ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯವೇ ಮುಖ್ಯ, ನೀಟ್ ವಿವಾದಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು

ನೀಟ್ ಪೇಪರ್ ಸೋರಿಕೆ ವಿವಾದದ ಕುರಿತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ದಾಳವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರವು ಪರೀಕ್ಷಾ ಸುಧಾರಣೆಗೆ ಬದ್ಧವಾಗಿದೆ, ಆದರೆ ವಿಪಕ್ಷಗಳು ಚರ್ಚೆ ಬದಲು ರಾಜಕೀಯ ಪ್ರದರ್ಶನಕ್ಕೆ ಆದ್ಯತೆ ನೀಡುತ್ತಿವೆ ಎಂದು ಸಚಿವರು ಪ್ರತಿಪಾದಿಸಿದರು. ರಾಹುಲ್ ಗಾಂಧಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯವೇ ಮುಖ್ಯ, ನೀಟ್ ವಿವಾದಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು
ಧರ್ಮೇಂದ್ರ ಪ್ರಧಾನ್

Updated on: Jul 22, 2026 | 11:17 AM

ನವದೆಹಲಿ, ಜುಲೈ 22: ದೆಹಲಿಯ ಜಂತರ್ ಮಂತರ್​ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ‘ಸಂಸತ್ ಚಲೋ’ ಮೆರವಣಿಗೆ ಮತ್ತು ಪೋಲಿಸ್ ಘರ್ಷಣೆಯ ನಂತರ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಟ್(NEET) ಪೇಪರ್ ಸೋರಿಕೆ ವಿವಾದದ ಕುರಿತು ತಮ್ಮ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಭಾರಿ ವಾಗ್ದಾಳಿ ನಡೆಸಿರುವ ಸಚಿವರು, ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ನಾಚಿಕೆಯಿಲ್ಲದೆ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರಜಾಪ್ರಭುತ್ವ ಮಾದರಿಯ ಚರ್ಚೆಯಲ್ಲಿ ಭಾಗವಹಿಸುವ ಬದಲು, ಅಧಿವೇಶನಕ್ಕೆ ಅಡ್ಡಿಪಡಿಸುವುದೇ ವಿಪಕ್ಷಗಳ ಮುಖ್ಯ ಉದ್ದೇಶವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ನೀಟ್ ಪರೀಕ್ಷಾ ಅಕ್ರಮಗಳು ಹಾಗೂ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಳ ಕುರಿತು ಸಂಸತ್ತಿನಲ್ಲಿ ವಿವರವಾದ ಸಮಗ್ರ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಂಪೂರ್ಣ ಸಿದ್ಧವಿದೆ. ಆದರೆ ಕಾಂಗ್ರೆಸ್‌ಗೆ ಚರ್ಚೆಗಿಂತ ರಾಜಕೀಯ ಪ್ರದರ್ಶನವೇ ಮುಖ್ಯವಾಗಿದೆ ಎಂದು ಪ್ರತಿಪಾದಿಸಿದರು.

ನಮ್ಮ ದೇಶದ ವಿದ್ಯಾರ್ಥಿಗಳ ಆಕ್ರೋಶಕ್ಕೆ ನಾವು ಸ್ಪಂದಿಸಬೇಕಿದೆ. ಅವರಿಗೆ ಸರಿಯಾದ ಉತ್ತರ, ಪರೀಕ್ಷಾ ಸುಧಾರಣೆ ಹಾಗೂ ಪಾರದರ್ಶಕ ಹೊಣೆಗಾರಿಕೆಯನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ರಾಹುಲ್ ಗಾಂಧಿಯವರಿಗೆ ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಲ್ಲ, ಬದಲಿಗೆ ಅನಗತ್ಯ ಮುಖಾಮುಖಿ ಮತ್ತು ರಾಜಕೀಯ ಸುದ್ದಿ ಸೃಷ್ಟಿಸುವ ಕುತಂತ್ರ ಎಂದು ಸಚಿವರು ಟೀಕಿಸಿದರು.

ಮತ್ತಷ್ಟು ಓದಿ: ಆಸ್ಪತ್ರೆಯಲ್ಲೇ ಸೋನಮ್ ವಾಂಗ್ಚುಕ್ ಭೇಟಿಯಾದ ಜೆಪಿ ನಡ್ಡಾ, ಜಿತೇಂದ್ರ ಸಿಂಗ್

ಇತ್ತೀಚೆಗೆ ದೆಹಲಿಯಲ್ಲಿ ಜಿಜಿಪಿ (CJP) ನೇತೃತ್ವದಲ್ಲಿ ನಡೆದ ‘ಸಂಸತ್ ಚಲೋ’ ಮೆರವಣಿಗೆಯ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರಿ ಘರ್ಷಣೆ ನಡೆದು ಹಲವರು ಗಾಯಗೊಂಡಿದ್ದರು. ವಿದ್ಯಾರ್ಥಿಗಳ ಮೇಲಿನ ಪೋಲಿಸ್ ಕ್ರಮವನ್ನು ಖಂಡಿಸಿ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪ್ರಮುಖ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಹೊರಗೆ ಅಚ್ಚರಿಯ ಧರಣಿ ಪ್ರತಿಭಟನೆ ನಡೆಸಿದ್ದರು.

ಪರೀಕ್ಷಾ ಅಕ್ರಮಗಳ ವಿರುದ್ಧ ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಬೆಂಬಲಕ್ಕೂ ಕಾಂಗ್ರೆಸ್ ಧ್ವನಿಗೂಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us