ನವೋದ್ಯಮಗಳು ದೇಶದ ಬೆನ್ನೆಲುಬಾಗುತ್ತಿವೆ, ಜ.16ರಂದು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನ ಆಚರಣೆ: ಪ್ರಧಾನಿ ಮೋದಿ
ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮದ 6ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ಜನವರಿ 10 ರಿಂದ 16ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಣೆ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ 150ಕ್ಕೂ ಹೆಚ್ಚು ನವೋದ್ಯಮಿಗಳ (Start Ups)ಜತೆ ಇಂದು ಸಂವಾದ ನಡೆಸಿದರು. ಇದೇ ವೇಳೆ, ಜನವರಿ 16ನ್ನು ಇನ್ನುಮುಂದೆ ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನವನ್ನಾಗಿ ಆಚರಿಸುವುದಾಗಿ ಘೋಷಣೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಈಗ ನವೋದ್ಯಮಗಳು ಹೊಸ ಭಾರತದ ಬೆನ್ನೆಲುಬಾಗಿ ರೂಪುಗೊಳ್ಳುತ್ತಿವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 100ವರ್ಷಗಳಾಗುವ ಹೊತ್ತಿಗೆ ಈ ಸ್ಟಾರ್ಟ್ ಅಪ್ಗಳೂ ಕೂಡ ಇನ್ನಷ್ಟು ಮಹತ್ವದ ಪಾತ್ರ ವಹಿಸಲಿವೆ. ಇಲ್ಲಿನ ನವೋದ್ಯಮಿಗಳು ನಮ್ಮ ದೇಶದ ಗೌರವ, ಹೆಮ್ಮೆಯನ್ನು ಜಾಗತಿಕವಾಗಿ ಹೆಚ್ಚಿಸಿವೆ ಎಂದು ಹೇಳಿದರು.
ಈ ದಶಕವನ್ನು ಭಾರತದ ಟೆಚಾಡೆ ಎಂದು ಕರೆಯಲಾಗುವುದು. ನಾವೀನ್ಯತೆ, ಉದ್ಯಮಶೀಲತೆಯನ್ನು ಅಭಿವೃದ್ಧಿಗೊಳಿಸುವುದನ್ನು ಒಳಗೊಂಡಿದೆ. ಈಗ ಭಾರತದ ಸ್ಟಾರ್ಟ್ ಅಪ್ಗಳು 55 ವಿವಿಧ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. 5 ವರ್ಷಗಳ ಹಿಂದೆ ನಮ್ಮಲ್ಲಿ 500 ಸ್ಟಾರ್ಟ್ ಅಪ್ಗಳೂ ಕೂಡ ಇರಲಿಲ್ಲ. ಆದರೆ ಆ ಸಂಖ್ಯೆಯೀಗ 60 ಸಾವಿರ ದಾಟಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು. ಹಾಗೇ, ಯುವಕರ ಸೃಜನಾತ್ಮಕತೆಯ ಮೇಲೆ ಭಾರತಕ್ಕೆ ನಂಬಿಕೆಯಿದೆ ಎಂದು ಭರವಸೆ ವ್ಯಕ್ತಪಡಿಸಿದರು.
Start-ups are going to be the backbone of new India. When India completes 100 years of independence, start-ups will have an important role. Country’s innovators are making the country proud globally: PM Modi pic.twitter.com/aggRwUZs0X
— ANI (@ANI) January 15, 2022
ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮದ 6ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ಜನವರಿ 10 ರಿಂದ 16ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅದರ ಭಾಗವಾಗಿ ಇಂದು ಪಿಎಂ ಮೋದಿ 150 ಸ್ಟಾರ್ಟ್-ಅಪ್ಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಸ್ಟಾರ್ಟ್ ಅಪ್ಗಳು ರಾಷ್ಟ್ರದ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆಗಳನ್ನು ನೀಡುತ್ತವೆ ಎಂದು ಪ್ರಧಾನಿ ಮೋದಿ ದೃಢವಾಗಿ ನಂಬಿಕೆ ಹೊಂದಿದ್ದಾರೆ. ಭಾರತದಲ್ಲಿ 2016ರಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮ ಶುರು ಮಾಡಲಾಯಿತು. ಅವುಗಳ ಬೆಳವಣಿಗೆ, ಉತ್ತೇಜನಕ್ಕೆ ಅವಕಾಶ ಕಲ್ಪಿಸಿಕೊಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದೂ ಪಿಎಂಒ ಮಾಹಿತಿ ನೀಡಿದೆ.
ಇದನ್ನೂ ಓದಿ: ಬಸ್ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಸಹ ಪ್ರಯಾಣಿಕರ ಸಹಕಾರಕ್ಕೆ ಭಾರೀ ಮೆಚ್ಚುಗೆ
Published On - 5:39 pm, Sat, 15 January 22