New Covid Variant: ಹೊರಗೆ ಓಡಾಡಬೇಡಿ; ಕೊವಿಡ್ ರೂಪಾಂತರದ ಹೆಚ್ಚಳದಿಂದಾಗಿ ವೃದ್ಧರಿಗೆ ಎಚ್ಚರಿಕೆ

| Updated By: ಸುಷ್ಮಾ ಚಕ್ರೆ

Updated on: Oct 21, 2022 | 11:21 AM

ಹಿರಿಯರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವವರು ಆದಷ್ಟೂ ಮನೆಯಲ್ಲಿಯೇ ಇರಬೇಕು. ಏಕೆಂದರೆ ಅನಾರೋಗ್ಯ ಹರಡುವ ಹೆಚ್ಚಿನ ಅಪಾಯವಿದೆ. ಅಲ್ಲದೆ, ಕೆಲವರಿಗೆ ಗಂಭೀರವಾದ ಸೋಂಕು ಕೂಡ ತಗುಲಬಹುದು ಎಂದು ಸೂಚಿಸಲಾಗಿದೆ.

New Covid Variant: ಹೊರಗೆ ಓಡಾಡಬೇಡಿ; ಕೊವಿಡ್ ರೂಪಾಂತರದ ಹೆಚ್ಚಳದಿಂದಾಗಿ ವೃದ್ಧರಿಗೆ ಎಚ್ಚರಿಕೆ
ಕೋವಿಡ್ 19
Follow us on

ನವದೆಹಲಿ: ಭಾರತದಲ್ಲಿ ಕೊವಿಡ್ ರೂಪಾಂತರಿಯ (COVID Variant) ಹೊಸ ಉಪ-ರೂಪಾಂತರಿಗಳು ಹೆಚ್ಚುತ್ತಿರುವುದರಿಂದ ಮತ್ತೆ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾಸ್ಕ್ (Face Mask) ಧರಿಸುವುದನ್ನು ಮತ್ತೆ ಕಡ್ಡಾಯಗೊಳಿಸುವ ಬಗ್ಗೆ ಆರೋಗ್ಯ ಸಚಿವಾಲಯ ಚರ್ಚೆ ನಡೆಸಿದೆ. ಇದರ ನಡುವೆ ದೆಹಲಿ ಏಮ್ಸ್​ ಮಾಜಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಭಾರತದಲ್ಲಿ ಹೆಚ್ಚು ಸಾಂಕ್ರಾಮಿಕವಾಗಿರುವ ಹೊಸ ಕೊವಿಡ್-19 ರೂಪಾಂತರದ ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ವೃದ್ಧರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ಹಿರಿಯರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವವರು ಆದಷ್ಟೂ ಮನೆಯಲ್ಲಿಯೇ ಇರಬೇಕು. ಏಕೆಂದರೆ ಅನಾರೋಗ್ಯ ಹರಡುವ ಹೆಚ್ಚಿನ ಅಪಾಯವಿದೆ. ಅಲ್ಲದೆ, ಕೆಲವರಿಗೆ ಗಂಭೀರವಾದ ಸೋಂಕು ಕೂಡ ತಗುಲಬಹುದು ಎಂದು ಸೂಚಿಸಲಾಗಿದೆ. ಅಕ್ಟೋಬರ್ 18ರಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಹಿರಿಯ ಆರೋಗ್ಯ ಅಧಿಕಾರಿಗಳ ನಡುವಿನ ಉನ್ನತ ಮಟ್ಟದ ಸಭೆಯ ನಂತರ ರಾಷ್ಟ್ರವ್ಯಾಪಿ ಮಾಸ್ಕ್ ಮತ್ತು ಕೊವಿಡ್ ನಿಯಮಗಳನ್ನು ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ: Omicron Variant: ಭಾರತದಲ್ಲಿ ಒಮಿಕ್ರಾನ್ ರೂಪಾಂತರಿ ಹೆಚ್ಚಳ; ಮತ್ತೆ ಮಾಸ್ಕ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧಾರ

ಪ್ರತಿಯೊಬ್ಬರೂ ಹೊರಗೆ ಹೋಗುವಾಗ ಮಾಸ್ಕ್ ಬಳಸಬೇಕು, ವಿಶೇಷವಾಗಿ ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಇಲ್ಲದೆ ಓಡಾಡಬಾರದು ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಹೊಸ ರೂಪಾಂತರಗಳು ಕಾಣಿಸಿಕೊಳ್ಳಬಹುದು. ಅಲ್ಲದೆ, ಅಸ್ತಿತ್ವದಲ್ಲಿರುವ ಕೊವಿಡ್ ಸೋಂಕು ಹೆಚ್ಚು ರೂಪಾಂತರಗೊಳ್ಳುವುದನ್ನು ಮುಂದುವರಿಸಬಹುದು ಎನ್ನಲಾಗಿದೆ.

ಭಾರತದ ರಾಜ್ಯಗಳ ಪೈಕಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣಗಳಲ್ಲಿ ಶೇ. 17.7ರಷ್ಟು ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಒಮಿಕ್ರಾನ್ ರೂಪಾಂತರದ ಹೊಸ ಉಪ-ರೂಪವಾದ XBB ಕೇರಳ ಸೇರಿದಂತೆ ದೇಶದ ಇತರ ಕೆಲವು ಭಾಗಗಳಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್-ಬಿಎ.2.3.20 ಮತ್ತು ಬಿಕ್ಯೂ.1 ರೂಪಾಂತರದ ಉಪ-ವೇರಿಯಂಟ್‌ಗಳು ಪತ್ತೆಯಾಗಿವೆ. ಗುಜರಾತ್​ನಲ್ಲಿ ಬಿಎಫ್​-7 ರೂಪಾಂತರಿ ಪತ್ತೆಯಾಗಿದೆ. ಇತರ ರೂಪಾಂತರಗಳಂತೆ ಓಮಿಕ್ರಾನ್ BF.7 ನ ರೋಗಲಕ್ಷಣಗಳು ಒಂದೇ ಆಗಿರುತ್ತವೆ, ಆದರೆ ಉಸಿರು ಕಟ್ಟುವಿಕೆ, ಗಂಟಲು ಕೆರೆತ,ಆಯಾಸ, ಕೆಮ್ಮು, ಶೀತ, ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೈಕೈ ನೋವು ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ