ಯಾವುದೇ ಸಾಮಾಜಿಕ ಜಾಲತಾಣದ ಉದ್ಯೋಗಿಗಳಿಗೂ ಬೆದರಿಕೆ ಹಾಕಿಲ್ಲ; ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
ದೆಹಲಿ ಚಲೋ ಚಳವಳಿಗೆ ಸಂಬಂಧಿಸಿದಂತೆ ಟ್ವಿಟರ್ಗೆ ಸಾವಿರಕ್ಕೂ ಅಧಿಕ ಪೋಸ್ಟ್, ಹ್ಯಾಷ್ಟ್ಯಾಗ್ ಮತ್ತು ಖಾತೆಗಳನ್ನು ಅಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರದ ಸೂಚನೆಯನ್ನು ಟ್ವಿಟರ್ ತಕ್ಷಣವೇ ಒಪ್ಪಿಕೊಂಡಿರಲಿಲ್ಲ.
ದೆಹಲಿ: ಸರ್ಕಾರ ಟ್ವಿಟರ್ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳ ಉದ್ಯೋಗಿಗಳಿಗೆ ಬಂಧನದ ಬೆದರಿಕೆ ಒಡ್ಡಿಲ್ಲ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಸ್ಪಷ್ಟನೆ ನೀಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಫೇಸ್ಬುಕ್, ವಾಟ್ಸ್ಆಪ್ ಮತ್ತು ಟ್ವಿಟರ್ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಬೆದರಿಕೆ ಒಡ್ಡುತ್ತಿದೆ ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಸ್ಪಷ್ಟನೆ ನೀಡಿದೆ. ‘ನಾವು ಯಾವುದೇ ಸಾಮಾಜಿಕ ಜಾಲತಾಣಗಳ ಉದ್ಯೋಗಿಗಳಿಗೆ ಬೆದರಿಕೆ ಒಡ್ಡುವ ಅಥವಾ ಹೆದರಿಸುವ ಕಾರ್ಯಗಳನ್ನು ಮಾಡಿಲ್ಲ. ದೇಶದ ಸಾಂವಿಧಾನಿಕ ನಿಯಮಗಳಿಗೆ ಅನುಗುಣವಾಗಿ ಎಲ್ಲಾ ಸಾಮಾಜಿಕ ಮಾಧ್ಯಮ ಕಂಪೆನಿಗಳು ತಮ್ಮ ವಹಿವಾಟು ನಡೆಸಬೇಕು ಎಂದಷ್ಟೇ ತಿಳಿಸಿದ್ದೇವೆ ಎಂದು ಸಚಿವಾಲಯ ವಿವರಿಸಿದೆ.
ಈಗಾಗಲೇ ಸಂಸತ್ನಲ್ಲಿ ತಿಳಿಸಿದಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸರ್ಕಾರದ ಕ್ರಮಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಬಹುದು ಅಥವಾ ಟೀಕಿಸಬಹುದು. ಕೇವಲ ಸರ್ಕಾರದ ನಡೆಗಳನ್ನಷ್ಟೇ ಅಲ್ಲದೆ ಪ್ರಧಾನ ಮಂತ್ರಿಗಳನ್ನು ಸಹ ಟೀಕಿಸಿ ಪೋಸ್ಟ್ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ಹಿಂಸೆಗೆ ಒತ್ತು ನೀಡುವಂತಹ ಪೊಸ್ಟ್ಗಳನ್ನು ಬರೆಯುವಂತಿಲ್ಲ. ಜತೆಗೆ ಕೋಮು ಗಲಭೆಗೆ ಅವಕಾಶ ನೀಡಬಲ್ಲ ವಿಷಯಗಳನ್ನಾಗಲಿ, ಉಗ್ರ ಚಟುವಟಿಕೆಗಳ ಕುರಿತಾಗಲಿ ಪೋಸ್ಟ್ ಮಾಡುವಂತಿಲ್ಲ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ದೆಹಲಿ ಚಲೋ ಚಳವಳಿಗೆ ಸಂಬಂಧಿಸಿದಂತೆ ಟ್ವಿಟರ್ಗೆ ಸಾವಿರಕ್ಕೂ ಅಧಿಕ ಪೋಸ್ಟ್, ಹ್ಯಾಷ್ಟ್ಯಾಗ್ ಮತ್ತು ಖಾತೆಗಳನ್ನು ಅಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರದ ಸೂಚನೆಯನ್ನು ಟ್ವಿಟರ್ ತಕ್ಷಣವೇ ಒಪ್ಪಿಕೊಂಡಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಈ ಪ್ರಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಸುಳಿವು ದೊರೆತಾಗ ಕೇಂದ್ರ ಸರ್ಕಾರ ಸೂಚಿಸಿದ್ದ ಕಂಟೆಂಟ್ಗಳನ್ನು ಅಳಿಸಿಹಾಕಿತ್ತು ಟ್ವಿಟರ್.
ಟ್ವಿಟರ್ ಬಳಿ ಅಳಿಸಿಹಾಕುವಂತೆ ಕೋರಿದ್ದ ಪೋಸ್ಟ್ಗಳು ಯಾವುವು? ಪ್ರಧಾನಿ ನರೇಂದ್ರ ಮೋದಿಯವರು ರೈತರ ನರಮೇಧ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ (Modi Planning Farmer Genocide) ಎಂಬರ್ಥದ ಹ್ಯಾಷ್ಟ್ಯಾಗ್ಗಳನ್ನು ಬಳಸಿ ಮಾಡಲಾದ ಟ್ವೀಟ್ಗಳನ್ನು, ಅಂಥ ಟ್ವಿಟರ್ ಖಾತೆಗಳನ್ನು ತೆಗೆದುಹಾಕುವಂತೆ ಆದೇಶಿಸಿ ಕೇಂದ್ರ ಸರ್ಕಾರ ಟ್ವಿಟರ್ ಕಂಪನಿಗೆ ನೋಟಿಸ್ ನೀಡಿತ್ತು. ನಮ್ಮ ಈ ಸೂಚನೆಯನ್ನು ಅನುಸರಿಸದೆ ಇದ್ದರೆ ಕಾನೂನಿನಡಿ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿತ್ತು.
ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಶುರು ಮಾಡಿದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲೂ ಅದು ಟ್ರೆಂಡ್ ಆಗುತ್ತಿದೆ. ಅದರಲ್ಲೂ ಜ. 26ರ ಟ್ರ್ಯಾಕ್ಟರ್ ಜಾಥಾದಂದು ಹಿಂಸಾಚಾರ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ರೈತರ ನರಮೇಧ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂಬಂತಹ ಟ್ವೀಟ್ಗಳು ಹರಿದಾಡಿದ್ದವು. ಹಲವು ಟ್ವಿಟರ್ ಅಕೌಂಟ್ಗಳಿಂದ #ModiPlanningFarmerGenocide #FarmerGenocide ಎಂಬ ಹ್ಯಾಷ್ಟ್ಯಾಗ್ನಡಿ ಟ್ವೀಟ್, ರೀಟ್ವೀಟ್ ಆಗಿದ್ದವು.
ಇಂಥ ಹ್ಯಾಷ್ಟ್ಯಾಗ್ ಬಳಸಿದ 250ಕ್ಕೂ ಅಕೌಂಟ್ಗಳನ್ನು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬ್ಲಾಕ್ ಮಾಡಿದ್ದ ಟ್ವಿಟರ್ ಮತ್ತೆ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡು ಎಲ್ಲವನ್ನೂ ಅನ್ಬ್ಲಾಕ್ ಮಾಡಿದೆ. ಆದರೆ ಟ್ವಿಟರ್ ಅವಶ್ಯವಾಗಿ ನಮ್ಮ ಆದೇಶವನ್ನು ಪಾಲಿಸಬೇಕಾಗುತ್ತದೆ. ಇಲ್ಲದೆ ಹೋದರೆ ಕ್ರಮ ಅನಿವಾರ್ಯ ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು.
ಇದನ್ನೂ ಓದಿ: ಓಟಿಟಿ ಕಂಟೆಂಟ್ ಪ್ರಸಾರಕ್ಕೂ ಮುನ್ನ ಪರಿಶೀಲನೆ ಅಗತ್ಯ; ಸುಪ್ರೀಕೋರ್ಟ್