ಹರಿಯಾಣ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ನಾಳೆ ಪ್ರಮಾಣವಚನ ಸ್ವೀಕಾರ

|

Updated on: Oct 16, 2024 | 3:16 PM

ಹರಿಯಾಣದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ನಯಾಬ್ ಸಿಂಗ್ ಸೈನಿ ಆಯ್ಕೆಯಾಗಿದ್ದು, ಮುಖ್ಯಮಂತ್ರಿಯಾಗಿ ನಾಳೆ (ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಮನೋಹರ್ ಲಾಲ್ ಖಟ್ಟರ್ ಅವರ ಬದಲು ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾದರು. ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ನಯಾಬ್ ಸಿಂಗ್ ಬಿಜೆಪಿಯನ್ನು ಅಭೂತಪೂರ್ವ ಮೂರನೇ ಅವಧಿಗೆ ಗೆಲುವಿನತ್ತ ಮುನ್ನಡೆಸಿದರು.

ಹರಿಯಾಣ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ನಾಳೆ ಪ್ರಮಾಣವಚನ ಸ್ವೀಕಾರ
ನಯಾಬ್ ಸಿಂಗ್ ಸೈನಿ- ಕೇಂದ್ರ ಗೃಹ ಸಚಿವ ಅಮಿತ್ ಶಾ
Follow us on

ನವದೆಹಲಿ: ಹರಿಯಾಣದ ಮುಖ್ಯಮಂತ್ರಿಯಾಗಿ ಚುನಾಯಿತರಾದ ನಯಾಬ್ ಸಿಂಗ್ ಸೈನಿ ಅವರು ಇಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹರಿಯಾಣದ ಪಂಚಕುಲದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಮಾಜಿ ರಾಜ್ಯ ಸಚಿವ ಅನಿಲ್ ವಿಜ್ ಸೈನಿ ನಯಾಬ್ ಸಿಂಗ್ ಸೈನಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ನಯಾಬ್ ಸಿಂಗ್ ಸೈನಿ ಅವರು ನಾಳೆ (ಅಕ್ಟೋಬರ್ 17) ಎರಡನೇ ಬಾರಿಗೆ ಹರಿಯಾಣ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಹರಿಯಾಣ ದೇಶದ ರಾಜಕೀಯ ಪಂಡಿತರನ್ನು ತಪ್ಪು ಎಂದು ಸಾಬೀತುಪಡಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಹರಿಯಾಣದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್ ಸೋಲು; ರಾಹುಲ್ ಗಾಂಧಿ ಮನೆಗೆ 1 ಕೆಜಿ ಜಿಲೇಬಿ ಕಳುಹಿಸಿದ ಬಿಜೆಪಿ

ಹಂಗಾಮಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶೀಘ್ರದಲ್ಲೇ ರಾಜ್ಯಪಾಲರ ಭವನದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಮನೋಹರ್ ಖಟ್ಟರ್, ಮೋಹನ್ ಯಾದವ್, ಹರಿಯಾಣ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸತೀಶ್ ಪುನಿಯಾ, ಬಿಪ್ಲಬ್ ದೇಬ್, ಸುರೇಂದ್ರ ನಗರ ಮತ್ತು ಇತರ ಬಿಜೆಪಿ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ.


ಈ ವೇಳೆ ಮಾತನಾಡಿದ ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಯಾಬ್ ಸಿಂಗ್ ಸೈನಿ, ಹರಿಯಾಣದ ಜನರು ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳಲ್ಲಿ ನಂಬಿಕೆ ಇಟ್ಟು 3ನೇ ಬಾರಿಗೆ ಬಿಜೆಪಿ ಸರ್ಕಾರವನ್ನು ರಚಿಸಿದ್ದಾರೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪಡಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನಕ್ಕೆ ಬಲ ಸಿಕ್ಕಂತಾಗಿದೆ ಎಂದಿದ್ದಾರೆ.

ಕೇಂದ್ರ ವೀಕ್ಷಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಅವಲೋಕನದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಪ್ರಮುಖ ಸಭೆ ಪಂಚಕುಲದಲ್ಲಿ ನಡೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ