ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರಿಗೆ 10 ಕೋಟಿ ರೂ. ದಂಡ, 10 ವರ್ಷ ಜೈಲು
ನೀಟ್ ಸೇರಿದಂತೆ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ 'ಸಾರ್ವಜನಿಕ ಪರೀಕ್ಷೆಗಳ ಕಾಯ್ದೆ'ಗೆ ಕಠಿಣ ತಿದ್ದುಪಡಿ ತರುತ್ತಿದೆ. ಇನ್ನು ಅಪರಾಧಿಗಳಿಗೆ 10 ಕೋಟಿ ರೂ. ದಂಡ, 10 ವರ್ಷ ಜೈಲು, ಮತ್ತು ಸೇವಾ ಪೂರೈಕೆದಾರರಿಗೆ ಕಪ್ಪುಪಟ್ಟಿ ಶಿಕ್ಷೆ ಸಿಗಲಿದೆ. ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು ಶೀಘ್ರ ತೀರ್ಪು ನೀಡಲಿವೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಈ ಕಾಯ್ದೆ ನಿರ್ಣಾಯಕವಾಗಿದೆ.

ನವದೆಹಲಿ, ಜುಲೈ 24: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ (NEET) ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ಭಾರಿ ತಿದ್ದುಪಡಿಗಳಿಗೆ ಮುಂದಾಗಿದೆ. 2024 ರ ‘ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ’ಗೆ ಕಠಿಣ ತಿದ್ದುಪಡಿ ತರಲು ಸಿದ್ಧತೆ ನಡೆಸಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾದ ತಿದ್ದುಪಡಿ ಮಸೂದೆಯು ಪೇಪರ್ ಲೀಕ್ ಮಾಫಿಯಾ ವಿರುದ್ಧ ಕಠಿಣ ನಿಯಮಗಳನ್ನು ತರಲಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಿಗೆ ಶಾಸನಬದ್ಧ ಅಧಿಕಾರ ನೀಡಲಾಗುವುದು. ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು ಪ್ರಕರಣವನ್ನು ಶೀಘ್ರವಾಗಿ ವಿಲೇವಾರಿ ಮಾಡಿ, 3 ತಿಂಗಳ ಒಳಗಾಗಿ ಶಿಕ್ಷೆಯನ್ನು ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಈ ಮಸೂದೆಯು ನಿಗದಿತ ಕಾಲಮಿತಿಯೊಳಗೆ ತನಿಖೆಯನ್ನು ಪೂರ್ಣಗೊಳಿಸಲು ಶಿಫಾರಸು ಮಾಡಲಿದೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಕೋಟಿ ರೂ.ವರೆಗೆ ದಂಡ ವಿಧಿಸಲಾಗುವುದು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಮಧ್ಯರಾತ್ರಿ ಬಿಡುಗಡೆ ಮಾಡಿದ ವಿಶೇಷ ವೀಡಿಯೊ ಸಂದೇಶದಲ್ಲಿ, “ಅಪರಾಧಿಗಳಿಗೆ ತ್ವರಿತ ಮತ್ತು ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು” ಎಂದು ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಸ್ತುತ ಇರುವ ಕಾನೂನು ಜೈಲು ಶಿಕ್ಷೆ: 3 ರಿಂದ 5 ವರ್ಷಗಳು ವ್ಯಕ್ತಿಗತ ದಂಡ: 10 ಲಕ್ಷ ರೂ.ವರೆಗೆ ಏಜೆನ್ಸಿ ಅಥವಾ ಸಂಸ್ಥೆಗಳಿಗೆ ದಂಡ: 1 ಕೋಟಿ ರೂ.ವರೆಗೆ ವಿಚಾರಣೆ: ಸಾಮಾನ್ಯ ನ್ಯಾಯಾಲಯಗಳು
ಪ್ರಸ್ತಾವಿತ ನೂತನ ತಿದ್ದುಪಡಿ ಜೈಲು ಶಿಕ್ಷೆ: 5 ರಿಂದ 10 ವರ್ಷಗಳವರೆಗೆ ಹೆಚ್ಚಳ ಕನಿಷ್ಠ ದಂಡ: 10 ಲಕ್ಷದಿಂದ ನೇರವಾಗಿ 10 ಕೋಟಿ ರೂ.ಗೆ ಏರಿಕೆ ಸೇವಾ ಪೂರೈಕೆದಾರರಿಗೆ: 10 ಕೋಟಿ ರೂ. ದಂಡದ ಜತೆಗೆ ಕಪ್ಪುಪಟ್ಟಿಗೆ ಸೇರ್ಪಡೆ ವಿಚಾರಣೆ: ವಿಶೇಷ ‘ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು’
ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆ ಸಾಮಾನ್ಯ ಕೋರ್ಟ್‌ಗಳಲ್ಲಿ ವರ್ಷಗಟ್ಟಲೆ ವಿಳಂಬವಾಗುವುದನ್ನು ತಡೆಯಲು ಪ್ರತ್ಯೇಕ ವಿಶೇಷ ಅಥವಾ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ಈ ಕೋರ್ಟ್‌ಗಳಿಗೆ ಶೀಘ್ರ ತನಿಖೆ ಮತ್ತು ತೀರ್ಪು ನೀಡಲು ಹೆಚ್ಚುವರಿ ಅಧಿಕಾರಗಳನ್ನು ನೀಡಲಾಗುತ್ತದೆ.
ಮತ್ತಷ್ಟು ಓದಿ: ನೀಟ್ ವಿವಾದದ ಬೆನ್ನಲ್ಲೇ ಬಿಗ್ ಆ್ಯಕ್ಷನ್: ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವಜಾ, ನರೇಶ್ ಗಂಗ್ವಾರ್ ನೂತನ ಕಾರ್ಯದರ್ಶಿಯಾಗಿ ನೇಮಕ
ಸೇವಾ ಪೂರೈಕೆದಾರರ ಮೇಲೆ ಕಠಿಣ ಕಣ್ಣು
ಪರೀಕ್ಷೆ ನಡೆಸುವ ಖಾಸಗಿ ಕಂಪನಿಗಳು, ಕಂಪ್ಯೂಟರ್ ಸೆಂಟರ್‌ಗಳು ಅಥವಾ ಸೇವಾ ಪೂರೈಕೆದಾರ ಸಂಸ್ಥೆಗಳು ಅಕ್ರಮದಲ್ಲಿ ಭಾಗಿಯಾದರೆ, ಅವರಿಗೆ 10 ಕೋಟಿ ರೂ.ವರೆಗೆ ದಂಡ ವಿಧಿಸುವುದರ ಜೊತೆಗೆ ಪರೀಕ್ಷೆ ನಡೆಸುವ ಹಕ್ಕನ್ನು ರದ್ದುಗೊಳಿಸಲಾಗುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಸಂಘಟಿತ ಸಿಂಡಿಕೇಟ್ ಅಥವಾ ಮಾಫಿಯಾಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಕೋಟಿಗಿಂತಲೂ ಅಧಿಕ ದಂಡ ವಿಧಿಸುವ ನಿಬಂಧನೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಹಿನ್ನೆಲೆ ಮತ್ತು ರಾಜಕೀಯ ವಿದ್ಯಮಾನಗಳು
ಕೇಂದ್ರ ಸಂಪುಟ ಸಭೆಯ ಒಪ್ಪಿಗೆ ಸಿಕ್ಕ ನಂತರ, ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದ ಎರಡನೇ ವಾರದಲ್ಲೇ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಲು ಸರ್ಕಾರ ನಿರ್ಧರಿಸಿದೆ.
ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸುತ್ತಿದ್ದ ಹೋರಾಟದ ಭಾಗವಾಗಿ, ಖ್ಯಾತ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ನಡೆಸುತ್ತಿದ್ದ 26 ದಿನಗಳ ಸುದೀರ್ಘ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೇಂದ್ರ ಸಚಿವರ ಭರವಸೆಯ ನಂತರ ಹಿಂಪಡೆದಿದ್ದಾರೆ. ಲಕ್ಷಾಂತರ ಯುವಜನತೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಲು ಈ ಕಠಿಣ ತಿದ್ದುಪಡಿ ಮಸೂದೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಸರ್ಕಾರ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:14 pm, Fri, 24 July 26




