ಅಫ್ಘಾನಿಸ್ತಾನದ ಘಟನೆಗಳಿಗೆ ಮಾನವೀಯತೆಯಿಂದ ನಾವು ಪ್ರತಿಕ್ರಿಯಿಸಬೇಕಿದೆ: ಹೆಚ್ಡಿ ದೇವೇಗೌಡ ಟ್ವೀಟ್
HD Devegowda: ಅಫ್ಘಾನಿಸ್ತಾನದ ಘಟನೆಗಳಿಗೆ ಮಾನವೀಯ ಕಳಕಳಿಯಿಂದ ನಾವು ಪ್ರತಿಕ್ರಿಯಿಸಬೇಕಿದೆ ಎಂದು ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಅಫ್ಘಾನಿಸ್ತಾನದಿಂದ ಬರುತ್ತಿರುವ ವರದಿಗಳು ಆ ದೇಶದಲ್ಲಿ ಭಯ ಮತ್ತು ಅಭದ್ರತೆ ಎಷ್ಟು ಆವರಿಸಿದೆ ಎಂಬುದನ್ನು ತೋರಿಸುತ್ತಿದೆ. ಇದು ಭಾರತಕ್ಕೆ ಹಾಗೂ ಇತರ ಪ್ರದೇಶಗಳಿಗೂ ಕಷ್ಟದ ಸಮಯ ಆಗಿದೆ. ಈ ಘಟನೆಗಳಿಗೆ ಮಾನವೀಯ ಕಳಕಳಿಯಿಂದ ನಾವು ಪ್ರತಿಕ್ರಿಯಿಸಬೇಕಿದೆ ಎಂದು ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ವಶಪಡಿಸಿಕೊಂಡಿದೆ. ಇದರಿಂದ, ಅಫ್ಘಾನ್ ನಾಗರಿಕರು ಹಾಗೂ ಅಲ್ಲಿ ನೆಲೆಸಿರುವ ವಿದೇಶಿಗರು ಅಭದ್ರತೆ, ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ತಾಲಿಬಾನರ ದುರಾಡಳಿತದ ಭಯ ಜನರನ್ನು ಆವರಿಸಿಕೊಂಡಿದೆ. ಅಫ್ಘಾನ್ ಮಹಿಳೆಯರ ಬಗೆಗಂತೂ ಬಹಳಷ್ಟು ಪ್ರಶ್ನೆಗಳು ಎದುರಾಗಿದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಅಫ್ಘಾನ್ನಿಂದ ಪಾರಾಗಲು ಜನರು ವಿಮಾನ ನಿಲ್ದಾಣದಲ್ಲಿ ತೋರಿದ ವರ್ತನೆಯೇ ಸಾಕ್ಷಿ ಎಂಬಂತಾಗಿದೆ. ಆ ಘಟನಾವಳಿಗಳ ದೃಶ್ಯಗಳು ಸಹ ಹರಿದಾಡುತ್ತಿದ್ದು ನೋಡುಗರಲ್ಲೇ ನಡುಕ ಹುಟ್ಟಿಸುವಂತಿದೆ.
ಭಾರತಕ್ಕೆ ಅಫ್ಘಾನ್ ದೂರದ ದೇಶ ಏನಲ್ಲ. ಅಷ್ಟೇ ಅಲ್ಲದೆ, ಭಾರತ ಮತ್ತು ಕರ್ನಾಟಕದಲ್ಲಿ ಸಹಿತ ಹಲವಾರು ಸಂಖ್ಯೆಯಲ್ಲಿ ಅಫ್ಘಾನ್ ಪ್ರಜೆಗಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕೂಡ ಸಾವಿರಾರು ಸಂಖ್ಯೆಯ ಭಾರತದ ಪ್ರಜೆಗಳಿದ್ದರು. ಅವರನ್ನು ಭಾರತಕ್ಕೆ ಕರೆತರುವ ಕೆಲಸಗಳು ಆಗುತ್ತಿವೆ. ಈ ಮಧ್ಯೆ, ಘಟನೆಯ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Reports from #Afghanistan show how fear and uncertainty have gripped the country. It is a difficult moment for India and the entire region. We have to respond in a humane manner besides developing an independent policy of fostering friendship and peace in our neighbourhood.
— H D Devegowda (@H_D_Devegowda) August 17, 2021
ಇ-ವೀಸಾ ಘೋಷಣೆ ಹಾಗೂ ಸಹಾಯವಾಣಿ ತೆರೆಯಲಾಗಿದೆ ತಾಲಿಬಾನ್ ಆಡಳಿತದ ದೇಶದಲ್ಲಿ ವಾಸಿಸಲು ಇಚ್ಛಿಸಿದ ಹಾಗೂ ಅಲ್ಲಿಂದ ಹೊರಹೋಗಲು ಹವಣಿಸುತ್ತಿರುವ ಜನರಿಗೆ ಭಾರತ ಸರ್ಕಾರ ಮಂಗಳವಾರ (ಆಗಸ್ಟ್ 17) ಇ- ವೀಸಾ ಘೋಷಿಸಿದೆ. ‘ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ’ (e-Emergency X-Misc Visa) ಎಂಬ ಎಲೆಕ್ಟ್ರಾನಿಕ್ ವೀಸಾದ ಮೂಲಕ ವೇಗವಾಗಿ ವೀಸಾಗೆ ಅಪ್ಲೈ ಮಾಡಬಹುದಾಗಿದೆ. ಅಫ್ಘಾನಿಸ್ತಾನದ ನಾಗರಿಕರಿಗೆ ಕೂಡ ಭಾರತದ ಇ-ವೀಸಾ ನೀಡಿಕೆ ಇರಲಿದೆ. ಈ ತುರ್ತು ವೀಸಾ ಸೇವೆಯಲ್ಲಿ ಎಲ್ಲಾ ಧರ್ಮದವರಿಗೂ ಅವಕಾಶ ನೀಡಲಾಗಿದೆ. ಭದ್ರತೆಯ ವಿಚಾರ ಗಮನದಲ್ಲಿ ಇಟ್ಟುಕೊಂಡು ಅಫ್ಘನ್ನರಿಗೆ 6 ತಿಂಗಳ ಕಾಲ ಭಾರತದ ಇ-ವೀಸಾ ನೀಡಲಾಗುತ್ತದೆ.
ಭಾರತದ ವಿದೇಶಾಂಗ ಸಚಿವಾಲಯದಿಂದ ಅಫ್ಘಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ 919717785379 ಸಹಾಯವಾಣಿ ತೆರೆಯಲಾಗಿದೆ. ಹಾಗೇ, MEAHelpdeskIndia@gmail.com ಇಮೇಲ್ ಹೆಲ್ಪ್ಲೈನ್ ಮೂಲಕ ಭಾರತಕ್ಕೆ ವಾಪಾಸ್ ಬರಲು ಬಯಸುವ ಅಫ್ಘಾನ್ನಲ್ಲಿರುವ ಭಾರತೀಯರು ಭಾರತವನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ಅಫ್ಘಾನಿಸ್ತಾನ ನಿರಾಶ್ರಿತರಿಗೆ ತುರ್ತು ಇ-ವೀಸಾ ಸೇವೆ ಆರಂಭಿಸಿದ ಭಾರತ; ಅರ್ಜಿ ಸಲ್ಲಿಸುವುದು ಹೇಗೆ? ವಿವರ ಇಲ್ಲಿದೆ
ಕೆಲಸಕ್ಕೆ ಹಿಂದಿರುಗುವಂತೆ ಅಫ್ಘಾನ್ ಸರ್ಕಾರಿ ನೌಕರರಿಗೆ ಕರೆಕೊಟ್ಟ ತಾಲಿಬಾನ್ ಉಗ್ರರು; ಮಹಿಳೆಯರಿಗೂ ಆಹ್ವಾನ
(HD Deve Gowda on Afghanistan Crisis Taliban takeover Afghan Kabul)