ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನೇಪಾಳ ಪ್ರಧಾನಮಂತ್ರಿ; ಸಿಎಂ ಯೋಗಿ ಆದಿತ್ಯನಾಥ್ ಉಪಸ್ಥಿತಿ
ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಶೇರ್ ಬಹದ್ದೂರ್ ದೇವುಬಾ ದೆಹಲಿಯಲ್ಲಿ ಸಭೆ ನಡೆಸಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಎರಡು ದೇಶಗಳ ನಡುವಿನ ಗಡಿ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.
ವಾರಾಣಸಿ: ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಮಂತ್ರಿ ಶೇರ್ ಬಹದ್ದೂರ್ ದೇವುಬಾ (Sher Bahadur Deuba) ಇಂದು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದರು. ಈ ವೇಳೆ ಅವರ ಪತ್ನಿ ಅರ್ಜು ದೇವುಬಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೂಡ ಇದ್ದರು. ಅದಕ್ಕೂ ಮೊದಲು ಅವರು ಕಾಲಭೈರವ ದೇಗುಲಕ್ಕೆ ಭೇಟಿ ಕೊಟ್ಟಿದ್ದರು. ಶೇರ್ ಬಹದ್ದೂರ್ ದೇವುಬಾ ಅವರು 2021ರ ಜುಲೈನಲ್ಲಿ ನೇಪಾಳ ಪ್ರಧಾನಮಂತ್ರಿಯಾಗಿದ್ದಾರೆ. ಶುಕ್ರವಾರ ಭಾರತಕ್ಕೆ ಬಂದಿರುವ ಇವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇಂದು ಭಾರತದಲ್ಲಿ ಅವರ ಕೊನೇ ದಿನವಾಗಿದ್ದು, ಉತ್ತರಪ್ರದೇಶದ ಕಾಲಭೈರವ ದೇಗುಲ ಮತ್ತು ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
Prime Minister of Nepal Sher Bahadur Deuba offers prayers at Kaal Bhairav temple in Varanasi
Uttar Pradesh CM Yogi Adityanath also present pic.twitter.com/6okWm3LCNt
— ANI UP/Uttarakhand (@ANINewsUP) April 3, 2022
ಕಾಶಿ ವಿಶ್ವನಾಥ ದೇವಾಲಯದಲ್ಲಿ ನೇಪಾಳ ಪ್ರಧಾನಮಂತ್ರಿಗೆ ತಿಲಕವಿಟ್ಟು ಸ್ವಾಗತ ಕೋರಲಾಯಿತು. ವಾರಾಣಸಿಯ ರಸ್ತೆ ಮಾರ್ಗಗಳಲ್ಲಿ ದೇವುಬಾ ಪೋಸ್ಟರ್ಗಳು, ಹೋರ್ಡಿಂಗ್ಗಳನ್ನು ಹಾಕಲಾಗಿತ್ತು. ದಾರಿಯುದ್ದಕ್ಕೂ ಹಲವು ಮಕ್ಕಳು ಭಾರತ ಮತ್ತು ನೇಪಾಳ ದೇಶಗಳ ಧ್ವಜಗಳನ್ನು ಹಿಡಿದು ನಿಂತಿದ್ದರು. ಕಾಲ ಭೈರವ ದೇವಸ್ಥಾನದಲ್ಲೂ ಸಹ ನೇಪಾಳ ಪ್ರಧಾನಿ ಮತ್ತು ಅವರ ಪತ್ನಿಯನ್ನು ಭಾರತೀಯ ಸಂಪ್ರದಾಯದ ಪ್ರಕಾರ ಸ್ವಾಗತ ಮಾಡಲಾಯಿತು. ಶಂಖ ಊದಿ, ಡಮರು ಬಾರಿಸುವ ಜತೆ, ಅವರಿಬ್ಬರಿಗೂ ಹೂವಿನ ಹಾರ ಹಾಕಲಾಯಿತು. ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಹಾಜರಿದ್ದರು.
ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಶೇರ್ ಬಹದ್ದೂರ್ ದೇವುಬಾ ದೆಹಲಿಯಲ್ಲಿ ಸಭೆ ನಡೆಸಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಎರಡು ದೇಶಗಳ ನಡುವಿನ ಗಡಿ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲ, ಭಾರತ-ನೇಪಾಳ ಸಂಬಂಧ ವೃದ್ಧಿಗೆ ಪೂರಕವಾದ ಹಲವು ಯೋಜನೆಗಳನ್ನು ಪ್ರಾರಂಭಕ್ಕೆ ಮುನ್ನುಡಿ ಹಾಕಿದ್ದಾರೆ. ಬಿಹಾರದ ಜಯನಗರದಿಂದ ನೇಪಾಳದ ಕುರ್ತಾವರೆಗಿನ 35 ಕಿಮೀ ದೂರದ ಗಡಿಯಾಚೆಗಿನ ರೈಲು ಸಂಪರ್ಕ ಯೋಜನೆಯನ್ನು ಉದ್ಘಾಟಿಸಿದರು. ಹಾಗೇ, ಭಾರತದ ಗ್ರ್ಯಾಂಟ್ ಅಸಿಸ್ಟನ್ಸ್ನಡಿ ನಿರ್ಮಾಣವಾದ ಪ್ರಯಾಣಿಕರ ರೈಲು ಸೇವೆಗೂ ಚಾಲನೆ ನೀಡಿದ್ದಾರೆ. ಅದಾದ ನಂತರ ನೇಪಾಳ ಪ್ರಧಾನಮಂತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನೂ ಭೇಟಿ ಮಾಡಿದ್ದಾರೆ.
ಇದನ್ನೂ ಓದಿ: ನೇಪಾಳ- ಭಾರತದ ಗಡಿ ದುರ್ಬಳಕೆಯಾಗಬಾರದು; ದೆಹಲಿಯಲ್ಲಿ ನೇಪಾಳದ ಪ್ರಧಾನಿ ಭೇಟಿ ವೇಳೆ ಮೋದಿ ಮನವಿ