
ಪಾಟ್ನಾ, ಸೆಪ್ಟೆಂಬರ್ 02: ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹ(Flood)ದ ನೀರಿನೊಂದಿಗೆ ಗಂಡಕ್ ನದಿ ಹಾಗೂ ಬಿಹಾರದ ಗಡಿ ಭಾಗದ ಜಲಮೂಲಗಳಿಗೆ ಕೊಚ್ಚಿಬಂದಿರುವ ಗುರುತಿಸಲಾಗದ ಮತ್ತು ಅಸಾಮಾನ್ಯ ಗಾತ್ರದ ಮೀನುಗಳನ್ನು ಹಿಡಿಯುವುದು, ಖರೀದಿಸುವುದು, ಮಾರಾಟ ಮಾಡುವುದು ಅಥವಾ ತಿನ್ನುವುದನ್ನು ತಕ್ಷಣವೇ ನಿಲ್ಲಿಸುವಂತೆ ಬಿಹಾರ ಸರ್ಕಾರವು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಆರೋಗ್ಯ ಮಾರ್ಗಸೂಚಿ ಹೊರಡಿಸಿದೆ.
ಇಂತಹ ಅಸಾಮಾನ್ಯ ಮೀನುಗಳನ್ನು ತಿಂದ ಹಲವರು ತೀವ್ರ ಅಸ್ವಸ್ಥಗೊಂಡಿರುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ, ರಾಜ್ಯ ಪಶುಸಂಪನ್ಮೂಲ ಮತ್ತು ಮೀನುಗಾರಿಕೆ ಇಲಾಖೆಯು ಈ ತುರ್ತು ಎಚ್ಚರಿಕೆಯನ್ನು ನೀಡಿದೆ.
ವಿಷಕಾರಿ ಬ್ಯಾಕ್ಟೀರಿಯಾಗಳ ಸೋಂಕು: ಪ್ರವಾಹದ ನೀರು ಕೊಳಚೆ ಚರಂಡಿಗಳು, ಸತ್ತ ಪ್ರಾಣಿಗಳು ಮತ್ತು ಕಸದ ರಾಶಿಗಳ ಮೂಲಕ ಹರಿದು ಬಂದಿರುವುದರಿಂದ, ಈ ಮೀನುಗಳು ಅಪಾಯಕಾರಿ ಬ್ಯಾಕ್ಟೀರಿಯಾ, ವೈರಸ್‌ಗಳು ಹಾಗೂ ಶಿಲೀಂಧ್ರಗಳಿಗೆ ತುತ್ತಾಗಿರುತ್ತವೆ.
ಕಂಡುಬರುವ ರೋಗಲಕ್ಷಣಗಳು: ಇಂತಹ ಕಲುಷಿತ ಮೀನುಗಳನ್ನು ತಿಂದರೆ ತೀವ್ರ ವಾಂತಿ, ಅತಿಸಾರ (ಭೇದಿ), ಹೊಟ್ಟೆ ನೋವು, ತಲೆತಿರುಗುವಿಕೆ ಹಾಗೂ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಗಿದೆ.
ಮತ್ತಷ್ಟು ಓದಿ: Nepal Floods: ನೇಪಾಳದ ಪ್ರವಾಹದ ಸಾವಿನ ಸಂಖ್ಯೆ 1,050ಕ್ಕೆ ಏರಿಕೆ; 163 ಭಾರತೀಯರ ರಕ್ಷಣೆ
ವೈರಲ್ ಆದ ವಿಡಿಯೋಗಳು: ಗಂಡಕ್ ನದಿ ತೀರದಲ್ಲಿ ಜನರು ದೈತ್ಯಾಕಾರದ ಬೆಕ್ಕುಮೀನುಗಳನ್ನು ಹಿಡಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ತಜ್ಞರ ವಿವರಣೆ: ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾ (WTI) ನಿರ್ದೇಶಕ ಸಮೀರ್ ಕುಮಾರ್ ಸಿನ್ಹಾ ಅವರ ಪ್ರಕಾರ, ಇವು ಹಿಮಾಲಯದ ವೇಗವಾಗಿ ಹರಿಯುವ ನದಿಗಳಲ್ಲಿ ಬಂಡೆಗಳ ಮಧ್ಯೆ ವಾಸಿಸುವ ‘ಗೂಂಚ್ ಕ್ಯಾಟ್‌ಫಿಶ್’ ಪ್ರಭೇದದ ಮೀನುಗಳಾಗಿವೆ.
ಬೇಗನೆ ಕೊಳೆಯುವ ಸ್ವಭಾವ: ಈ ಮೀನುಗಳು ಸತ್ತ ಕೆಲವೇ ಗಂಟೆಗಳಲ್ಲಿ ಬೇಗನೆ ಕೊಳೆತು ವಿಷಕಾರಿಯಾಗುವ ಗುಣ ಹೊಂದಿದ್ದು, ಪ್ರವಾಹದ ಕೆಸರಿನಲ್ಲಿ ಸಿಲುಕಿ ಸತ್ತ ಮೀನುಗಳನ್ನು ತಿನ್ನುವುದು ಪ್ರಾಣಕ್ಕೇ ಕುತ್ತು ತರಬಹುದು.
ಗೂಂಚ್ ಕ್ಯಾಟ್‌ಫಿಶ್ ಅನ್ನು ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟವು (IUCN) ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಗುರುತಿಸಿದೆ. ಈ ಮೀನುಗಳು ನದಿಯಲ್ಲಿನ ಸಣ್ಣ ಜಲಚರಗಳು ಮತ್ತು ಏಡಿಗಳನ್ನು ತಿಂದು ನದಿ ಪರಿಸರ ವ್ಯವಸ್ಥೆಯನ್ನು ಶುದ್ಧವಾಗಿಡಲು ನೆರವಾಗುತ್ತವೆ.
ಆಡಳಿತಕ್ಕೆ ಮಾಹಿತಿ ನೀಡಿ: ನದಿ ತೀರಗಳಲ್ಲಿ ಅಪರೂಪದ ಅಥವಾ ಅಸಾಮಾನ್ಯ ಮೀನುಗಳು ಕಂಡುಬಂದರೆ, ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಕಿವಿಗೊಡದೆ ತಕ್ಷಣವೇ ಸ್ಥಳೀಯ ಮೀನುಗಾರಿಕಾ ಅಧಿಕಾರಿಗಳಿಗೆ ಅಥವಾ ಆಡಳಿತಕ್ಕೆ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ