ಕಾಂಗ್ರೆಸ್ ಸಾಯುವ ಹಂತದಲ್ಲಿದೆ ಎಂದಿರುವ ನವಜೋತ್ ಸಿಧು ಹೈಕಮಾಂಡ್​ಗೆ ಮತ್ತೆ ತಲೆನೋವಾಗಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 09, 2021 | 12:39 AM

ಕೇಂದ್ರ ಸಚಿವ ಅಜಯ್ ಮಿಶ್ರಾ ಆವರ ಮಗನ ಬಂಧನಕ್ಕೆ ಒತ್ತಾಯಿಸಿ ಉಪವಾಸ ಪ್ರತಿಭಟನೆ ಆರಂಭಿಸಿದ ಸಿಧುಗೆ ತಾವು ಮುಖ್ಯಮಂತ್ರಿ ಚರಣ್​ಜಿತ್ ಚನ್ನಿ ಅವರ ಆಗಮನಕ್ಕಾಗಿ ಕಾಯುವ ಪರಿಸ್ಥಿತಿ ಎದುರಾಗಿದ್ದರಿಂದ ಬೇಜಾರು ಮಾಡಿಕೊಂಡಿದ್ದು ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

ಕಾಂಗ್ರೆಸ್ ಸಾಯುವ ಹಂತದಲ್ಲಿದೆ ಎಂದಿರುವ ನವಜೋತ್ ಸಿಧು ಹೈಕಮಾಂಡ್​ಗೆ ಮತ್ತೆ ತಲೆನೋವಾಗಿದ್ದಾರೆ!
ಉಪವಾಸ ಧರಣಿಗೆ ಕೂತಿರುವ ನವಜೋತ್ ಸಿಧು
Follow us on

ಚಂಡೀಗಡ್: ಪಂಜಾಬ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಕ್ಷದ ಹೈಕಮಾಂಡ್ಗೆ ಮುಜುಗುರ ಉಂಟಾಗುವಂತೆ ಮಾಡುವುದನ್ನು ಮುಂದುವರಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಮೊದಲು ನಾಯಕರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಪ್ರಯತ್ನದಲ್ಲಿರುವ ಹೈಕಮಾಂಡ್ಗೆ ಸಿಧು ಹೇಳಿಕೆಗಳು ಹಿನ್ನೆಡೆಯೊಡ್ಡುತ್ತಿವೆ. ಪಿಪಿಸಿಸಿಗೆ ಇನ್ನೂ ಅಧಿಕೃತ ರಾಜೀನಾಮೆ ಸಲ್ಲಿಸದ ಸಿಧು ಅವರು ಗುರುವಾರದಂದು ಲಖಿಂಪುರ ಖೇರಿಯಲ್ಲಿ ನಡೆದ ರೈತರ ಭೀಕರ ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಲು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮೊಹಾಲಿಯಿಂದ ಲಖಿಂಪುರಕ್ಕೆ ಹೋಗಲು ನಿರ್ಧರಿಸಿ ಹೈಕಮಾಂಡ್ಗೆ ಹೊಸ ತಲೆನೋವು ಸೃಷ್ಟಿಸಿದ್ದರು.

ಶುಕ್ರವಾರದಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಆವರ ಮಗನ ಬಂಧನಕ್ಕೆ ಒತ್ತಾಯಿಸಿ ಉಪವಾಸ ಪ್ರತಿಭಟನೆ ಆರಂಭಿಸಿದ ಸಿಧುಗೆ ತಾವು ಮುಖ್ಯಮಂತ್ರಿ ಚರಣ್​ಜಿತ್ ಚನ್ನಿ ಅವರ ಆಗಮನಕ್ಕಾಗಿ ಕಾಯುವ ಪರಿಸ್ಥಿತಿ ಎದುರಾಗಿದ್ದರಿಂದ ಬೇಜಾರು ಮಾಡಿಕೊಂಡಿದ್ದು ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

ಪಿಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿರುವ ಸಿಧು ಅವರು ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜೊತೆ ತಿಂಗಳುಗಟ್ಟಲೆ ಜಗಳ ಮಾಡಿಕೊಂಡಿದ್ದಾಗ, ಹೈಕಮಾಂಡ್ ಇವರ ಪರವಾಗಿ ನಿಂತರೂ, ಮಾಜಿ ಕ್ರಿಕೆಟಿಗ ಪಕ್ಷ ಮತ್ತು ವರಿಷ್ಠರ ಬಗ್ಗೆ ಟೀಕೆ ಮಾಡುತ್ತಿರುವುದು ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಅವರು ಪಕ್ಷವನ್ನು ಖಂಡಿಸುತ್ತಿರುವ ದೃಶ್ಯ ಕೆಮೆರಾನಲ್ಲಿ ಸೆರೆಸಿಕ್ಕಿದೆ.

ಈಗ ಚರ್ಚೆನಲ್ಲಿರುವ ವಿಡಿಯೋನಲ್ಲಿ ಸಿಧು ಅವರ ಆಪ್ತಮಿತ್ರ ಮತ್ತು ಸಂಪುಟ ಸಚಿವ ಪರ್ಗತ್ ಸಿಂಗ್ ಅವರು ಸಿಧುರನ್ನು ಸಮಾಧಾನ ಪಡಿಸುತ್ತಿರುವುದು ಕಾಣುತ್ತಿದೆ. ಮುಖ್ಯಮಂತ್ರಿ ಚನ್ನಿ ಬೇಗ ಬಂದು ನಮ್ಮ ಜೊತೆ ಸೇರಲಿದ್ದಾರೆ ಎಂದು ಪರ್ಗತ್ ಅವರು ಸಿಧುಗೆ ಹೇಳುತ್ತಿದ್ದಾರೆ. ಅವರೊಂದಿಗೆ ಪಂಜಾಬ ಕಾಂಗ್ರೆಸ್ ಯುನಿಟ್ನ ಕಾರ್ಯಾಧ್ಯಕ್ಷ ಸುಖ್ವಿಂದರ್ ಸಿಂಗ್ ಡ್ಯಾನಿ ಸಹ ಇದ್ದು ಜಾಥಾ ಯಶ ಕಾಣಲಿದೆ ಎಂದು ಹೇಳುತ್ತಿದ್ದಾರೆ.

ಅದಕ್ಕೆ ಉತ್ತರವಾಗಿ ಸಿಧು, ‘ಯಾವ ಯಶಸ್ಸಿನ ಬಗ್ಗೆ ಹೇಳುತ್ತಿದ್ದೀರಿ? ಭಗವಂತ್ ಸಿಧು (ನವಜೋತ್ ಸಿಧು ಅವರ ತಂದೆ) ಅವರ ಮಗನಿಗೆ ಮುಂದಾಳತ್ವ ನೀಡಿದ್ದರೆ ನಿಮಗೆ ಗೊತ್ತಾಗಿರುತಿತ್ತು…,ಕಾಂಗ್ರೆಸ್ ಸಾಯುವ ಹಂತದಲ್ಲಿದೆ…,’ ಎಂದು ಸಿಧು ಹೇಳಿದ್ದಾರೆ.

ಸಿಧು ಅವರ ಕಾಮೆಂಟ್ ವಿರೋಧ ಪಕ್ಷ ಅಕಾಲಿ ದಳಕ್ಕೂ ಕಾಂಗ್ರೆಸ್ ಅನ್ನು ಟೀಕಿಸುವ ಅವಕಾಶ ಕಲ್ಪಿಸಿದೆ. ‘ಸಿಧು ಅವರ ಟೀಕೆ ದಲಿತ ಸಮುದಾಯದೆಡೆ ಅವರಿಗಿರುವ ಧೋರಣೆಯನ್ನು ತೋರಿಸುತ್ತದೆ. ಸಮುದಾಯ ಕುರಿತು ಅವರಿಗೆ ಕಿಂಚಿತ್ತೂ ಗೌರವವಿಲ್ಲ. ಸಿಧು ಅವರ ಕಾಮೆಂಟ್ ಕಾಂಗ್ರೆಸ್​ನ ಮನಸ್ಥಿತಿಯನ್ನು ಸಹ ವಿವರಿಸುತ್ತದೆ, ಚುನಾವಣೆಗೆ ಮೊದಲೇ ಅವರ ಜಾತಿ ಆಧಾರಿತ ರಾಜಕಾರಣ ಬಯಲಿಗೆ ಬಂದಿದೆ,’ ಎಂದು ಅಕಾಲಿ ನಾಯಕರು ಹೇಳಿದ್ದಾರೆ.

ಜನರ ಅಭ್ಯುದಯಕ್ಕಿಂತ ಹೆಚ್ಚು ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗೆ ಮಹತ್ವ ನೀಡುವವರು ರಾಜ್ಯಕ್ಕೆ ಯಾವುದೇ ಒಳಿತು ಮಾಡಲಾರರು. ಅವರ ಬಣ್ಣ ಬಯಲಾಗೇ ಆಗುತ್ತದೆ. ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಪಂಜಾಬಿಗಳನ್ನು ಯಾಕೆ ಮೂರ್ಖರನ್ನಾಗಿಸಲಾಗಿದೆ ಅಂತ ಸೋನಿಯಾ ಗಾಂಧಿ ಅಂತ ಹೇಳಬೇಕು, ಇಷ್ಟೆಲ್ಲ ಆದ ಮೇಲೂ ಅವರೆಲ್ಲ ಸಿಧು ನಾಯಕತ್ವದ ಮೇಲೆ ವಿಶ್ವಾಸವಿರಿಸಿಕೊಂಡಿದ್ದಾರೆ,’ ಎಂದು ಅಕಾಲಿ ದಳ ನಾಯಕ ಡಾ ದಲ್ಜಿತ್ ಸಿಂಗ್ ಚೀಮಾ ಹೇಳಿದ್ದಾರೆ.

ಸಿಧು ಜೊತೆ ತಮ್ಮ ಜಗಳ ತಾರಕಕ್ಕೇರಿದಾಗ ಅಮರೀಂದರ್ ಸಿಂಗ್ ಅವರು, ಸಿಧು ಮೇಲೆ ಹೆಚ್ಚಿನ ನಂಬಿಕೆ ಇಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೈಕಮಾಂಡನ್ನು ಪದೇಪದೆ ಎಚ್ಚರಿಸಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಾಗ ಅವರು, ಯಾವ ಕಾರಣಕ್ಕೂ ಸಿಧು ಅವರನ್ನು ತಮ್ಮ ಸ್ಥಾನಕ್ಕೆ ಹೋಗಲು ಬಿಡುವುದಿಲ್ಲ ಎಂಬ ಶಪಥ ಮಾಡಿದ್ದರು.

ಅಮರೀಂದರ್ ರಾಜೀನಾಮೆ ಸಲ್ಲಿಸಿದ ನಂತರ ಹೈಕಮಾಂಡ್ ಸಿಧು ಅವರನ್ನು ಪಿಪಿಸಿಸಿ ಅಧ್ಯಕ್ಷರನ್ನಾಗಿ ಮತ್ತು ದಲಿತ ಸಮುದಾಯದ ಚರಣ್​ಜಿತ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿತು. ಚನ್ನಿ, ಪಂಜಾಬಿನ ಮೊದಲ ದಲಿತ ಸಿಎಮ್ ಆಗಿದ್ದಾರೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು (ಪಂಜಾಬಿನ ಜನಸಂಖ್ಯೆಯು ಶೇಕಡಾ 30 ರಷ್ಟು ದಲಿತ ಸಮುದಾಯವನ್ನು ಒಳಗೊಂಡಿದೆ) ಮತ್ತು ಪಕ್ಷದಲ್ಲಿನ ಒಳಜಗಳಗಳು ಇಲ್ಲವಾಗುತ್ತವೆ ಎಂಬ ಉದ್ದೇಶದಿಂದ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ.

ಆದರೆ, ಸಿಧುಗೆ ಚನ್ನಿ ಅವರೊಂದಿಗೂ ಕೆಲಸ ಮಾಡುವುದು ಇಷ್ಟವಿಲ್ಲ.

ಇದನ್ನೂ ಓದಿ: ಲಖಿಂಪುರ ಖೇರಿಗೆ ಭೇಟಿ ನೀಡಲು ಮುಂದಾದ ಪಂಜಾಬ್​ ಸಿಎಂ; ಯುಪಿ ಸರ್ಕಾರದ ಅನುಮತಿ ಕೇಳಿ ಪತ್ರ