಾಹಿತಿ ನೀಡಬಹುದು. ಇಂಥ ಸಮಿತಿಯು ತಟಸ್ಥರನ್ನು ಒಳಗೊಂಡಿರುತ್ತದೆ. ಸಂವಿಧಾನಾತ್ಮಕ ಅಧಿಕಾರ ಹೊಂದಿರುವ ನ್ಯಾಯಾಲಯವು ಇಂಥ ವಿಷಯಗಳನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಲು ಇಚ್ಛಿಸುತ್ತದೆಯೇ? ನಾವು ಸಮಿತಿಗೆ ನೀಡುವ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಿದರೆ ಅದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗುವುದಿಲ್ಲೇ? ಇಂಥ ಸೂಕ್ಷ್ಮ ವಿಷಯವನ್ನು ರೋಚಕಗೊಳಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಪೆಗಾಸಸ್ ಬಳಕೆಯ ಕುರಿತು ಅರ್ಜಿದಾರರು ಮಾಡಿರುವ ಆರೋಪಗಳನ್ನು ಕೇಂದ್ರ ಸರ್ಕಾರವು ಸೋಮವಾರ ಸಾರಾಸಗಟಾಗಿ ನಿರಾಕರಿಸಿತ್ತು. ಈ ವಿಚಾರದ ಬಗ್ಗೆ ಸಮಾಜದಲ್ಲಿ ತಪ್ಪು ಕಥನಗಳು ಹರಡಿವೆ. ಗೊಂದಲ ಪರಿಹರಿಸಲು ನಾವು ಈ ಕ್ಷೇತ್ರದಲ್ಲಿ ನೈಪುಣ್ಯ ಹೊಂದಿರುವ ತಜ್ಞರ ಸಮಿತಿ ರಚಿಸಲು ಸಿದ್ಧರಿದ್ದೇವೆ. ಸಮಿತಿಯು ಈ ವಿಚಾರವನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸಲಿದೆ ಎಂದು ಹೇಳಿದರು.
(National Security is most Important says Supreme Court Govt need not Disclose anything that compromises Security)
ಇದನ್ನೂ ಓದಿ: Pegasus row ಪೆಗಾಸಸ್ ಬೇಹುಗಾರಿಕೆ ಆರೋಪ ನಿರಾಕರಿಸಿದ ಕೇಂದ್ರ ಸರ್ಕಾರ, ತನಿಖೆಗೆ ತಜ್ಞರ ಸಮಿತಿ ನೇಮಿಸಲು ನಿರ್ಧಾರ
ಇದನ್ನೂ ಓದಿ: ಮಾಧ್ಯಮ ವರದಿಗಳು ಸರಿಯಾಗಿದ್ದರೆ ಆರೋಪಗಳು ಗಂಭೀರ: ಪೆಗಾಸಸ್ ಕುರಿತು ಸುಪ್ರೀಂಕೋರ್ಟ್ ಹೇಳಿದ 10 ಸಂಗತಿಗಳು